ಅಯೋಧ್ಯೆಯಲ್ಲಿ ಸೋತಿದ್ದು ಬಿಜೆಪಿ ಮಾತ್ರವಲ್ಲ... ಅದು ಹಿಂದುತ್ವಕ್ಕೆ ಆದ ದೊಡ್ಡ ಸೋಲು!
ಲಕ್ನೋ, ಜೂನ್. 07: ಈ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ದೊಡ್ಡ ಆಘಾತ ಅನುಭವಿಸಿದೆ. ಗೆಲ್ಲಲೇ ಬೇಕಿದ್ದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಆಘಾತಕಾರಿ ಫಲಿತಾಂಶ ಪಡೆದಿದೆ. ಅದರಲ್ಲೂ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಹೊಂದಿರುವ ಫೈಜಾಬಾದ್‌ನಲ್ಲಿ ಸೋಲು ಬಿಜೆಪಿ ಸೋಲು ಮಾತ್ರವಲ್ಲ ಹಿಂದುತ್ವಕ್ಕೆ ಕೊಟ್ಟ ದೊಡ್ಡ ಪೆಟ್ಟು!
ತನ್ನದೆ ಸವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಬಿಜೆಪಿ ಕನಸು ನುಚ್ಚುನೂರಾಗಿದೆ. ಮಿತ್ರಪಕ್ಷಗಳ ಬೆಂಬಲದ ಮೇಲೆ ಸರ್ಕಾರ ರಚನೆಗೆ ಸಿದ್ಧವಾಗಿದ್ದರೂ ಕೂಡ, ಅಯೋಧ್ಯೆ (ಫೈಜಾಬಾದ್)ನಲ್ಲಿ ಪಕ್ಷದ ಆಘಾತಕಾರಿ ಸೋಲು ಎಲ್ಲರನ್ನೂ ಆತಂಕಕ್ಕೆ ದೂಡಿದೆ. ಇದು ಬಿಜೆಪಿಗೆ ಆದ ಸೋಲು, ಅಭ್ಯರ್ಥಿಗೆ ಆದ ಸೋಲು ಅಲ್ಲ ಅದು ಬಿಜೆಪಿಯ ಹಿಂದುತ್ವ ಸಿದ್ಧಾಂತಕ್ಕೆ ಆದ ಹೊಡೆತ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಅಯೋಧ್ಯೆಯಲ್ಲಿ ಕೈ ಹಿಡಿಯದ ಶ್ರೀರಾಮ!
ಈ ವರ್ಷದ ಆರಂಭದಲ್ಲಿ ಅಯೋಧ್ಯೆಯ ಭವ್ಯ ಮಂದಿರದಲ್ಲಿ ರಾಮಲಲ್ಲಾನ ಹೊಸ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭ ನಡೆದಿದೆ. ಇದಾದ ಕೇವಲ ನಾಲ್ಕು ತಿಂಗಳ ನಂತರ ಅದೇ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿದೆ. ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಅವರು ಬಿಜೆಪಿಯ ಲಲ್ಲು ಸಿಂಗ್ ಅವರನ್ನು ಬರೋಬ್ಬರಿ 54,500 ಮತಗಳಿಂದ ಸೋಲಿಸಿದ್ದಾರೆ.
ಅಯೋಧ್ಯೆಯಲ್ಲಿ ಬಿಜೆಪಿಯ ಆಘಾತಕಾರಿ ಹಿನ್ನಡೆಗೆ ಹಲವಾರು ಕಾರಣಗಳಿವೆ. ಒಬಿಸಿ ಮತ್ತು ದಲಿತರನ್ನು ದೂರವಿಡುವುದು, ಗೆದ್ದ ಅಖಿಲೇಶ್ ಯಾದವ್ ಜಾತಿ ಸಮೀಕರಣ, ಅಯೋಧ್ಯೆ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಂಡಿರುವ ತಮ್ಮ ಭೂಮಿಗೆ ಪರಿಹಾರವನ್ನು ಪಡೆಯದ ಸ್ಥಳೀಯರಲ್ಲಿ ಅಸಮಾಧಾನ ಸೇರಿದಂತೆ ಹಲವು ಕಾರಣಗಳಿವೆ.
ಇದಲ್ಲದೆ, ಸಮಾಜವಾದಿ ಪಕ್ಷದ ಮತಬ್ಯಾಂಕ್ ಆಗಿರುವ ಹಲವು ಕ್ಷೇತ್ರಗಳಲ್ಲಿ ಈ ಫೈಜಾಬಾದ್ ಕೂಡ ಒಂದಾಗಿದೆ. ಅಲ್ಲದೆ, ಸಮಾಜವಾದಿ ಪಕ್ಷಕ್ಕೆ ಹೆಚ್ಚು ಮತಗಳನ್ನು ತುಂಬಿಸಿದ್ದು, ಬಿಜೆಪಿ ನಾಯಕರ ಸಂವಿಧಾನ ಬದಲಾವಣೆಯ ಹೇಳಿಕೆಗಳು. ಬಿಜೆಪಿ ಬಹುಮತ ಪಡೆದರೆ ಸಂವಿಧಾನ ಬದಲಾಗುತ್ತದೆ ಎಂಬ ಭಯ ಒಬಿಸಿ, ದಲಿತರು ಮತ್ತು ಮುಸ್ಲಿಂ ಸಮುದಾಯದಲ್ಲಿ ಹೆಚ್ಚಾಗಿದ್ದು.
ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದ ಲಲ್ಲು ಸಿಂಗ್!
ನಿಮಗೆ ಗೊತ್ತಿರಲಿ. ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನಗಳು ಬಂದರೆ ಸಂವಿಧಾನವನ್ನೇ ಬದಲಾಯಿಸಲಾಗುವುದು ಎಂದು ಮೊದಲು ಹೇಳಿದ್ದು ಅಯೋಧ್ಯೆಯ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್. ಅದರ ನಂತರ, ಸಮಾಜವಾದಿ ಪಕ್ಷವು ಈ ವಿಷಯವನ್ನು ಬಿಡಲೇ ಇಲ್ಲ. ಎಲ್ಲ ಆಪ್ರಚಾರಗಳನ್ನು ಇದನ್ನು ಹೇಳುತ್ತಲೆ ಹೋಯಿತು.
ಬಿಜೆಪಿ ಸಂವಿಧಾನವನ್ನು ಬದಲಾಯಿಸುವ ಮೂಲಕ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಿಗೆ ನೀಡಲಾದ ಮೀಸಲಾತಿಯನ್ನು ತೆಗೆದುಹಾಕುತ್ತದೆ ಎಂದು ಆರೋಪಿಸಿತು. ಇದು ಎಷ್ಟು ದೊಡ್ಡ ವಿವಾದವಾಯಿತು ಎಂದರೆ, ಬಿಜೆಪಿಯು ಚುನಾವಣೆಯುದ್ದಕ್ಕೂ ಅದರ ಬಗ್ಗೆ ಸ್ಪಷ್ಟೀಕರಣಗಳನ್ನು ನೀಡುತ್ತಲೇ ಇತ್ತು. ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುತ್ತಲೆ ಇತ್ತು.

ಸಕ್ಸಸ್ ಆದ ಅಖಿಲೇಶ್ ಯಾದವ್ ಜಾತಿ ಸಮೀಕರಣ
ಫೈಜಾಬಾದ್‌ನಲ್ಲಿನ ಜಾತಿ ಸಮೀಕರಣವೇ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಅಯೋಧ್ಯೆಯು ಅತಿ ಹೆಚ್ಚು OBC ಮತದಾರರನ್ನು ಹೊಂದಿದೆ, ಕುರ್ಮಿಗಳು ಮತ್ತು ಯಾದವರು ದೊಡ್ಡ ಪಂಗಡವಿದೆ. ಒಬಿಸಿಗಳು 22% ಮತದಾರರು ಮತ್ತು ದಲಿತರು 21% ರಷ್ಟಿದ್ದಾರೆ.
ದಲಿತರ ಪೈಕಿ ಪಾಸಿ ಸಮುದಾಯದವರು ಗರಿಷ್ಠ ಮತದಾರರನ್ನು ಹೊಂದಿದ್ದಾರೆ. ವಿಜೇತ ಅಭ್ಯರ್ಥಿ ಅವಧೇಶ್ ಪ್ರಸಾದ್ ಪಾಸಿ ಸಮುದಾಯದಿಂದ ಬಂದವರು. 18% ಮುಸ್ಲಿಂ ಮತದಾರರಿದ್ದಾರೆ. ಒಟ್ಟಾರೆಯಾಗಿ, ಈ ಮೂರು ಸಮುದಾಯಗಳು ಮತದಾರರಲ್ಲಿ 50% ರಷ್ಟಿದ್ದಾರೆ. ಈ ಬಾರಿ, ಫೈಜಾಬಾದ್‌ನಲ್ಲಿ ಸಮಾಜವಾದಿ ಪಕ್ಷಕ್ಕೆ ಸ್ಮರಣೀಯ ಗೆಲುವು ನೀಡಲು ಮೂರು ಸಮುದಾಯಗಳು ಒಬಿಸಿಗಳು, ದಲಿತರು, ಮುಸ್ಲಿಮರು.
ಅಯೋಧ್ಯೆ ಅಭಿವೃದ್ಧಿಗಾಗಿ ಜಮೀನು ಕೊಟ್ಟು ಪರಿಹಾರ ಪಡೆಯದ ಸ್ಥಳೀಯರು!
ಇದಲ್ಲದೇ, ಅಯೋಧ್ಯೆಯ ಅಭಿವೃದ್ಧಿಗಾಗಿ ತಮ್ಮ ಜಮೀನುಗಳನ್ನು ಕೊಟ್ಟು ಅದಕ್ಕೆ ಪರಿಹಾರವನ್ನು ಪಡೆಯದ ಸ್ಥಳೀಯರಲ್ಲಿ ವ್ಯಾಪಕ ಅಸಮಾಧಾನವಿದೆ. ಅಯೋಧ್ಯೆ ಅಭಿವೃದ್ಧಿಯಾಗುತ್ತಿರುವಾಗ, ರಾಮಮಂದಿರ ನಿರ್ಮಾಣವಾಗುತ್ತಿದ್ದರೂ ದೂರದ ಹಳ್ಳಿಗಳ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಅಯೋಧ್ಯೆಯ ಜನರು ದೊಡ್ಡ ದೊಡ್ಡ ಯೋಜನೆಗಳಿಂದ ತಮ್ಮ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೊರಗಿನಿಂದ ಬರುವ ಉದ್ಯಮಿಗಳು ಲಾಭ ಪಡೆಯುತ್ತಿದ್ದಾರೆ ಎಂಬ ಚರ್ಚೆ ಸ್ಥಳೀಯರಲ್ಲಿದೆ.
ಬಿಜೆಪಿಯು ಅಯೋಧ್ಯೆಯನ್ನು ಮಾತ್ರ ಕಳೆದುಕೊಂಡಿಲ್ಲ. ಇದರ ಅಕ್ಕ ಪಕ್ಕದ ಎಲ್ಲಾ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಬಸ್ತಿ, ಅಂಬೇಡ್ಕರ್‌ನಗರ, ಬಾರಾಬಂಕಿ ಕೂಡ ಬಿಜೆಪಿ ಪಾಲಿಗಿಲ್ಲ. ಅಯೋಧ್ಯೆ ಫಲಿತಾಂಶವನ್ನು ಬಿಜೆಪಿಯ ಸೋಲು ಮಾತ್ರವಲ್ಲ, ಅವರ ಹಿಂದುತ್ವ ಸಿದ್ಧಾಂತದ ಸೋಲು ಎಂದು ನೋಡಲಾಗುತ್ತಿದೆ.
1984 ರಿಂದ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ತಲಾ ಎರಡು ಬಾರಿ ಫೈಜಾಬಾದ್ ಸ್ಥಾನವನ್ನು ಗೆದ್ದಿವೆ. 1991ರ ನಂತರ ಅಯೋಧ್ಯೆಯಲ್ಲಿ ಬಿಜೆಪಿ ಪ್ರಾಮುಖ್ಯತೆ ಪಡೆಯಿತು. 1989, 1998 ಮತ್ತು 2004 ರಲ್ಲಿ ಸಮಾಜವಾದಿ ಪಕ್ಷದ ಮಿತ್ರ ಸೇನ್ ಯಾದವ್ ಇಲ್ಲಿ ಚುನಾಯಿತರಾಗಿದ್ದರೆ, ಬಿಜೆಪಿಯ ಕುರ್ಮಿ ಮತ್ತು ಹಿಂದುತ್ವದ ಪೈಯರ್ ಬ್ರಾಂಡ್ ವಿನಯ್ ಕಟಿಯಾರ್ ಅವರು ಕ್ಷೇತ್ರದಿಂದ ಮೂರು ಬಾರಿ ಗೆದ್ದರು.
2004 ರಲ್ಲಿ, ಬಿಜೆಪಿ ತನ್ನ ಒಬಿಸಿ ಮುಖ ವಿನಯ್ ಕಟಿಯಾರ್ ಅವರನ್ನು ತೆಗೆದುಹಾಕಿ ಲಲ್ಲು ಸಿಂಗ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿತು. ಲಲ್ಲು ಸಿಂಗ್ ಅವರು 2014 ಮತ್ತು 2019 ರಲ್ಲಿ ಸತತ ಎರಡು ಬಾರಿ ಈ ಸ್ಥಾನವನ್ನು ಗೆದ್ದಿದ್ದರು. ಆದರೆ, ಈ ಬಾರಿ ಬಿಜೆಪಿಯ ಅತೀಯಾದ ಆತ್ಮವಿಶ್ವಾಸ, ಬೇಡದ ಹೇಳಿಕೆಗಳು, ಅಭಿವೃದ್ಧಿ ಹೆಸರಲ್ಲಿ ಮಾಡಿದ ಯಡವಟ್ಟುಗಳು ಅವರಿಗೆ ಸೋಲಿನ ರುಚಿ ತೋರಿಸಿದೆ.












Click it and Unblock the Notifications