ಒಳ್ಳೇ ದಿನಗಳು ಬರುತ್ತವೆ: ವೈರಲ್ ಆದ ಅಸಾರಾಮ್ ಫೋನ್ ಇನ್ ಸಂಭಾಷಣೆ
ಜೋಧಪುರ, ಏಪ್ರಿಲ್ 28: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಫೋನಿನಲ್ಲಿ ತಮ್ಮ ಆಶ್ರಮದ ಸಹಚರರೊಬ್ಬರೊಡನೆ ಮಾತನಾಡಿದ ಸಂಭಾಷಣೆ ಇದೀಗ ವೈರಲ್ ಆಗಿದೆ.
ಜೈಲು ಅಧಿಕಾರಿಗಳ ಅನುಮತಿಯೊಂದಿಗೆ ಶುಕ್ರವಾರ ಗುಜರಾತಿನ ಸಬರಮತಿ ಆಶ್ರಮದ ಸಹಚರರೊಬ್ಬರಿಗೆ ಫೋನ್ ಮಾಡಿದ ಅವರು, ಕೆಲವು ನಿಮಿಷಗಳ ಸಂಭಾಷಣೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ "ಮುಂದೆ ಒಳ್ಳೆಯ ದಿನಗಳು ಬರುತ್ತವೆ. ಇವೆಲ್ಲ ಕ್ಷಣಿಕ" ಎಂದು ಹೇಳಿದ್ದಾರೆ. ಅಸಾರಾಮ್ ಫೋನ್ ಸಂಭಾಷಣೆಯ ಮುಖ್ಯಾಂಶಗಳು ಇಲ್ಲಿವೆ.

"ನಾವು ಕಾನೂನನ್ನು ಗೌರವಿಸಬೇಕು. ನಾನೂ ಅದನ್ನೇ ಮಾಡುತ್ತಿದ್ದೇನೆ. ನನ್ನ ಭಕ್ತರಿಗೆ, ಅನುಯಾಯಿಗಳಿಗೆ ಶಾಂತತೆ ಕಾಪಾಡುವಂತೆ ಮನವಿ ಮಾಡುತ್ತೇನೆ. ಆಶ್ರಮದ ವಿರುದ್ಧ ಕೆಲವರು ಷಡ್ಯಂತ್ರ ನಡೆಸುತ್ತಿದ್ದು, ಇದೂ ಅದರದೇ ಒಂದು ಭಾಗ"
"ನನ್ನೊಂದಿಗೆ ಇನ್ನಿಬ್ಬರು ಸಹಚರರಿಗೆ 20 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಅವರನ್ನು ಇಲ್ಲಿಂದ ಹೊರಗೆ ಕಳಿಸುವುದೇ ನನ್ನ ಮೊದಲ ಗುರಿ. ಮಕ್ಕಳು ಕಷ್ಟದಲ್ಲಿದ್ದಾಗ ತಂದೆ ಸಹಾಯ ಮಾಡದಿದ್ದರೆ ಹೇಗೆ? ನಮಗೆ ಹೆಚ್ಚು ಹೆಚ್ಚು ವಕೀಲರು ಬೇಕಾಗಿದ್ದಾರೆ"
"ಈ ಕೋರ್ಟಿನ ತೀರ್ಪೇ ಅಂತಿಮವಲ್ಲ. ನಮಗೆ ಇನ್ನೂ ಹಲವು ಕೋರ್ಟುಗಳಿವೆ. ಸತ್ಯವನ್ನು ಹೆಚ್ಚು ದಿನ ಮುಚ್ಚಿಡುವುದಕ್ಕಾಗುವುದಿಲ್ಲ. ಸುಳ್ಳಿಗೆ ಹೆಚ್ಚು ಆಯುಷ್ಯವೂ ಇಲ್ಲ. ಆದ್ದರಿಂದ ಇವೆಲ್ಲ ಕ್ಷಣಿಕ ಅಷ್ಟೇ. ಒಳ್ಳೆಯ ದಿನಗಳು ಬರುತ್ತವೆ. ಭಕ್ತರ್ಯಾರೂ ಆತಂಕ ಪಡುವುದು ಬೇಡ" ಎಂದು ಅಸಾರಾಮ್ ಹೇಳಿದ್ದಾರೆ.
2013ರಲ್ಲಿ ಇಬ್ಬರು ಯುವತಿಯರು ನೀಡಿದ್ದ ಅತ್ಯಾಚಾರ ದೂರಿಗೆ ಸಂಬಂಧಿಸಿದಂತೆ ಅಸಾರಾಮ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಐದು ವರ್ಷಗಳ ಕಾಲ ವಿಚಾರಣೆ ನಡೆಸಿದ ರಾಜಸ್ಥಾನದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ ಏ.25 ರಂದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.











Click it and Unblock the Notifications