ಸೇನೆಯ ಯೋಧರು ಮಸೀದಿಗೆ ನುಗ್ಗಿ ಜನರನ್ನು ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸುತ್ತಿದ್ದಾರೆ: ಮೆಹಬೂಬಾ ಮುಫ್ತಿ
ಶ್ರೀನಗರ, ಜೂನ್ 27: ಆರ್‌ಆರ್‌ನ 50ಕ್ಕೂ ಸೇನಾ ಯೋಧರು ಪುಲ್ವಾಮಾದ ಮಸೀದಿಯೊಂದಕ್ಕೆ ನುಗ್ಗಿ ಅಲ್ಲಿನ ಮುಸ್ಲಿಮರನ್ನು 'ಜೈ ಶ್ರೀ ರಾಮ್' ಎಂದು ಕೂಗುವಂತೆ ಒತ್ತಾಯಿಸಿದರು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ ಅವರು ಹೇಳಿದ್ದಾರೆ.
ಇದು ಪ್ರಚೋದನೆಯ ಕ್ರಮವಾಗಿದ್ದು, ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಬೇಕು ಎಂದು ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರನ್ನು ಮುಫ್ತಿ ವಿನಂತಿಸಿದರು. ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರು ಜೂನ್ 14 ರಂದು ಪಾಕಿಸ್ತಾನದೊಂದಿಗಿನ ಗಡಿ ನಿಯಂತ್ರಣ ರೇಖೆ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಜವಾಬ್ದಾರಿಯನ್ನು ಪಡೆದು ಶ್ರೀನಗರ ಮೂಲದ ಸೇನೆಯ ಆಯಕಟ್ಟಿನ ಮಹತ್ವದ ಚಿನಾರ್ ಕಾರ್ಪ್ಸ್‌ನ ಕಮಾಂಡ್ ಅನ್ನು ವಹಿಸಿಕೊಂಡರು.

ಮುಫ್ತಿ ಟ್ವೀಟ್ ಮಾಡಿ ಆರ್‌ಆರ್‌ನ 50ಕ್ಕೂ ಸೇನಾ ಯೋಧರು ಪುಲ್ವಾಮಾದಲ್ಲಿ ಮಸೀದಿಯೊಂದಕ್ಕೆ ನುಗ್ಗಿ ಒಳಗಿದ್ದ ಮುಸ್ಲಿಮರಿಗೆ ಜೈ ಶ್ರೀ ರಾಮ್ ಎಂದು ಜಪಿಸುವಂತೆ ಒತ್ತಾಯಿಸಿದ ಬಗ್ಗೆ ಕೇಳಿ ಆಘಾತವಾಯಿತು. ಅಮಿತ್ ಶಾ ಇಲ್ಲಿರುವಾಗ ಅದೂ ಕೂಡ ಯಾತ್ರೆಗೆ ಮುಂದಾಗಿರುವಾಗ ಇಂತಹ ನಡೆ ಕೇವಲ ಪ್ರಚೋದನಕಾರಿ ಕೃತ್ಯವಾಗಿದೆ. ಈ ಬಗ್ಗೆ ರಾಜೀವ್ ಘಾಯ್ ಅವರನ್ನು ತಕ್ಷಣವೇ ತನಿಖೆಯನ್ನು ಆರಂಭಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದರು.
ಏಪ್ರಿಲ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಜಿ 20 ಕಾರ್ಯಕ್ರಮದ ಪೂರ್ವಭಾವಿಯಾಗಿ ಸ್ಥಳೀಯ ಜನರನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿಯು ಗ್ವಾಂಟನಾಮೊ ಕೊಲ್ಲಿಗಿಂತ ಹದಗೆಟ್ಟಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಜಿ 20 ಕಾರ್ಯಕ್ರಮವನ್ನು ನಡೆಸಲು ಸಿದ್ಧತೆಗಳು ಪ್ರಾರಂಭವಾದಾಗಿನಿಂದ ನೂರಾರು ಸ್ಥಳೀಯ ಪುರುಷರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.












Click it and Unblock the Notifications