Atishi Marlena: ದೆಹಲಿಗೆ ಹೊಸ ಮುಖ್ಯಮಂತ್ರಿ ಆಯ್ಕೆ, ಇವರೇ ನೋಡಿ
ಬೆಂಗಳೂರು, ಸೆಪ್ಟಂಬರ್ 17: ರಾಷ್ಟ್ರ ರಾಜಧಾನಿ ನವದೆಹಲಿಗೆ ಎಎಪಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಬಳಿಕ ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಇಲ್ಲಿನ ಕಲ್ಕಾಜಿ ಕ್ಷೇತ್ರದ ಶಾಸಕಿ ಅತಿಶಿ ಮರ್ಲೆನಾ ಅವರು ದೆಹಲಿ ನೂತನ ಮುಖ್ಯಮಂತ್ರಿ ಯಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಸಿಎಂ ರೇಸಿನಲ್ಲಿದ್ದ ಇತರ ನಾಯಕರಿಗೆ ನಿರಾಸೆಯಾಗಿದೆ.
ಇಂದು ಶಾಸನ ಸಭೆಯಲ್ಲಿ ದೆಹಲಿ ಮುಂದಿನ ಸಿಎಂ ಯಾರೆಂಬುದು ನಿರ್ಧಾರವಾಗಿದೆ. ಇಂದು ಸಂಜೆ ಅರವಿಂದ್ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಇದೇ ವೇಳೆ ಸಚಿವೆ ಅತಿಶಿ ಮರ್ಲೆನಾ ಅವರು ಹೊಸ ಸಿಎಂ ಆಗಿ ಅಧಿಕೃತ ಘೋಷಣೆ ಆಗಲಿದೆ.

ಅತಿಶಿ ಸಿಎಂ ಹುದ್ದೆಗೆ ಸಮರ್ಥೆ ಹೇಗೆ?
ದೆಹಲಿ ಕಲ್ಕಾಜಿ ಕ್ಷೇತ್ರದ ಶಾಸಕಿ ಆಗಿದ್ದು, ಶಿಕ್ಷಣ ಇಲಾಖೆ, ಲೋಕೋಪಯೋಗಿ (PWD), ದೆಹಲಿ ಪ್ರವಾಸೋಧ್ಯಮ ಇಲಾಖೆ ಹೀಗೆ ಪ್ರಮುಖ ಖಾತೆಗಳನ್ನು ಆತಿಶಿ ಮರ್ಲೆನಾ ಸಿಂಗ್ ಅವರು ನಿರ್ವಹಿಸುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಜೈಲಿಗೆ ಹೋದಾಗ, ಮನೀಶ್ ಸಿಸೋಡಿಯಾ ಅವರು ಇಲ್ಲದಿದ್ದಾಗ ಅವರ ಅನುಪಸ್ಥಿತಿಯಲ್ಲಿ ಸರ್ಕಾರಿ ಕೆಲಸಗಳನ್ನು ಸಮರ್ಥವಾಗಿ ಇದೇ ಆತಿಶಿ ಅವರೇ ನೋಡಿಕೊಂಡಿದ್ದರು.
ಇನ್ನೂ ಪ್ರತಿಭಟನೆಯಂತಹ ಕೆಲವು ಅಹಿತಕರ ಘಟನೆಗಳು ಸರ್ಕಾರದ ವಿರುದ್ಧ ನಡೆದಾಗ ಟ್ರಬಲ್ ಶೂಟರ್ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಈ ಮೂಲಕ ಪಕ್ಷದಲ್ಲಿ ತಮ್ಮದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಅರವಿಂದ್ ಕೇಜ್ರಿವಾಲ್ ಬಳಿಕ ದೆಹಲಿ ನೂತನ ಮುಖ್ಯಮಂತ್ರಿ ರೇಸಿನಲ್ಲಿ ಇವರ ಹೆಸರು ಮೊದಲು ಕೇಳಿ ಬಂದಿತ್ತು.
ಇಂದು ಸಂಜೆ ಕೇಜ್ರಿವಾಲ್ ರಾಜೀನಾಮೆ
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಆರು ತಿಂಗಳ ಹಿಂದೆ ಬಂಧಿಸಲಾಗಿತ್ತು. ಜಾರಿ ನಿರ್ದೇಶನಾಲಯದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಿತ್ತು. ಆದರೆ ಸಿಬಿಐ ಪ್ರಕರಣದಲ್ಲಿ ಸಿಕ್ಕಿರಲಿಲ್ಲ.
ಮೊನ್ನೆಯಷ್ಟೇ ಸಿಬಿಐ ಪ್ರಕರಣದಲ್ಲೂ ಸಹ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಆರು ತಿಂಗಳ ಸೆರವಾಸ ಅಂತ್ಯಗೊಂಡಿದ್ದು, ಅವರು ಜೈಲಿನಿಂದ ಬಿಡುಗಡೆ ಆದರು. ಜೈಲಿನಿಂದ ಬಂದ ಕೂಡಲೇ ಕೇಜ್ರಿವಾಲ್ ಇನ್ನೆರಡು ದಿನದಲ್ಲಿ ರಾಜೀನಾಮೆ ಕೊಡುವುದಾಗಿ ಘೋಷಿಸಿದರು. ಇದು ಅನೇಕರಲ್ಲಿ ಅಚ್ಚರಿ ಮೂಡಲು ಕಾರಣವಾಯಿತು.
ಮುಂದಿನ ಐದು ತಿಂಗಳಲ್ಲಿ ದೆಹಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಈ ಕಾರಣದಿಂದ ರಾಜೀನಾಮೆ ಘೋಷಿಸಿದ್ದಾರೆ. ಕಾರಣ, ಜೈಲಿಗೆ ಹೋಗಿ ಬಂದರೂ ಸಹಿತ ಅಧಿಕಾರಕ್ಕಾಗಿ ಸಿಎಂ ಸ್ಥಾನದಲ್ಲಿ ಕೂತಿದ್ದಾರೆ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲು ಇಷ್ಟವಿಲ್ಲದಿರುವುದು. ಅಲ್ಲದೇ ಈ ಬೆಳವಣಿಗೆಗಳು ಮುಂದಿನ ಚುನಾವಣೆ ವೇಳೆ ಪಕ್ಷದ ಗೆಲುವಿಗೆ, ಪಕ್ಷದ ವರ್ಚಸ್ಸಿಗೆ ತೊಂದರೆ ನೀಡದಂತೆ ವಹಿಸಿರುವ ಎಚ್ಚರಿಕೆಯ ಭಾಗವಾಗಿ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಇಂದೇ ಆತಿಶಿ ಪದಗ್ರಹಣ ಸಾಧ್ಯತೆ
ಇಂದು ಸಂಜೆ 4.30ಕ್ಕೆ ಅವರು ಲೆಫ್ಟಿನೆಂಟ್ ಗವರ್ನರ್ ಅವರ ಬಳಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಇದಾಗುತ್ತಿದ್ದಂತೆ ಅತಿಶಿ ಮರ್ಲೆನಾ ಸಿಂಗ್ ಅವರೇ ದೆಹಲಿ ಮುಂದಿನ ಸಿಎಂ ಎಂದು ಅಧಿಕೃತ ಘೋಷಣೆ ಆಗಲಿದೆ. ಸಾಧ್ಯವಾದರೆ ಇಂದೆ ಅವರ ಪದಗ್ರಹಣ ನಡೆಯಲಿದೆ ಎಂದು ರಾಜಕೀಯ ಮೂಲಗಳು ಮಾಹಿತಿ ನೀಡಿವೆ.












Click it and Unblock the Notifications