ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್; ನಂಗೇನೂ ಗೊತ್ತಿಲ್ಲವೆಂದ ಸಿಎಂ
ಜೈಪುರ್, ಆಗಸ್ಟ್ 24: ಕಾಂಗ್ರೆಸ್‌ಗೆ ಮುಂಚಿನ ಅಧ್ಯಕ್ಷರು ಯಾರಾಗ್ತಾರೆ ಎಂಬುದು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಆ ಸ್ಥಾನಕ್ಕೆ ಹೆಚ್ಚಿನ ಹೆಸರು ಚಾಲ್ತಿಯಲ್ಲಿ ಇಲ್ಲವಾದರೂ ಅದು ಗಾಂಧಿ ಕುಟುಂಬಕ್ಕೆ ಉಳಿದುಕೊಳ್ಳುತ್ತಾರೆ, ಬೇರೆಯವರಿಗೆ ಸಿಗುತ್ತಾ ಎಂಬುದು ಕುತೂಹಲ.
ಇದೇ ವೇಳೆ, ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ಹೆಸರು ಮುಂದಿಟ್ಟಿದ್ದಾರೆ ಎಂಬ ಸುದ್ದಿ ನಿನ್ನೆ ಮಂಗಳವಾರದಿಂದ ದಟ್ಟವಾಗಿ ಕೇಳಿಬರುತ್ತಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ಸೋನಿಯಾ ಗಾಂಧಿ ಮಾತನಾಡಿದ್ದು ಎಐಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ಸನ್ನು ಮುನ್ನಡೆಸುವಂತೆ ಕೋರಿದ್ದಾರೆ ಎಂಬುದು ಸುದ್ದಿ.
ಆದರೆ, ಈ ಬಗ್ಗೆ ಅಶೋಕ್ ಗೆಹ್ಲೋಟ್ ಇಂದು ಬುಧವಾರ ಪ್ರತಿಕ್ರಿಯಿಸಿದ್ದು, ತನಗೇನೂ ಗೊತ್ತಿಲ್ಲ ಎನ್ನುವ ಮೂಲಕ ಇದು ಗಾಳಿ ಸುದ್ದಿ ಎಂದು ತಳ್ಳಿಹಾಕಿದ್ದಾರೆ.

"ಈ ಬಗ್ಗೆ ಮಾಧ್ಯಮಗಳಿಂದ ನನಗೆ ಸುದ್ದಿ ತಿಳಿಯುತ್ತಿದೆ. ನನಗೇನೂ ಗೊತ್ತಿಲ್ಲ. ನನಗೆ ಕೊಟ್ಟಿರುವ ಜವಾಬ್ದಾರಿಗಳನ್ನು ನಿಭಾಯಿಸುವ ಕೆಲಸ ಮಾಡುತ್ತಿದ್ದೇನೆ ಅಷ್ಟೇ," ಎಂದು ರಾಜಸ್ಥಾನ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ರಾಹುಲ್ ಅಧ್ಯಕ್ಷರಾಗಲಿ ಎಂದ ಗೆಹ್ಲೋಟ್
ಅಶೋಕ್ ಗೆಹ್ಲೋಟ್ ಇತ್ತೀಚೆಗಷ್ಟೇ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿ ಅಲಂಕರಿಸಲಿ ಎಂದು ಒತ್ತಾಯಿಸಿದ್ದರು. ಆದರೂ ಕೂಡ ಗಾಂಧಿ ಕುಟುಂಬದ ಹೊರಗಿನವರು ಕಾಂಗ್ರೆಸ್ ಅಧ್ಯಕ್ಷರಾಗಲಿ ಎಂಬ ಕೂಗು ತುಸು ಗಟ್ಟಿಯಾಗಿ ಕೇಳಿಬರುತ್ತಿದೆ.
"ಒಂದು ವೇಳೆ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗದೇ ಹೋದಲ್ಲಿ ದೇಶಾಧ್ಯಂತ ಕಾಂಗ್ರೆಸ್ ಕಾರ್ಯಕರ್ತರಿಗೆ ನಿರಾಸೆ ಆಗುತ್ತದೆ. ಜನರು ಮನೆಯಲ್ಲೇ ಕೂತುಬಿಡುತ್ತಾರೆ. ಆಗ ನಮಗೇ ಕಷ್ಟ ಆಗುವುದು. ರಾಹುಲ್ ಗಾಂಧಿ ಸಾಮಾನ್ಯ ಕಾಂಗ್ರೆಸ್ಸಿಗರ ಭಾವನೆಯನ್ನು ಅರ್ಥ ಮಾಡಿಕೊಂಡು ತಾವಾಗೇ ಈ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಬೇಕು.

"ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವಂತೆ ರಾಹುಲ್ ಗಾಂಧಿ ಮೇಲೆ ಒತ್ತಡ ಹಾಕುವುದನ್ನು ಮುಂದುವರಿಸುತ್ತೇವೆ. ಅವರ ಮನವೊಲಿಸುತ್ತೇವೆ" ಎಂದು ಜೈಪುರ್‌ನಲ್ಲಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅನಾರೋಗ್ಯ ಹದಗೆಟ್ಟಿರುವುದರಿಂದ ಅವರು ತೀರಾ ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಅವರು ಎಐಸಿಸಿ ಚುಕ್ಕಾಣಿಯನ್ನು ಪೂರ್ಣವಾಗಿ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ಕೂಡ ಅಧ್ಯಕ್ಷ ಸ್ಥಾನಕ್ಕೆ ಮನಸು ಮಾಡುತ್ತಿಲ್ಲ. ಪ್ರಿಯಾಂಕಾ ಗಾಂಧಿ ಕೂಡ ದೊಡ್ಡ ಜವಾಬ್ದಾರಿಗೆ ತೆರೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಹಿರಿಯ ನಾಯಕರೆನಿಸಿರುವ ಅಶೋಕ್ ಗೆಹ್ಲೋಟ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಅಶೋಕ್ ಗೆಹ್ಲೋಟ್ ತಾನು ಅಧ್ಯಕ್ಷ ಸ್ಥಾನ ಒಪ್ಪುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಸೋನಿಯಾ ಗಾಂಧಿ ತನ್ನೊಂದಿಗೆ ಈ ವಿಚಾರ ಮಾತನಾಡಿದ್ದಾರೆ ಎಂಬ ಸುದ್ದಿಯನ್ನಷ್ಟೇ ಅವರು ಅಲ್ಲಗಳೆದಿರುವುದು. ಹೀಗಾಗಿ, ಅಧ್ಯಕ್ಷಗಾದಿಯ ರೇಸ್‌ನಲ್ಲಿ ಅವರ ಹೆಸರಂತೂ ಇದೆ. ಸೆಪ್ಟೆಂಬರ್ 21ರೊಳಗೆ ಎಐಸಿಸಿಗೆ ಹೊಸ ಅಧ್ಯಕ್ಷರ ಆಯ್ಕೆ ಆಗಬೇಕಿದೆ. ಅದರ ಸಂಬಂಧ ಸಭೆಗಳು, ಚರ್ಚೆಗಳು ನಡೆಯುತ್ತಲೇ ಇವೆ. ಸೋನಿಯಾ ಗಾಂಧಿ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ. ಅವರ ಜೊತೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯೂ ತೆರಳುತ್ತಿದ್ದಾರೆ. ಅವರು ಹೋಗುವ ಮುನ್ನ ಅಧ್ಯಕ್ಷ ಸ್ಥಾನದ ಆಯ್ಕೆ ಆಗುವ ನಿರೀಕ್ಷೆ ಇದೆ.
ಆ. 28ರಂದು ಸಭೆ:
ಮುಂಬರಲಿರುವ ಭಾನುವಾರದಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾಡಲಾಗುವುದು. ಅಧ್ಯಕ್ಷ ಸ್ಥಾನದ ಚುನಾವಣೆಯ ವೇಳಾಪಟ್ಟಿಯನ್ನು ಆ ವರ್ಚುವಲ್ ಸಭೆಯಲ್ಲಿ ಅನುಮೋದಿಸಲಾಗುವುದು. ಸೋನಿಯಾ ಗಾಂಧಿ ಆ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಸಂಘಟನಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
"ಆಗಸ್ಟ್ 28, ಮಧ್ಯಾಹ್ನ 3:30ಕ್ಕೆ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ವರ್ಚುವಲ್ ಸಭೆ ನಡೆಯಲಿದ್ದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ವೇಳಾಪಟ್ಟಿಗಳಿಗೆ ಅನುಮೋದನೆ ಕೊಡಲಾಗುತ್ತದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ" ಎಂದು ರಾಜ್ಯಸಭಾ ಸದಸ್ಯರೊಬ್ಬರು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications