ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗುತ್ತಿದೆ ಯುಪಿ, ಉಳಿದ ಕೆಲಸಗಳಿಗೆ ಚುರುಕು
ಲಕ್ನೋ, ಮೇ. 24: ಮುಂದಿನ ವರ್ಷ ಜನವರಿಯಲ್ಲಿ ರಾಮ ಮಂದಿರದ ಉದ್ಘಾಟನೆಯಾಗಲಿದ್ದು, ಉತ್ತರ ಪ್ರದೇಶ ಅದ್ಧೂರಿಯಾಗಿ ಸಿದ್ಧವಾಗುತ್ತಿದೆ. ಹೀಗಾಗಿ ಅಯೋಧ್ಯೆಯ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದ ವಿಸ್ತರಣೆ ಸೇರಿದಂತೆ ಮೂಲಸೌಕರ್ಯ ಕಾರ್ಯಗಳನ್ನು ಉತ್ತರ ಪ್ರದೇಶ ಸರ್ಕಾರ ತ್ವರಿತಗೊಳಿಸಿದೆ ಎಂದು ಹೇಳಿಕೆಯೊಂದು ತಿಳಿಸಿದೆ.
ಸಹದತ್‌ಗಂಜ್‌ನಿಂದ ನಯಾ ಘಾಟ್‌ವರೆಗಿನ 13 ಕಿಮೀ ರಸ್ತೆಯ ರಾಮ್ ಪಥ್‌ನ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ರಾಮಜಾನಕಿ ಪಥ ಮತ್ತು ಭಕ್ತಿ ಪಥ ನಿರ್ಮಾಣದ ರೂಪುರೇಷೆಯೂ ಸಿದ್ಧವಾಗಿದೆ. ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣವನ್ನು ಸಹ ವಿಸ್ತರಿಸಲಾಗುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳು ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

ರಾಮ ಜನ್ಮಭೂಮಿ ಪಥದ ಅಗಲ 30 ಮೀಟರ್ ಮತ್ತು ಭಕ್ತಿ ಪಥದ ಅಗಲ 14 ಮೀಟರ್ ಆಗಿದೆ. ಈ ರಸ್ತೆ ಕಾರಿಡಾರ್‌ಗಳು ಶ್ರೀರಾಮ ಜನ್ಮಭೂಮಿ ಮತ್ತು ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭಕ್ತರ ಸಂಚಾರಕ್ಕೆ ಅನುಕೂಲವಾಗುವುದರಿಂದ ಇವುಗಳ ಕೆಲಸ ಮುಗಿಸುವುದು ಪ್ರಮುಖವಾಗಿವೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮಮಂದಿರ ಉದ್ಘಾಟನೆಗೆ ಬರುವಂತೆ ದೇಶದ ಜನರನ್ನು ಆಹ್ವಾನಿಸಿದ್ದಾರೆ . ಇದರ ಜೊತೆಗೆ ವಿವಿಧ ಕಾಮಗಾರಿಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಯೋಧ್ಯೆಯನ್ನು ಅಭಿವೃದ್ಧಿಪಡಿಸುವ ಸರ್ಕಾರದ ಯೋಜನೆಗೆ, ಅಂಗಡಿ ಮಾಲೀಕರು ಯಾವುದೇ ಪ್ರತಿರೋಧವಿಲ್ಲದೆ, ಭವ್ಯ ಮಂದಿರದ ನಿರ್ಮಾಣ ಮತ್ತು ಅದರ ಇತರ ಸೌಲಭ್ಯಗಳಿಗಾಗಿ ತಮ್ಮ ಅಂಗಡಿಗಳ ಭೂಮಿಯನ್ನು ನೀಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಯೋಜನೆಯಡಿ ಪರಿಹಾರ ವಿತರಣೆಯಲ್ಲಿ ಯಾವುದೇ ಅವ್ಯವಹಾರ ನಡೆದಿರುವ ಬಗ್ಗೆ ದೂರು ಬಂದಿಲ್ಲ. ಇಲ್ಲಿಂದ ಸ್ಥಳ ಖಾಲಿ ಮಾಡಿಸಿದವರಿಗೆ ಹೊಸದಾಗಿ ಅಭಿವೃದ್ಧಿಪಡಿಸಿದ ಸಂಕೀರ್ಣಗಳಲ್ಲಿ ಅಂಗಡಿಗಳನ್ನು ಮಂಜೂರು ಮಾಡಲಾಗಿದೆ. ಅನೇಕ ಅಂಗಡಿ ಮಾಲೀಕರನ್ನು ಅವರ ಹಳೆಯ ಸ್ಥಳಗಳಿಗೆ ಪುನರ್ವಸತಿ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಮಮಂದಿರ ನಿರ್ಮಾಣದ ಮೊದಲ ಹಂತವನ್ನು ಡಿಸೆಂಬರ್ 30 ರೊಳಗೆ ಪೂರ್ಣಗೊಳಿಸಲು ದೇವಸ್ಥಾನದ ಟ್ರಸ್ಟ್ ನಿರ್ಧರಿಸಿದೆ. ಮೊದಲ ಹಂತದಲ್ಲಿ, ನೆಲ ಮಹಡಿಯಲ್ಲಿ ಐದು ಮಂಟಪಗಳಿರಲಿದ್ದು, ಅವುಗಳಲ್ಲಿ ಅತ್ಯಂತ ಪ್ರಮುಖವಾದ ಗರ್ಭಗುಡಿಯಲ್ಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಐದು ಮಂಟಪಗಳ ನಿರ್ಮಾಣದಲ್ಲಿ ಸುಮಾರು 160 ಕಂಬಗಳನ್ನು ಬಳಸಲಾಗಿದೆ. ದೇವಾಲಯದ ಕೆಳಗಿನ ಸ್ತಂಭದಲ್ಲಿ ಶ್ರೀರಾಮನ ಸಂಕ್ಷಿಪ್ತ ವಿವರಣೆಯನ್ನು ಪ್ರಾರಂಭಿಸಲಾಗುವುದು. ಈ ಎಲ್ಲಾ ಕಾಮಗಾರಿಗಳು ಡಿಸೆಂಬರ್ 30 ರೊಳಗೆ ಪೂರ್ಣಗೊಳ್ಳಲಿವೆ .












Click it and Unblock the Notifications