Mamata Banerjee: ಬಾಂಗ್ಲಾದೇಶದ ಅಸಹಾಯಕರು ನಮ್ಮ ಮನೆ ಬಾಗಿಲಿಗೆ ಬಂದರೆ ಆಶ್ರಯ ನೀಡುತ್ತೇವೆ ಎಂದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಜುಲೈ. 21: ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಜನರು ನಮ್ಮ ಮನೆ ಬಾಗಿಲು ತಟ್ಟಿದರೆ ತೃಣಮೂಲ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಅವರಿಗೆ ಆಶ್ರಯ ನೀಡಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಹೇಳಿದ್ದಾರೆ.
"ಬಾಂಗ್ಲಾದೇಶ ಬೇರೆ ದೇಶವಾಗಿರುವುದರಿಂದ ನಾನು ಬಾಂಗ್ಲಾದೇಶದ ಬಗ್ಗೆ ಏನನ್ನೂ ಮಾತನಾಡಲಾರೆ. ಭಾರತ ಸರ್ಕಾರ ಅದರ ಬಗ್ಗೆ ಮಾತನಾಡುತ್ತದೆ. ಆದರೆ ಬಾಂಗ್ಲಾದೇಶದಿಂದ ಬಂದ ಅಸಹಾಯಕರು ಬಂಗಾಳದ ಬಾಗಿಲು ತಟ್ಟಿದರೆ, ನಾವು ಅವರಿಗೆ ಆಶ್ರಯ ನೀಡುತ್ತೇವೆ. ನೆರೆಹೊರೆಯವರು ನಿರಾಶ್ರಿತರನ್ನು ಗೌರವಿಸಿ ಎಂದು ವಿಶ್ವಸಂಸ್ಥೆಯ ನಿರ್ಣಯವಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ಭಾರೀ ಮಳೆಯ ನಡುವೆಯೂ ತೃಣಮೂಲ ಕಾಂಗ್ರೆಸ್‌ನ ಮೆಗಾ 'ಹುತಾತ್ಮರ ದಿನಾಚರಣೆ' ರ್ಯಾಲಿಯನ್ನು ಉದ್ದೇಶಿಸಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮಾತನಾಡುತ್ತಿದ್ದರು. "ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಸಂಬಂಧಿಕರು ಸಿಲುಕಿರುವ ಬಂಗಾಳ ನಿವಾಸಿಗಳಿಗೆ ನಾನು ಎಲ್ಲಾ ಸಹಕಾರದ ಭರವಸೆ ನೀಡುತ್ತೇನೆ" ಎಂದು ಮಾಹಿತಿ ನೀಡಿದ್ದಾರೆ.
ಬಾಂಗ್ಲಾದೇಶದ ಅಧಿಕಾರಿಗಳು ದೇಶದಾದ್ಯಂತ ಕಟ್ಟುನಿಟ್ಟಾದ ಕರ್ಫ್ಯೂ ವಿಧಿಸಿದ್ದಾರೆ. ಮಿಲಿಟರಿ ಸಿಬ್ಬಂದಿ ರಾಜಧಾನಿ ಢಾಕಾದ ಕೆಲವು ಭಾಗಗಳಲ್ಲಿ ಗಸ್ತು ತಿರುಗಿದ್ದಾರೆ. ಸರ್ಕಾರಿ ಉದ್ಯೋಗಗಳ ಹಂಚಿಕೆಗೆ ಸಂಬಂಧಿಸಿದಂತೆ ರಾಷ್ಟ್ರದ ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಇದು ನಡೆದಿದೆ. ಘಟನೆಯಲ್ಲಿ 115ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ಜನ ಗಾಯಗೊಂಡಿದ್ದಾರೆ.
'ಹುತಾತ್ಮರ ದಿನಾಚರಣೆ' ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಉತ್ತರ ಪ್ರದೇಶದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆಗಾಗಿ ಮಮತಾ ಬ್ಯಾನರ್ಜಿ ಶ್ಲಾಘಿಸಿದ್ದಾರೆ. "ಕೇಂದ್ರದಲ್ಲಿ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ, ಇದು ಸ್ಥಿರ ಸರ್ಕಾರವಲ್ಲ ಮತ್ತು ಶೀಘ್ರದಲ್ಲೇ ಪತನವಾಗಲಿದೆ" ಎಂದು ವುಶ್ವಾಸ ವ್ಯಕ್ತಪಡಿಸಿದ್ದಾರೆ,

"ನೀವು ಯುಪಿಯಲ್ಲಿ ಆಡಿದ ಉತ್ತಮ ಆಟದಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಾಜೀನಾಮೆ ನೀಡುವಂತೆ ಮಾಡಬೇಕಿತ್ತು. ಆದರೆ ನಾಚಿಕೆಯಿಲ್ಲದ ಸರ್ಕಾರವು ಏಜೆನ್ಸಿಗಳು ಮತ್ತು ಇತರ ವಿಧಾನಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಇನ್ನೂ ಅಧಿಕಾರದಲ್ಲಿ ಮುಂದುವರಿಯುತ್ತಿದೆ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಈ ವೇಳೆ ಮೆರವಣಿಗೆಯಲ್ಲಿ ಮಾತನಾಡಿದ ಸಮಾಜವಾದಿ ನಾಯಕ ಅಖಿಲೇಶ್ ಯಾದವ್, "ಬಂಗಾಳದ ಜನರು ಬಿಜೆಪಿಯೊಂದಿಗೆ ಹೋರಾಡಿ ಅವರನ್ನು ಹಿಂದೆ ಬಿಟ್ಟಿದ್ದಾರೆ. ಉತ್ತರ ಪ್ರದೇಶದಲ್ಲೂ ಅದೇ ಆಯಿತು. ದೆಹಲಿಯಲ್ಲಿ ಸರ್ಕಾರದಲ್ಲಿ ಕುಳಿತವರು ಕೆಲವೇ ದಿನಗಳು ಮಾತ್ರ ಅಧಿಕಾರದಲ್ಲಿದ್ದಾರೆ. ಆ ಸರ್ಕಾರವು ಹೆಚ್ಚು ದಿನ ಉಳಿಯುವುದಿಲ್ಲ, ಅದು ಶೀಘ್ರದಲ್ಲೇ ಪತನವಾಗಲಿದೆ" ಎಂದು ತಿಳಿಸಿದ್ದಾರೆ.












Click it and Unblock the Notifications