Arvind Kejriwal: ಅರವಿಂದ್ ಕೇಜ್ರಿವಾಲ್ ಇವತ್ತೇ ಯಾಕೆ ರಾಜೀನಾಮೆ ಕೊಟ್ಟಿಲ್ಲ ಎಂದ ಬಿಜೆಪಿ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಹೊರಬಂದ ಎರಡು ದಿನಗಳಲ್ಲೇ ಶಾಕ್ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಅವರು, ಎರಡು ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದರು. ರಾಜೀನಾಮೆಗೆ ಕಾರಣ ಕೂಡ ಕೊಟ್ಟಿದ್ದು, ಜನತಾ ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತೇನೆ ಎಂದಿದ್ದಾರೆ. ಕೇಜ್ರಿವಾಲ್ ಅವರ ಹೇಳಿಕೆಗೆ ಬಿಜೆಪಿ ಟೀಕಿಸಿದ್ದು, ಇವತ್ತೇ ಯಾಕೆ ರಾಜೀನಾಮೆ ಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡಿದೆ.
ಆರು ತಿಂಗಳು ಜೈಲು ವಾಸದ ಬಳಿಕ ಸುಪ್ರೀಂಕೋರ್ಟ್‌ನಿಂದ ಜಾಮೀನು ಸಿಕ್ಕಿದ್ದು, ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಭಾನುವಾರ ನಡೆದ ಪಕ್ಷದ ಸಭೆಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎನ್ನುವ ಮೂಲಕ ಎಲ್ಲರಿಗೂ ಆಘಾತ ನೀಡಿದರು.

ಸಭೆಯಲ್ಲಿ ಮಾತನಾಡಿದ ಅವರು, "ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ಜನರೇ ತೀರ್ಪು ಕೊಡುವವರೆಗೂ ನಾನು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲಲ್ಲ, ದೆಹಲಿ ಚುನಾವಣೆಗೆ ಕೆಲವು ತಿಂಗಳು ಬಾಕಿ ಇದೆ. ನನಗೆ ನ್ಯಾಯಾಲದಲ್ಲಿ ನ್ಯಾಯ ಸಿಕ್ಕಿದೆ, ಇದೀಗ ಜನತಾ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಜನರ ಆದೇಶದ ಬಳಿಕವೇ ನಾನು ಸಿಎಂ ಸ್ಥಾನದಲ್ಲಿ ಕೂರುತ್ತೇನೆ" ಎಂದರು.
ನಾನು ಅಪರಾಧಿಯಾ? ನಿರಪರಾಧಿಯಾ ಎನ್ನುವುದನ್ನು ಜನರೇ ನಿರ್ಧಾರ ಮಾಡಲಿ. ನಾನು ಕೆಲಸ ಮಾಡಿದ್ದರೆ ಮಾತ್ರ ನನಗೆ ಮತ ನೀಡಿ, ದೆಹಲಿಗೆ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಇನ್ನು ಎರಡು ದಿನಗಳಲ್ಲಿ ಎಎಪಿ ಶಾಸಕರ ಸಭೆ ನಡೆಸಲಾಗುವುದು ಎಂದು ಹೇಳಿದರು.
ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ ಬಳಿಕ ಪಕ್ಷದ ಸದಸ್ಯರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು. ಫೆಬ್ರವರಿಯಲ್ಲಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಿಗದಿಯಾಗಿದೆ, ಆದರೆ ಮಹಾರಾಷ್ಟ್ರದ ಚುನಾವಣೆ ಜೊತೆಗೆ ನವೆಂಬರ್ ನಲ್ಲಿ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಮೋದಿ ವಿರುದ್ಧ ವಾಗ್ದಾಳಿ
ಎಎಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಬ್ರಿಟೀಷರಿಗಿಂದ ಹೆಚ್ಚು ಸರ್ವಾಧಿಕಾರಿ ಎಂದು ಟೀಕಿಸಿದರು. ಪ್ರಜಾಪ್ರಭುತ್ವ ಉಳಿಸುವ ಸಲುವಾಗಿ ನನ್ನನ್ನು ಬಂಧಿಸಿದ್ದರೂ ರಾಜೀನಾಮೆ ನೀಡಲಿಲ್ಲ ಎಂದರು. ಕರ್ನಾಟಕ ಸಿಎಂ ಸಿದ್ದರಾಮಯ್ಯ, ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೂಡ ಪ್ರಕರಣ ದಾಖಲಿಸಲಾಗಿದೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿದರೆ ರಾಜೀನಾಮೆ ನೀಡಬೇಡಿ ಬಿಜೆಪಿಯೇತರ ಪಕ್ಷಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೊತೆ ಮಾತನಾಡಿದ್ದೇನೆ, ಜನರು ನಾವು ಪ್ರಾಮಾಣಿಕರು ಎಂದು ಹೇಳಿದ ನಂತರವೇ ಅವರು ಹುದ್ದೆಯನ್ನು ನಿಭಾಯಿಸುವುದಾಗಿ ಹೇಳಿದ್ದಾರೆ, ನನ್ನ ಮತ್ತು ಸಿಸೋಡಿಯಾ ಅವರ ಭವಿಷ್ಯ ಈಗ ನಿಮ್ಮ ಕೈಯಲ್ಲಿದೆ ಎಂದು ಜನರಿಗೆ ಹೇಳಿದರು.
ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿಯ ಹರೀಶ್ ಖುರಾನಾ, 48 ಗಂಟೆಗಳ ನಂತರ ರಾಜೀನಾಮೆ ಕೊಡುತ್ತೇನೆ ಎಂದಿದ್ದು ಏಕೆ? ಇಂದೇ ರಾಜೀನಾಮೆ ನೀಡಬೇಕು. ಈ ಹಿಂದೆ ಕೂಡ ಅವರು ಹೀಗೆ ಮಾತನಾಡಿದ್ದಾರೆ. ಅವರು ಸೆಕ್ರೆಟರಿಯೇಟ್‌ಗೆ ಹೋಗಬಾರದು, ದಾಖಲೆಗಳಿಗೆ ಸಹಿ ಹಾಕಬಾರದು, ಹೀಗಾದರೆ ಏನು ಪ್ರಯೋಜನೆ ಎಂದರು. ನಾವು ನಾಳೆಯೇ ಚುನಾವಣೆ ನಡೆದರು ಸಿದ್ದರಿದ್ದೇವೆ, 25 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.












Click it and Unblock the Notifications