ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಬಿಗ್ ಶಾಕ್: ಉತ್ತರದ ರಾಜ್ಯಗಳಲ್ಲಿ ನಿಲ್ಲುತ್ತಲೇ ಇಲ್ಲ ಮೋದಿ ಅಲೆ
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಭಾರೀ ಆಘಾತವಾಗಿದೆ. ಹಿಂದಿ ಭಾಷಿಗ ರಾಜ್ಯಗಳಲ್ಲಿ ಬಿಜೆಪಿ ಭಾರೀ ಗೆಲುವನ್ನು ಸಾಧಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದಿದ್ದ ಕಾಂಗ್ರೆಸ್ ಮೂರೂ ರಾಜ್ಯಗಳಲ್ಲಿ ಸರ್ಕಾರ ರಚಿಸಿತ್ತು. ಆದರೆ, ಕೆಲವು ನಾಯಕರು ಬಿಜೆಪಿಗೆ ಪಕ್ಷಾಂತರಗೊಂಡ ನಂತರ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡಿತು.
ಸದ್ಯಕ್ಕೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಮೂರೂ ರಾಜ್ಯಗಳಲ್ಲಿ ಬಿಜೆಪಿ ಮುಂದಿದೆ. ಯಾವುದೇ ಪಕ್ಷವು ಸರ್ಕಾರವನ್ನು ಪುನರಾವರ್ತಿಸದ ರಾಜಸ್ಥಾನದಲ್ಲಿ ಕೇಸರಿ ಪಕ್ಷಕ್ಕೆ ಉತ್ತಮ ಬೆಂಬಲ ಸಿಕ್ಕಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿಯೂ ಕಾಂಗ್ರೆಸ್ ಭಾರೀ ಸೋಲು ಅನುಭವಿಸುವತ್ತ ದಾಪುಗಾಲಿಟ್ಟಿದೆ.

ಕೆಲವು ತಿಂಗಳ ಹಿಂದೆ, ಬಹುತೇಕ ಸಮೀಕ್ಷೆಗಳು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ ಎಂದು ಊಹಿಸಿದ್ದವು. ಮಧ್ಯಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ನಾಯಕತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿವೆ ಎಂದು ಹೇಳಿದ್ದವು. 20 ವರ್ಷಗಳ ಕಾಲ ಅಧಿಕಾರದಲ್ಲಿರುವ ಬಿಜೆಪಿ ಒಟ್ಟು 230 ಸ್ಥಾನಗಳ ಪೈಕಿ 156 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ.
ಛತ್ತೀಸ್‌ಗಢದ ಫಲಿತಾಂಶವು ಕಾಂಗ್ರೆಸ್‌ಗೆ ಹೆಚ್ಚು ಆಘಾತವನ್ನುಂಟು ಮಾಡಿದೆ. ಅಲ್ಲಿ ಕೇಸರಿ ಪಕ್ಷವು 50 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಛತ್ತೀಸ್‌ಗಢದಲ್ಲಿ 2018ರಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರವನ್ನು ಹಿಡಿದಿತ್ತು. ಈ ಹಿಂದೆ ಬಿಜೆಪಿ 15 ವರ್ಷಗಳ ಕಾಲ ಆಡಳಿತ ನಡೆಸಿತ್ತು. ಆದರೆ ಕೇವಲ ಐದು ವರ್ಷಗಳಲ್ಲಿ ರಾಜ್ಯವನ್ನು ಕಳೆದುಕೊಂಡಿರುವುದು ಮುಖ್ಯಮಂತ್ರಿ ಭೂಪೇಶ್ ಬಘೇಲ್‌ಗೆ ಮಾತ್ರವಲ್ಲದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ದೊಡ್ಡ ಹೊಡೆತವಾಗಿದೆ.

ಛತ್ತೀಸ್‌ಗಢದಲ್ಲಿ ಭೂಪೇಶ್ ಬಘೇಲ್ ಮತ್ತು ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಅವರಿಗೆ ಕಾಂಗ್ರೆಸ್ ನೇತೃತ್ವ ವಹಿಸಿತ್ತು. ಮಧ್ಯಪ್ರದೇಶದಲ್ಲಿ ಕಳೆದ ಬಾರಿ ಅಧಿಕಾರ ಹಿಡಿದಿದ್ದ ಕಮಲ್‌ನಾಥ್ ಅವರು ಜ್ಯೋತಿರಾದಿತ್ಯ ಸಿಂದಿಯಾ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು. ಆ ನಂತರ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು.
ಛತ್ತೀಸ್‌ಗಢ ಕಾಂಗ್ರೆಸ್‌ನಲ್ಲಿಯೂ ಬಂಡಾಯದ ಬೆಂಕಿ ಹೊತ್ತಿಕೊಂಡಿತು. ಅಲ್ಲಿ ಬಘೇಲ್ ಮತ್ತು ಟಿಎಸ್ ಸಿಂಗ್ ದೇವ್ ನಡುವಿನ ಆಂತರಿಕ ಕಲಹ ಮುಂದುವರಿಯಿತು. ಅಧಿಕಾರದ ಕಲಹವು ಕಾಂಗ್ರೆಸ್‌ಗೆ ಈಗ ನಷ್ಟವನ್ನು ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ.

ರಾಜಸ್ಥಾನದಲ್ಲಿಯೂ ಕಾಂಗ್ರೆಸ್ ಆಂತರಿಕ ಕಲಹಕ್ಕೆ ತುತ್ತಾಯಿತು. ಸಚಿನ್ ಪೈಲಟ್ ಹಾಗೂ ಅಶೋಕ್ ಗೆಹ್ಲೋಟ್ ನಡುವೆ ನಿರಂತರ ಭಿನ್ನಾಭಿಪ್ರಾಯಗಳು ಕಂಡುಬಂದವು. ಇದು ಕಾಂಗ್ರೆಸ್ಸಿನ ಉನ್ನತ ನಾಯಕತ್ವಕ್ಕೆ ತಲೆನೋವಾಗಿತ್ತು. ರಾಜಸ್ಥಾನದ 199 ಸ್ಥಾನಗಳ ಪೈಕಿ ಬಿಜೆಪಿಯು 113 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 70 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಇದೇ ಮುನ್ನಡೆ ಮುಂದುವರಿದರೆ ಕೇಸರಿ ಪಕ್ಷವು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಸರ್ಕಾರ ರಚಿಸಲಿದೆ. ಇದು 2024ರ ಮೆಗಾ ಫೈನಲ್‌ಗೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರೀ ಉತ್ತೇಜನ ನೀಡಲಿದೆ. ಎಲ್ಲಾ ಮೂರು ರಾಜ್ಯಗಳು ಅಂದರೆ ಛತ್ತೀಸ್‌ಗಢ (11), ರಾಜಸ್ಥಾನ (25) ಮತ್ತು ಮಧ್ಯಪ್ರದೇಶಗಳು (29) ಒಟ್ಟಾಗಿ 65 ಲೋಕಸಭಾ ಸ್ಥಾನಗಳನ್ನು ಹೊಂದಿವೆ. ಇದರಿಂದ ಕಾಂಗ್ರೆಸ್ ಭಾರೀ ಹಿನ್ನೆಡೆಯಾದಂತಾಗಿದೆ.












Click it and Unblock the Notifications