ಬಂಗಾಳದಲ್ಲಿ ಬಿಜೆಪಿ: ಮಿಶನ್ ಅಮಿತ್ ಶಾ ಪರಿಪೂರ್ಣ -ಗೋಪಾಲಕೃಷ್ಣ ಕುಂಟಿನಿ ಬರಹ
ಜನಸಂಘದ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ತವರು ರಾಜ್ಯ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇದೀಗ ಪಟ್ಟಕ್ಕೇರುತ್ತಿದೆ. ಬಿಜೆಪಿ ಗೆಲುವಿನ ಹತ್ತಿರದಲ್ಲಿದೆ. 30 ವರ್ಷ ಕಾಂಗ್ರೆಸ್+, 36 ವರ್ಷ ಮಾರ್ಕಿಸ್ಟ್, 15 ವರ್ಷ ಮಮತಾ ಬ್ಯಾನರ್ಜಿ ಆಳಿದ ಬಳಿಕ ಗಡಿನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ.
2001 ರಲ್ಲಿ ಸೊನ್ನೆ, 2006 ಸೊನ್ನೆ, 2011 ರಲ್ಲಿ ಮತ್ತೆ ಸೊನ್ನೆ, 2016 ರಲ್ಲಿ 3, 2021 ರಲ್ಲಿ 77, ಈಗ 180 ದಾಟುವ ನಿರೀಕ್ಷೆ. ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರಯಾಣದ ಇಣುಕುನೋಟ.ಈ ವಿಜಯ ಯಾತ್ರೆಯ ರೂವಾರಿ ಅಮಿತ್ ಶಾ. ಕಳೆದ 20 ವರ್ಷಗಳಲ್ಲಿ ಒಂದೇ ಒಂದು ಬಾರಿಯೂ ವಿದೇಶ ಪ್ರಯಾಣ ಮಾಡದ ಅಮಿತ್ ಶಾ ಹಲವಾರು ತಿಂಗಳುಗಳಿಂದ ಪಶ್ಚಿಮ ಬಂಗಾಳಕ್ಕೆ ಫೋಕಸ್ ಮಾಡಿದ್ದರು. ಎಪ್ರಿಲ್‌ನಲ್ಲಿ 15 ದಿನ ಅಲ್ಲಿಯೇ ಇದ್ದರು.

2 ವರ್ಷದ ಹಸುಗೂಡು vs 77 ವರ್ಷದ ವೃದ್ಧ
ತಮಿಳು ನಟ ಜೋಸೆಫ್ ವಿಜಯ್ ಅಭಿಮಾನಿಗಳ ಸಂಘವಾದ 'ವಿಜಯ್ ಮಕ್ಕಳ ಇಯಕ್ಕಂ' 2021 ರಲ್ಲಿ ತಮಿಳುನಾಡಿನ 169 ಪಂಚಾಯತ್‌ಗಳ ಪೈಕಿ 129 ರಲ್ಲಿ ಗೆಲುವು ಸಾಧಿಸಿತ್ತು. ಗೆದ್ದಿತು. ಇನ್ನು ಪಾರ್ಟಿ ಕಟ್ಟಬಹುದು ಎಂದು ವಿಜಯ್ ಗೆ ಖಾತ್ರಿಯಾಯಿತು. 2024 ರಲ್ಲಿ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಝಗಂ ಕಟ್ಟಿದರು. ಪಕ್ಷ ಹುಟ್ಟಿ ಎರಡೇ ಎರಡು ವರ್ಷಗಳಾಗಿವೆ. 77 ವರ್ಷ ವಯಸ್ಸಿನ ಡಿಎಂಕೆ ಮತ್ತು 54 ವರ್ಷ ಪ್ರಾಯದ ಎಡಿಎಂಕೆಯನ್ನು ಮಡಿಚಿ ರಾಜ್ಯವನ್ನು ಆಳುವ ಮಟ್ಟಕ್ಕೆ ಹತ್ತಿರ ಹತ್ತಿರ ಬಂದಿದೆ. ಪ್ರಜಾಪ್ರಭುತ್ವದ ಚೆಲುವೇ ಅದು. ಯಾರೂ ಏನು ಬೇಕಾದರೂ ಆಗಬಹುದು, ಹೋಗಬಹುದು.
ಅಸ್ಸಾಂನ ಹಿಮಂತ್ ಬಿಸ್ವಾ ಯೋಚನಾ ವೈಖರಿಯಿದು
ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ನಿಮಿತ್ತ ಬಂದಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಮಂಗಳೂರಿನ ಹೋಟೇಲೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ನಮ್ಮ ಇಬ್ಬರು ಪತ್ರಕರ್ತ ಮಿತ್ರರು ಅವರ ಭೇಟಿಗೆ ಹೋಗಿದ್ದರು. ಈ ವೇಳೆ ಅಲ್ಲಿ ಕರ್ನಾಟಕದ ಒಬ್ಬರು ಹಾಲಿ, ಮತ್ತೊಬ್ಬರು ಮಾಜಿ ಎಂಎಲ್‌ಸಿಗಳಿದ್ದರು. ಮಾತನಾಡುತ್ತಾ ಮಾಜಿ ಎಂಎಲ್‌ಸಿ ಮಂಗಳೂರಿನ ಚಿತ್ರಣ ಕೊಡುತ್ತಾ ಇಲ್ಲಿ ಹತ್ತು ಮೆಡಿಕಲ್ ಕಾಲೇಜುಗಳಿವೆ ಎಂದು ಹೇಳಿ ಬೀಗಿದರು.
'ಖಾಸಗಿಯೋ, ಸರಕಾರಿಯೋ' ಎಂದು ಹಿಮಂತ್ ಬಿಸ್ವಾ ಕೇಳಿದರು. 'ಎಲ್ಲಾ ಖಾಸಗಿ' ಎಂದರು ಮಾಜಿ ಎಂಎಲ್‌ಸಿ. 'ಸರಕಾರಿ ಒಂದೂ ಇಲ್ಲವೇ' ಎಂದು ಮತ್ತೆ ಹೇಮಂತ್ ಬಿಸ್ವಾ ಪ್ರಶ್ನೆ. 'ಇಲ್ಲ' ಎಂದರು ಹಾಲಿ ಎಂಎಲ್‌ಸಿ.
ಆಗ ಮುಖಸಿಂಡರಿಸಿಕೊಂಡ ಹಿಮಂತ್ ಬಿಸ್ವಾಸ್ ಕ್ಷಣಕಾಲ ಸುಮ್ಮನಾದರು. ಆಮೇಲೆ ಹೇಳಿದರು, 'ಅಸ್ಸಾಂನಲ್ಲಿ ನೋಡಿ, ಒಂದೇ ಒಂದು ಖಾಸಗಿ ಮೆಡಿಕಲ್ ಕಾಲೇಜು ಇಲ್ಲ. ನಮ್ಮಲ್ಲಿ 2026 ರ ಹೊತ್ತಿಗೆ ಕನಿಷ್ಠ 16 ಸರಕಾರಿ ಮೆಡಿಕಲ್ ಕಾಲೇಜು ಇರುತ್ತವೆ.
ಗೂಗಲ್ ಮಾಡಿ ನೋಡಿ' ಎಂದಿದ್ದರು. ಈಗ ಆತ ಹೇಳಿದಂತೆ ಅಲ್ಲಿ ಅಷ್ಟು ಮೆಡಿಕಲ್ ಕಾಲೇಜುಗಳು ಇವೆ.












Click it and Unblock the Notifications