Bengaluru Second Airport: ಬೆಂಗಳೂರಿಗೆ ಮತ್ತೆ ಟಕ್ಕರ್ ಕೊಟ್ಟ ತಮಿಳುನಾಡು, ಬೆಂಗಳೂರು ಸಮೀಪ ವಿಮಾನ ನಿಲ್ದಾಣ ಪ್ರಕ್ರಿಯೆ ಜೋರು!
Bengaluru Second Airport: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಕ್ರಿಯೆಯು ವಿಳಂಬವಾಗುತ್ತಲ್ಲೇ ಇದೆ. ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರವು ಕಗ್ಗಂಟಾಗಿ ಉಳಿದಿದೆ. ಅಲ್ಲದೇ ವಾಯುಮಾರ್ಗದ ಒತ್ತಡ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿನ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಗತಿ ಕಾಣುತ್ತಿಲ್ಲ. ಇದರ ನಡುವೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಟಕ್ಕರ್ ಕೊಡುವುದಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರು ಹೊಂದಿಕೊಂಡಂತೆಯೇ ಇರುವ ತಮಿಳುನಾಡಿನ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡುವುದಕ್ಕೆ ಕಳೆದ ಒಂದು ವರ್ಷದಿಂದಲೂ ನೆರೆಯ ತಮಿಳುನಾಡು ಸರ್ಕಾರವು ಸರ್ಕಸ್ ಮಾಡುತ್ತಿದೆ. ಈ ರೀತಿ ಇರುವಾಗಲೇ ತಮಿಳುನಾಡು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಏರ್ಪೋರ್ಟ್‌ಗೆ ಸೈಟ್ ಕ್ಲಿಯರೆನ್ಸ್ ಕೋರಿ ಅಧಿಕೃತವಾಗಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದೆ. ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕಿಂತಲೂ ತಮಿಳುನಾಡು ಸರ್ಕಾರವು ಭಾರೀ ಮುಂದಿದೆ.

ತಮಿಳುನಾಡಿನಲ್ಲಿ ಎಲ್ಲಿ ಹೊಸ ವಿಮಾನ ನಿಲ್ದಾಣ ?
ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿ ತಮಿಳುನಾಡಿನ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರವು ಮುಂದಾಗಿದೆ. ಹೊಸೂರು ವಿಮಾನ ನಿಲ್ದಾಣವನ್ನು ಶೂಲಗಿರಿ ತಾಲ್ಲೂಕಿನ ಬೆರಿಗಾಯಿ ಮತ್ತು ಬಾಗಲೂರು ನಡುವೆ ಸ್ಥಾಪಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಇನ್ನು ಉದ್ದೇಶಿತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಾರ್ಷಿಕ 30 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.
ತಮಿಳುನಾಡಿನ ಲೆಕ್ಕಾಚಾರ ತಲೆಕೆಳಗೆ: ಇನ್ನು ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಡ್ಡಿಯಾಗಿರುವ ವಿಚಾರವೇ ತಮಿಳುನಾಡಿನ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಕಗ್ಗಂಟಾಗಿ ಉಳಿದಿದೆ. ತಮಿಳುನಾಡಿನ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ವಾಯುಪ್ರದೇಶ ನಿರ್ಬಂಧ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆಗಳನ್ನು ಸಡಿಲಿಸುವಂತೆ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ತಮಿಳುನಾಡು ಸರ್ಕಾರವು ಮನವಿ ಮಾಡಿದೆ.
ಈ ಹಿಂದೆ ಇದೇ ವರ್ಷ ಜೂನ್ ತಿಂಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರವು ಮನವಿ ಸಲ್ಲಿಸಿತ್ತು. ಆದರೆ, ಆಗ ರಕ್ಷಣಾ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿತ್ತು. ಎಚ್‌ಎಎಲ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹೊಸೂರಿನ ತನೇಜಾ ಏರೋಸ್ಪೇಸ್ ಆ್ಯಂಡ್ ಏವಿಯೇಷನ್ ಲಿ.(ತಾಲ್) ನಡುವೆ ವಾಯುಪ್ರದೇಶ ಅತಿಕ್ರಮಣದ ಆತಂಕ ಎದುರಾಗಿತ್ತು. ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹೊಸೂರು ವಿಮಾನ ನಿಲ್ದಾಣ ಎರಡೂ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಸದ್ಯ ಈ ವಿಚಾರ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಇದೀಗ ಹೊಸೂರು ವಿಮಾನ ನಿಲ್ದಾಣವು ಇತರೆ ವಿಮಾನ ನಿಲ್ದಾಣಗಳ ಉಪಸ್ಥಿತಿ ನಡುವೆಯೂ ಹೇಗೆ ಸುರಕ್ಷಿತವಾಗಿ ಕಾರ್ಯಾಚರಣೆ ಮಾಡಲು ಸಾಧ್ಯವಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ವಿಸ್ತೃತ ತಾಂತ್ರಿಕ ಮಾಹಿತಿಯನ್ನು ಒಳಗೊಂಡಿರುವ ಪ್ರಸ್ತಾಪವನ್ನು ಸಚಿವಾಲಯಕ್ಕೆ ಸರ್ಕಾರ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿ ಅನುಮೋದಿಸುವ ಕಾರ್ಯಕ್ಕೆ ಕನಿಷ್ಠ ಆರರಿಂದ ಎಂಟು ತಿಂಗಳು ಆಗುವ ಸಾಧ್ಯತೆ ಇದೆ. ಆದರೆ ಕರ್ನಾಟಕದ ವಿಮಾನ ನಿಲ್ದಾಣ ನಿರ್ಮಾಣ ವಿಚಾರವು ಇನ್ನೂ ಕಗ್ಗಂಟಾಗಿಯೇ ಉಳಿದಿದೆ.












Click it and Unblock the Notifications