ಮೋದಿ ಕುರಿತ ಬಿಬಿಸಿ ಡಾಕ್ಯೂಮೆಂಟರಿಯಲ್ಲಿ ಪ್ರೊಪಗಂಡವಿದೆ ಎಂದ ಭಾರತ: ಏನಿದು ವಿವಾದ? ಬ್ಯಾನ್ ಬಿಬಿಸಿ ಅಂದದ್ದೇಕೆ ನೆಟ್ಟಿಗರು?
ನವದೆಹಲಿ, ಜನವರಿ 19: ಪ್ರಧಾನಿ ಮೋದಿ ಕುರಿತು ಬಿಬಿಸಿ ಡಾಕ್ಯೂಮೆಂಟರಿವೊಂದನ್ನು ಪ್ರಸಾರ ಮಾಡಿದೆ. ಇದು ಭಾರತ ಸರ್ಕಾರದ ಆಕ್ರೋಶಕ್ಕೆ ಗುರಿಯಾಗಿದೆ.
ಬಿಬಿಸಿ ಡಾಕ್ಯೂಮೆಂಟರಿಯು ಪಕ್ಷಪಾತದಿಂದ ಕೂಡಿದ ಪ್ರಚಾರದ ತುಣುಕಾಗಿದೆ ಎಂದು ಭಾರತ ಸರ್ಕಾರ ಹೇಳಿದೆ.
'ಸಾಕ್ಷ್ಯಚಿತ್ರವು, ಅದನ್ನು ನಿರ್ಮಿಸಿದ ಸಂಸ್ಥೆಯ ಪ್ರತಿಬಿಂಬವಾಗಿದೆ. ಇದು ನಿರ್ದಿಷ್ಟ ವ್ಯಕ್ತಿಯೊಬ್ಬರನ್ನು ಅಪಖ್ಯಾತಿಗೆ ಈಡು ಮಾಡುವ ನಿರೂಪಣೆಯನ್ನು ಹೊಂದಿದೆ. ಇದೊಂದು ವಿನ್ಯಾಸಗೊಳಿಸಲಾದ ಪ್ರಚಾರದ ತುಣುಕು ಎಂದು ನಾವು ಭಾವಿಸುತ್ತೇವೆ. ಇದರಲ್ಲಿ ಪಕ್ಷಪಾತ, ವಸ್ತುನಿಷ್ಠತೆಯ ಕೊರತೆ ಮತ್ತು ಮುಂದುವರಿದ ವಸಾಹತುಶಾಹಿ ಮನಸ್ಥಿತಿಯು ಸ್ಪಷ್ಟವಾಗಿ ಗೋಚರಿಸುತ್ತದೆ. ಅಂತಹ ಡಾಕ್ಯೂಮೆಂಟರಿಯನ್ನು ನಂಬಲು ಸಾಧ್ಯವಿಲ್ಲ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಬಿಬಿಸಿಯ ಎರಡು ಭಾಗಗಳ 'India: The Modi Question' ಎಂಬ ಸರಣಿಯು ಕೇಂದ್ರ ಸರ್ಕಾರವನ್ನು ಕೆರಳಿಸಿದೆ.
'ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ನಡುವಿನ ದ್ವೇಷದ ಒಂದು ನೋಟ.. ಸಾವಿರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ 2002 ರ ಗಲಭೆಗಳಲ್ಲಿ ಮೋದಿ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು' ಎಂದು ಡಾಕ್ಯೂಮೆಂಟರಿಯ ವಿವರಣೆಗಾರ ಹೇಳುತ್ತಾನೆ.
ಗಲಭೆ ಭುಗಿಲೆದ್ದ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿ ಅವರು ಯಾವುದೇ ತಪ್ಪು ಮಾಡಿಲ್ಲ ಎಂಬುದಕ್ಕೆ ಸುಪ್ರೀಂ ಕೋರ್ಟ್ ನೇಮಿಸಿದ ತನಿಖೆಯಲ್ಲಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ವಿಶೇಷ ತನಿಖಾ ತಂಡವು ಗಲಭೆಯ ಒಂದು ದಶಕದ ನಂತರ ವರದಿಯಲ್ಲಿ, 'ಯಾವುದೇ ವಿಚಾರಣೆಗೆ ಒಳಪಡುವ ಸಾಕ್ಷ್ಯಗಳಿಲ್ಲ' ಎಂದು ಉಲ್ಲೇಖಿಸಿ ಪ್ರಧಾನಿ ಮೋದಿಯನ್ನು ದೋಷಮುಕ್ತಗೊಳಿಸಿದೆ. ಕಳೆದ ವರ್ಷ ಜೂನ್‌ನಲ್ಲಿ, ಸುಪ್ರೀಂ ಕೋರ್ಟ್ ಪಿಎಂ ಮೋದಿಗೆ ಕ್ಲಿಯರೆನ್ಸ್ ಅನ್ನು ನೀಡಿದೆ' ಎಂದು ಬಾಗ್ಚಿ ಹೇಳಿದ್ದಾರೆ.

ಬಿಬಿಸಿ ಡಾಕ್ಯೂಮೆಂಟರಿಯನ್ನು ಭಾರತದಲ್ಲಿ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. 'ಇದು ಅದರ ಹಿಂದಿನ ಕಾರ್ಯಸೂಚಿಯ ಬಗ್ಗೆ ತಿಳಿಸುತ್ತದೆ. ಬಿಬಿಸಿಯ ಈ ನಡೆಯು ನಮಗೆ ಆಶ್ಚರ್ಯವನ್ನುಂಟು ಮಾಡಿದೆ' ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಯುಕೆ ಹೌಸ್ ಆಫ್ ಲಾರ್ಡ್ಸ್‌ನ ಸದಸ್ಯರಾದ ಲಾರ್ಡ್ ರಾಮಿ ರೇಂಜರ್ ಅವರು ಬಿಬಿಸಿಯನ್ನು ಪಕ್ಷಪಾತದ ವರದಿಗಾರಿಕೆಯನ್ನು ಆರೋಪಿಸಿದವರಲ್ಲಿ ಒಬ್ಬರು.
ಅನೇಕ ಭಾರತೀಯ ಮೂಲದ ಟ್ವಿಟ್ಟರ್ ಬಳಕೆದಾರರು ಬಿಬಿಸಿಯನ್ನು ಭಾರತದಲ್ಲಿ ಬ್ಯಾನ್ ಮಾಡಬೇಕೆಂದೂ ಒತ್ತಾಯಿಸಿದ್ದಾರೆ. ಬಿಬಿಸಿ 1943 ರ ಬಂಗಾಳದ ಕ್ಷಾಮದ ಬಗ್ಗೆ ಸರಣಿಯನ್ನು ನಿರ್ಮಿಸಲಿ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಸುಮಾರು ಮೂರು ಮಿಲಿಯನ್ ಜನರು ಸತ್ತರು ಎಂದು ತಿಳಿಸಿದ್ದಾರೆ.

'UK: The Charchil Question' ಎಂಬ ಬಂಗಾಳದ ಕ್ಷಾಮದ ಬಗ್ಗೆ ಸರಣಿಯನ್ನು ನಡೆಸಬೇಕು ಎಂದು ಟ್ವೀಟಿಗರೊಬ್ಬರು ಮಾಡಿದ್ದಾರೆ.












Click it and Unblock the Notifications