Breaking; ಬೀದಿಬದಿ ವ್ಯಾಪಾರಿಗಳಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ
ನವದೆಹಲಿ, ಏಪ್ರಿಲ್ 27; ಕೇಂದ್ರ ಸರ್ಕಾರ ಬೀದಿಬದಿ ವ್ಯಾಪಾರಿಗಳಿಗೆ ಸಿಹಿಸುದ್ದಿ ನೀಡಿದೆ. ಆತ್ಮನಿರ್ಬರ ನಿಧಿಯನ್ನು 2024ರ ಡಿಸೆಂಬರ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ಕೊಡಲಾಗಿದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆತ್ಮನಿರ್ಬರ ನಿಧಿಯನ್ನು ವಿಸ್ತರಣೆ ಮಾಡಲು ಅನುಮೋದನೆ ನೀಡಲಾಗಿದೆ. ಸಭೆಯ ಬಳಿಕ ಸಚಿವ ಅನುರಾಗ್ ಠಾಕೂರ್ ಈ ಕುರಿತು ಮಾಹಿತಿ ನೀಡಿದರು.

ಈ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ. ಸಾಲವನ್ನು ಬಡ್ಡಿ ರಹಿತವಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ನೀಡಲಾಗುತ್ತದೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ಈ ಯೋಜನೆ ಜಾರಿಗೆ ತರಲಾಗಿತ್ತು.
ಆತ್ಮನಿರ್ಬರ ನಿಧಿ (ಪಿಎಂ - ಸ್ವನಿಧಿ) ಯೋಜನೆ ಬೀದಿಬದಿ ವ್ಯಾಪಾರಿಗಳಿಗಾಗಿಯೇ ಜಾರಿಗೊಳಿಸಲಾಗಿದೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದ ಬೀದಿ ಬದಿ ವ್ಯಾಪಾರಿಗಳು ನಗರಗಳಿಗೆ ವಾಪಸ್ ಬಂದ ನಂತರ ಅವರು ಮತ್ತೆ ವ್ಯಾಪಾರ ಆರಂಭಿಸಲು ಅನುಕೂಲ ಮಾಡಿ ಕೊಡುವುದು ಯೋಜನೆ ಉದ್ದೇಶ.
ಈ ಸಾಲವನ್ನು ಪಡೆಯಲು ಸರಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವ್ಯಾಪಾರಿಗಳು ಯಾವುದೇ ಸಾಮಾನ್ಯ ಸೇವಾ ಕೇಂದ್ರ ಅಥವಾ ಮುನ್ಸಿಪಲ್ ಕಚೇರಿ ಅಥವಾ ಬ್ಯಾಂಕುಗಳಿಗೆ ಹೋಗಿ ಅಲ್ಲಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಅಪ್‌ಲೋಡ್ ಮಾಡಬಹುದು.
ಬ್ಯಾಂಕುಗಳು ವ್ಯಾಪಾರಿಗಳ ಮನೆ ಬಾಗಿಲಿಗೆ ತೆರಳಿ ಸಾಲವನ್ನು ನೀಡಿ, ಅವರು ತಮ್ಮ ವಹಿವಾಟವನ್ನು ಪುನರಾರಂಭಿಸಲು ನೆರವಾಗುತ್ತವೆ. ಪ್ರಧಾನಿ ನರೇಂದ್ರ ಮೋದಿ, "ಬೀದಿ ಬದಿ ವ್ಯಾಪಾರಿಗಳು ಬ್ಯಾಂಕುಗಳ ಒಳಗೆ ಹೋಗದಂತಹ ಕಾಲವೊಂದಿತ್ತು. ಆದರೆ ಇಂದು ಬ್ಯಾಂಕುಗಳೇ ಅವರ ಮನೆ ಬಾಗಿಲಿಗೆ ಧಾವಿಸುತ್ತಿವೆ" ಎಂದು ಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.












Click it and Unblock the Notifications