ಇನ್ಮುಂದೆ ರಾಜಕಾರಣಿಗಳ, ಸಿನಿಮಾ ಸ್ಟಾರ್‌ಗಳ ಭವಿಷ್ಯ ಹೇಳಲ್ಲ ಎಂದ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ!
ಅಮರಾವತಿ, ಜೂನ್. 04: ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಮತ್ತೆ ಆಡಳಿತ ನಡೆಸಲಿದೆ ಎಂದು ಭವಿಷ್ಯ ನುಡಿದಿದ್ದ ಜನಪ್ರಿಯ ಜ್ಯೋತಿಷಿ ವೇಣು ಸ್ವಾಮಿ ವಿರುದ್ಧ ಟ್ರೋಲ್ ಗ್ರೂಪ್ ಮುಗಿಬಿದ್ದಿದೆ. ಸುಳ್ಳು ಭವಿಷ್ಯ ಹೇಳುತ್ತಾರೆ ಎಂದು ಅವರನ್ನು ಸಕತ್ ಟ್ರೋಲ್ ಮಾಡಲಾಗುತ್ತಿದೆ. ಹೀಗಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಆಡಳಿತಾರೂಢ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಹೀನಾಯ ಸೋಲು ಕಂಡಿದ್ದಾರೆ. ಟಿಡಿಪಿ+ಜನಸೇನಾ ಮೈತ್ರಿಕೂಟವು ಭರ್ಜರಿ ಜಯ ಗಳಿಸಿದೆ. ಹೀಗಾಗಿ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ
ತೆಲಂಗಾಣದಲ್ಲಿ ಕೆಸಿಆರ್ ಮತ್ತು ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಗೆಲುವು ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಯಾವುದನ್ನೂ ಕೂಡ ಸರಿಯಾಗಿ ಊಹಿಸಲು ವಿಫಲರಾಗಿರುವ ಜ್ಯೋತಿಷಿ ವೇಣು ಸ್ವಾಮಿ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ರುಬ್ಬಲಾಗುತ್ತಿದೆ. ಸೆಲಬ್ರಿಟಿಗಳ ವೈಯಕ್ತಿಕ ವಿಷಯಗಳಲ್ಲಿ ಭವಿಷ್ಯ ಹೇಳುತ್ತಿದ್ದ ಅವರು ಈಗ ಟ್ರೋಲ್ ಆಗುತ್ತಿದ್ದಾರೆ.

ಮತ ಎಣಿಕೆಯ ದಿನ ಬೆಳಗ್ಗೆ ಕೂಡ ಒಂದೆರಡು ಮಾಧ್ಯಮಗಳ ಜೊತೆ ಮಾತನಾಡಿದ ಜ್ಯೋತಿಷಿ ವೇಣು ಸ್ವಾಮಿ, ವೈಎಸ್ ಜಗನ್ ಭರ್ಜರಿ ಬಹುಮತದಿಂದ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಆದರೆ,ಆರಂಭಿಕ ಫಲಿತಾಂಶಗಳೇ ಇದಕ್ಕೆ ವಿರುದ್ಧವಾಗಿದ್ದವು. ಇದನ್ನು ಜ್ಯೋತಿಷಿ ಸಾಕಷ್ಟು ಗಂಭೀರವಾಗಿ ಪರಿಗಣಿಸಿರುವಂತಿದೆ. ಹೀಗಾಗಿಯೇ ಸ್ಪಷ್ಟನೆ ನೀಡಿದ್ದು, ತಾವು ಇನ್ನು ಮುಂದೆ ರಾಜಕೀಯ ವ್ಯಕ್ತಿ, ಸಿನಿಮಾ ನಟರ ಭವಿಷ್ಯ ಹೇಳಲ್ಲ ಎಂದಿದ್ದಾರೆ.
"ಕೇಂದ್ರದಲ್ಲಿ ನರೇಂದ್ರ ಮೋದಿಯವರ ಪ್ರಭಾವ ಕಳೆದುಹೋಗುತ್ತದೆ ಮತ್ತು ವೈಎಸ್ ಜಗನ್ ಆಂಧ್ರಪ್ರದೇಶದಲ್ಲಿ ಭಾರಿ ಬಹುಮತದೊಂದಿಗೆ ಗೆಲ್ಲುತ್ತಾರೆ ಎಂದು ನಾನು ಭವಿಷ್ಯ ನುಡಿದಿದ್ದೇನೆ. ಮೋದಿಯವರ ವಿಷಯದಲ್ಲಿ ಅದು ಕೆಲಸ ಮಾಡಿದರೂ, ಜಗನ್ ತಪ್ಪಾಗಿದೆ. ನಾನು ನನ್ನ ಭವಿಷ್ಯದಲ್ಲಿ ತಪ್ಪು ಹೇಳಿರುವುದರಿಂದ ಕ್ಷಮೆ ಕೇಳುತ್ತೇನೆ. ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ಇಂದಿನಿಂದ ನಾನು ರಾಜಕೀಯ ಮತ್ತು ಚಲನಚಿತ್ರ ತಾರೆಯರಿಗೆ ಸಂಬಂಧಿಸಿದ ಯಾವುದೇ ಭವಿಷ್ಯವನ್ನು ನೀಡುವುದಿಲ್ಲ" ಎಂದು ವೇಣು ಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.
ಈ ಹಿಂದೆ, ವೇಣು ಸ್ವಾಮಿ ಅವರು ಪ್ರಭಾಸ್ ಅವರ ಸಮಯ ಮುಗಿದಿದೆ. ಅವರ ಸಲಾರ್ ದೊಡ್ಡ ಪ್ಲಾಪ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದರು. ನಂತರ ಚಲನಚಿತ್ರವು ಬಿಡುಗಡೆಯಾದ ನಂತರ ಗಲ್ಲಾಪೆಟ್ಟಿಗೆಯಲ್ಲಿ 700 ಕೋಟಿ ರೂಪಾಯಿ ಗಳಿಸಿತು.












Click it and Unblock the Notifications