Assam: ಪತ್ನಿ, ಆಕೆಯ ಪೋಷಕರನ್ನು ಕೊಂದು 9 ತಿಂಗಳ ಮಗುವಿನೊಂದಿಗೆ ಪೊಲೀಸ್ ಠಾಣೆಗೆ ಬಂದ ವ್ಯಕ್ತಿ!
ಗುವಾಹಟಿ, ಜುಲೈ 26: ಕೋವಿಡ್‌ನ ಲಾಕ್‌ಡೌನ್‌ನಲ್ಲಿ ಹುಟ್ಟಿಕೊಂಡ ಪ್ರೇಮಕಥೆಯೊಂದು ದುರಂತ ಅಂತ್ಯಕಂಡ ಘಟನೆ ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ನಜೀಬುರ್ ರೆಹಮಾನ್ ಬೋರಾ ಮತ್ತು 24 ವರ್ಷದ ಸಂಘಮಿತ್ರ ಘೋಷ್ ನಡುವಿನ ದಾಂಪತ್ಯ ಈ ಸೋಮವಾರದಂದು ದುರಂತ ಅಂತ್ಯ ಕಂಡಿದೆ.
ನಜೀಬುರ್ ರೆಹಮಾನ್ ಬೋರಾ ತನ್ನ ಹೆಂಡತಿ ಹಾಗೂ ಪೋಷಕರನ್ನು ಕೊಂದು ಒಂಬತ್ತು ತಿಂಗಳ ಮಗುವಿನೊಂದಿಗೆ ಪೊಲೀಸ್ ಠಾಣೆಗೆ ಹೋಗಿರುವುದು ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ನಜೀಬುರ್ ಮತ್ತು ಸಂಘಮಿತ್ರ ಜೂನ್ 2020 ರ ಕೊರೊನಾ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಆಗಿದ್ದಾಗ ಫೇಸ್‌ಬುಕ್‌ನಲ್ಲಿ ಸ್ನೇಹಿತರಾದರು. ತಿಂಗಳೊಳಗೆ ಸ್ನೇಹ ಪ್ರೀತಿಗೆ ತಿರುಗಿತು ಮತ್ತು ಅದೇ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರೂ ಕೋಲ್ಕತ್ತಾಗೆ ಓಡಿಹೋದರು.

ಆದರೆ ಸಂಘಮಿತ್ರಳ ಪೋಷಕರು ಅವಳನ್ನು ಹುಡುಕಿ ಮನೆಗೆ ಕರೆತಂದರು. ಆದರೆ ಅವಳು ಈಗಾಗಲೇ ಕೋಲ್ಕತ್ತಾ ನ್ಯಾಯಾಲಯದಲ್ಲಿ ನಾಜಿಬುರ್ ಅನ್ನು ಮದುವೆಯಾಗಿದ್ದಳು.
ಈ ವಿಷಯ ತಿಳಿದು ಕೋಪಗೊಂಡ ಬಳಿಕ ಸಂಘಮಿತ್ರಾ ಅವರ ಪೋಷಕರಾದ ಸಂಜೀವ್ ಘೋಷ್ ಮತ್ತು ಜುನು ಘೋಷ್ ಅವರು ಕಳ್ಳತನದ ಆರೋಪ ಹೊರಿಸಿ ಪೊಲೀಸ್ ದೂರು ದಾಖಲಿಸಿದರು. ಇದಕ್ಕಾಗಿ ಸಂಘಮಿತ್ರನನ್ನು ಬಂಧಿಸಲಾಯಿತು ಮತ್ತು ನ್ಯಾಯಾಂಗ ಬಂಧನದಲ್ಲಿ ಒಂದು ತಿಂಗಳ ಕಾಲ ಆಕೆ ಕಳೆದಳು. ಜಾಮೀನು ಪಡೆದ ನಂತರ ಆಕೆ ತನ್ನ ಪೋಷಕರ ಮನೆಗೆ ಮರಳಿದ್ದಳು.
ಜನವರಿ 2022ರಲ್ಲಿ ಮತ್ತೆ ಸಂಘಮಿತ್ರ ಮತ್ತು ನಜೀಬುರ್ ಮತ್ತೆ ಓಡಿಹೋದರು. ಈ ಬಾರಿ ಅವರು ಐದು ತಿಂಗಳ ಕಾಲ ಚೆನ್ನೈನಲ್ಲಿ ವಾಸಿಸಿದರು. ಆಗಸ್ಟ್‌ನಲ್ಲಿ ದಂಪತಿ ಗೋಲಾಘಾಟ್‌ಗೆ ಹಿಂತಿರುಗಿದಾಗ, ಸಂಘಮಿತ್ರ ಗರ್ಭಿಣಿಯಾಗಿದ್ದಳು. ಅವರು ನಜೀಬುರ್ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು ಮತ್ತು ಕಳೆದ ನವೆಂಬರ್‌ನಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದಳು.
ನಾಲ್ಕು ತಿಂಗಳ ನಂತರ, ಈ ವರ್ಷದ ಮಾರ್ಚ್‌ನಲ್ಲಿ ಸಂಘಮಿತ್ರ ತನ್ನ ಅಪ್ರಾಪ್ತ ಮಗನೊಂದಿಗೆ ನಜೀಬರ್‌ನ ಮನೆಯನ್ನು ತೊರೆದು ತನ್ನ ಹೆತ್ತವರ ಮನೆಗೆ ಹೋದಳು. ಮಾತ್ರವಲ್ಲದೆ ನಜೀಬುರ್ ತನಗೆ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದರು. ಕೊಲೆ ಯತ್ನ ಪ್ರಕರಣ ಕೂಡ ದಾಖಲಾಗಿದ್ದು ನಜೀಬುರನ್ನು ಬಂಧಿಸಲಾಗಿತ್ತು. 28 ದಿನಗಳ ಬಳಿಕ ಜಾಮೀನಿನ ಮೇಲೆ ನಜೀಬುರ್ ಬಿಡುಗಡೆಯಾಗಿದ್ದರು.

ಜೈಲಿನಿಂದ ಹೊರಬಂದ ನಂತರ, ನಜೀಬುರ್ ತನ್ನ ಮಗುವನ್ನು ಭೇಟಿಯಾಗಲು ಬಯಸಿದನು. ಆದರೆ ಸಂಘಮಿತ್ರನ ಕುಟುಂಬವು ಅವನನ್ನು ಬಿಡಲಿಲ್ಲ. ವಾಸ್ತವವಾಗಿ ಏಪ್ರಿಲ್ 29 ರಂದು ನಜೀಬುರ್ ಅವರ ಸಹೋದರ ಸಂಘಮಿತ್ರ ಮತ್ತು ಅವರ ಕುಟುಂಬ ಸದಸ್ಯರು ನಜೀಬುರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ನಜೀಬುರ್ ಪೊಲೀಸ್ ದೂರು ದಾಖಲಿಸಿದ್ದರು.
ಸೋಮವಾರ ಮಧ್ಯಾಹ್ನ, ಎರಡು ಕಡೆಯ ನಡುವಿನ ಉದ್ವಿಗ್ನತೆ ತಾಳ್ಮೆಯ ಕಟ್ಟೆ ಒಡೆದು ನಜೀಬುರ್ ತನ್ನ ಪತ್ನಿ ಸಂಘಮಿತ್ರ ಮತ್ತು ಆಕೆಯ ಪೋಷಕರನ್ನು ಕೊಲೆ ಮಾಡಿದ್ದಾನೆ. ನಂತರ ತನ್ನ ಒಂಬತ್ತು ತಿಂಗಳ ಮಗುವಿನೊಂದಿಗೆ ಪೊಲೀಸರ ಮುಂದೆ ಶರಣಾಗಿದ್ದಾನೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ, ಘೋಷ್ ಅವರ ಮನೆಯಲ್ಲಿ ಸಂಘಮಿತ್ರ ಮತ್ತು ಆಕೆಯ ಹೆತ್ತವರ ದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದವು. ಆರೋಪಿಗಳ ವಿರುದ್ಧ ಕೊಲೆ ಮತ್ತು ಮನೆ ಅತಿಕ್ರಮಣದ ಪ್ರಕರಣ ದಾಖಲಿಸಲಾಗಿದೆ ಎಂದು ಅಸ್ಸಾಂ ಪೊಲೀಸ್ ಮುಖ್ಯಸ್ಥ ಜಿಪಿ ಸಿಂಗ್ ಟ್ವೀಟ್ ಮಾಡಿದ್ದಾರೆ. ಭೀಕರ ಹತ್ಯೆಯ ತನಿಖೆಗೆ ರಾಜ್ಯ ಸಿಐಡಿ ತಂಡವನ್ನು ನಿಯೋಜಿಸಲಾಗಿದೆ. ಫೋರೆನ್ಸಿಕ್ ತಂಡಗಳನ್ನು ಸಹ ಕರೆಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಇಂದು ಗೋಲಾಘಾಟ್‌ನಲ್ಲಿರುವ ಅವರ ನಿವಾಸದಲ್ಲಿ ಕುಟುಂಬವನ್ನು ಭೇಟಿ ಮಾಡಿ ಆರೋಪಿಗಳಿಗೆ ಶಿಕ್ಷೆಯ ಭರವಸೆ ನೀಡಿದ್ದಾರೆ. ಸಂತ್ರಸ್ತೆಯ ಸಹೋದರಿ ಅಂಕಿತಾಳನ್ನೂ ಆರೋಪಿಗಳು ಥಳಿಸಿದ್ದಾರೆ ಎಂದು ಮುಖ್ಯಮಂತ್ರಿ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು. "ಘಟನೆಗೆ ಸಂಬಂಧಿಸಿದಂತೆ, ಅವಳು ನನಗೆ ಪತ್ರ ಬರೆದಿದ್ದಳು. ಸಾಮಾನ್ಯವಾಗಿ, ನಾನು ಹಲವಾರು ಪತ್ರಗಳನ್ನು ಸ್ವೀಕರಿಸುತ್ತೇನೆ. ಆದರೆ ನನಗೆ ಇದು ತಲುಪಿಲ್ಲ, "ಎಂದು ಅವರು ಹೇಳಿದರು.












Click it and Unblock the Notifications