• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ ದೌರ್ಬಲ್ಯದ ಲಾಭ ಪಡೆಯಲು ಹೊಂಚು ಹಾಕಿದ ಬಿಜೆಪಿ

By ವಿನೋದ್ ಕುಮಾರ್ ಶುಕ್ಲಾ
|

ನವದೆಹಲಿ, ನವೆಂಬರ್ 05 : ರಾಜಕೀಯ ರಣಾಂಗಣದಲ್ಲಿ ಚುನಾವಣೆ ಎಂಬುದು ದೈಹಿಕ, ಮೌಖಿಕ ಯುದ್ಧ ಮಾತ್ರವಲ್ಲ, ಮಾನಸಿಕ ಯುದ್ಧವೂ ಹೌದು. ಇಲ್ಲಿ ನೈತಿಕತೆ, ಅನೈತಿಕತೆ, ಪ್ರಬುದ್ಧತೆ, ಅಪ್ರಬುದ್ಧತೆಗೆ ಯಾವುದೇ ಮೌಲ್ಯವೂ ಇಲ್ಲ, ಮಹತ್ವವೂ ಇಲ್ಲ. ದುಡ್ಡಿದ್ದೋನೇ ದೊಡ್ಡಪ್ಪ, ಗೆದ್ದೋನೇ ಮಹಾಶೂರ.

ದೀಪಾವಳಿ ವಿಶೇಷ ಪುರವಣಿ

ತಮ್ಮ ಸಾಮರ್ಥ್ಯ ಮತ್ತು ಶಕ್ತಿಗಿಂತ ವಿರೋಧಿಗಳ ದೌರ್ಬಲ್ಯ, ಆಂತರಿಕ ಕಚ್ಚಾಟದ ಮೇಲೂ ರಾಜಕಾರಣಿಗಳು, ಪಕ್ಷಗಳು ಕಣ್ಣಿಡಬೇಕಾಗುತ್ತದೆ. ವಿರೋಧಿಗಳ ದೌರ್ಬಲ್ಯದ ಲಾಭ ಪಡೆದುಕೊಳ್ಳದಿದ್ದರೆ ಆತ ಅಥವಾ ಆಯಾ ಪಕ್ಷ ರಾಜಕೀಯದಲ್ಲಿರಲೇ ನಾಲಾಯಕ್.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಎಂಥೆಂಥ ಆಟಗಳು ನಡೆದಿವೆ ಎಂಬುದನ್ನು ನಾವೀಗಾಗಲೇ ನೋಡಿದ್ದೇವೆ. ಚುನಾವಣೆ ಇನ್ನೆರಡು ದಿನಗಳಿರುವಾಗಲೇ ಬಿಜೆಪಿಯಿಂದ ಸ್ಪರ್ಧಿಸಿದ್ದ ಚಂದ್ರಶೇಖರ ಅವರು ಚಂಗನೆ ಕಾಂಗ್ರೆಸ್ಸಿಗೆ ಹಾರಿ, ಟಿಕೆಟ್ ಕೊಟ್ಟ ಪಕ್ಷದ ಕಪಾಳಕ್ಕೆ ಬಾರಿಸಿದ್ದಾರೆ. ಇದೆಲ್ಲ ಸಾಮಾನ್ಯ.

ಬಿಜೆಪಿಗೆ 'ಕೈ'ಕೊಟ್ಟ ರಾಮನಗರ ಅಭ್ಯರ್ಥಿ: ಎರಡೇ ದಿನ ಇರುವಾಗ ಕಾಂಗ್ರೆಸ್ ಸೇರ್ಪಡೆ

ಬಿಜೆಪಿಯ ನಾಯಕರ ದೌರ್ಬಲ್ಯವನ್ನು ಮತ್ತು ಅಭ್ಯರ್ಥಿಯ ಆಕಾಂಕ್ಷೆಗಳ ಲಾಭವನ್ನು ಭರ್ಜರಿಯಾಗಿ ಪಡೆದ ಕಾಂಗ್ರೆಸ್ ಧುರೀಣರು, ಮತದಾನಕ್ಕೂ ಮೊದಲೇ ಬಿಜೆಪಿಗೆ ಭರ್ಜರಿ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಇದನ್ನು ನಿರೀಕ್ಷಿಸದೇ ಇದ್ದ ಬಿಜೆಪಿ ನಾಯಕರು ಇಂಗು ತಿಂದ ಮಂಗನಂತಾಗಿದ್ದಾರೆ. ಇದೆಲ್ಲ ಮೊದಲೇ ಗೊತ್ತಿತ್ತು ಎಂಬ ಪೋಜು ಬೇರೆ!

ಕಾಂಗ್ರೆಸ್ ದೌರ್ಬಲ್ಯದ ಲಾಭ ಪಡೆಯಲು ಬಿಜೆಪಿ ಹೊಂಚು

ಕಾಂಗ್ರೆಸ್ ದೌರ್ಬಲ್ಯದ ಲಾಭ ಪಡೆಯಲು ಬಿಜೆಪಿ ಹೊಂಚು

ಇದು ಕರ್ನಾಟಕದಲ್ಲಾದರೆ, ಮಧ್ಯ ಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ ಘಡದಲ್ಲಿ ಪರಿಸ್ಥಿತಿ ವಿಭಿನ್ನವಾಗೇನೂ ಇಲ್ಲ. ಕರ್ನಾಟಕದಲ್ಲಿ ಬಿಜೆಪಿ ರಾಜಕೀಯ ಷಡ್ಯಂತ್ರದ ರುಚಿ ಕಂಡಿದ್ದರೆ, ಈ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಆಂತರಿಕ ಕಚ್ಚಾಟದಿಂದ ಬಿಜೆಪಿಗೆ 'ಅಡ್ವಾಂಟೇಜ್' ನೀಡುತ್ತಿದೆ. ಬಿಜೆಪಿ ಕೂಡ ತನ್ನ ಸಾಮರ್ಥ್ಯವನ್ನು ನಂಬಿ ಆಟವಾಡುವ ಬದಲು, ವಿರೋಧಿಗಳ ದೌರ್ಬಲ್ಯದ ಲಾಭ ಪಡೆಯಲು ಹೊಂಚು ಹಾಕಿ ಕುಳಿತಿದೆ. ಎಲ್ಲಕ್ಕಿಂತ ಹೆಚ್ಚಾಗಿ ರಾಜಸ್ತಾನದಲ್ಲಿ ಕಾಂಗ್ರೆಸ್ಸಿನ ಆಂತರಿಕ ಕಚ್ಚಾಟ ತಾರಕಕ್ಕೇರಲಿ ಎಂದು ಬಿಜೆಪಿ ಕಾಯುತ್ತಿದೆ. ಏಕೆಂದರೆ, ಇತ್ತೀಚೆಗೆ ನಡೆಸಲಾದ ಚುನಾವಣಾಪೂರ್ವ ಸಮೀಕ್ಷೆಗಳ ಪ್ರಕಾರ ರಾಜಸ್ತಾನದಲ್ಲಿ ಬಿಜೆಪಿ ಮಣ್ಣುಮುಕ್ಕಲಿದೆ.

ರಾಜಸ್ಥಾನ ಚುನಾವಣೆ: ಮೋದಿ, ಶಾ, ಯೋಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ರಾಹುಲ್ ಎದರೇ ದಿಗ್ವಿಜಯ್, ಸಿಂಧಿಯಾ ಕಿತ್ತಾಟ

ರಾಹುಲ್ ಎದರೇ ದಿಗ್ವಿಜಯ್, ಸಿಂಧಿಯಾ ಕಿತ್ತಾಟ

ಮಧ್ಯ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಮತ್ತು ಕಾಂಗ್ರೆಸ್ಸಿನ ಸಂಭಾವ್ಯ ಮುಖ್ಯಮಂತ್ರಿ ಜ್ಯೋತಿರಾಧಿತ್ಯ ಸಿಂಧಿಯಾ ನಡುವಿನ ಕಚ್ಚಾಟ ಕಾಂಗ್ರೆಸ್ ಹೈಕಮಾಂಡ್ ಗೆ ಭಾರೀ ತಲೆನೋವು ತಂದಿತ್ತು. ಹದಿನೈದು ವರ್ಷಗಳ ನಂತರ ಮತ್ತೆ ಅಧಿಕಾರವನ್ನು ಪಡೆಯಲು ಹವಣಿಸುತ್ತಿರುವ ಕಾಂಗ್ರೆಸ್ಸಿಗೆ ಈ ಕಚ್ಚಾಟ, ಚುನಾವಣೆ ಕೆಲವೇ ದಿನಗಳು ಬಾಕಿಯಿರುವಾಗ, ಮಾರಕವಾಗಬಲ್ಲದು. ಮಧ್ಯ ಪ್ರದೇಶದಲ್ಲಿ ನವೆಂಬರ್ 28ರಂದು ನಡೆಯಲಿದ್ದು, ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗಲಿದೆ. ಹತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದ ಕಾಂಗ್ರೆಸ್, ಹದಿನೈದು ವರ್ಷಗಳಿಂದ ಅಧಿಕಾರವಿಲ್ಲದೆ ಬರಗೆಟ್ಟಂತಾಗಿದೆ.

ರಾಜಸ್ತಾನ ವಿಧಾನಸಭೆ ಬಿಜೆಪಿ ಟಿಕೆಟ್ ಬಗ್ಗೆ ಕೊನೆಯಾಗದ ಚರ್ಚೆ

ದಿಗ್ವಿಜಯ್ ವಸ್ಸಸ್ ಜ್ಯೋತಿರಾಧಿತ್ಯ

ದಿಗ್ವಿಜಯ್ ವಸ್ಸಸ್ ಜ್ಯೋತಿರಾಧಿತ್ಯ

ನಾಲ್ಕೇ ನಾಲ್ಕು ದಿನಗಳ ಹಿಂದೆ ಕಾಂಗ್ರೆಸ್ಸಿನ ಆಂತರಿಕ ಕಚ್ಚಾಟ ಹೊರಬಿದ್ದಿತ್ತು, ಅದೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿಯೇ. ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನು ಆಯುವ ವಿಷಯದಲ್ಲಿ ದಿಗ್ವಿಜಯ್ ಸಿಂಗ್ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ಅವರು ರಾಹುಲ್ ಎದುರಿನಲ್ಲಿಯೇ ಮಾತಿನ ಯುದ್ಧಕ್ಕಿಳಿದಿದ್ದರು ಎಂದು ವರದಿಯಾಗಿತ್ತು. ಇದೆಲ್ಲ ಬೇಡವೆಂದು, ವೀರಪ್ಪ ಮೊಯ್ಲಿ ಸೇರಿದಂತೆ ಮೂವರು ಹಿರಿಯ ನಾಯಕರಿರುವ ಸಮಿತಿ ರಚಿಸಲಾಗಿದ್ದು, ಟಿಕೆಟ್ ಹಂಚಿಕೆ ಜವಾಬ್ದಾರಿಯನ್ನು ಆ ಸಮಿತಿಗೆ ವಹಿಸಲಾಗಿದೆ. ಇದನ್ನು ದಿಗ್ವಿಜಯ್ ಅಲ್ಲಗಳೆದಿದ್ದಾರೆ. ಇನ್ನು, ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬ ವಿಷಯದಲ್ಲಿಯೂ ಮಧ್ಯ ಪ್ರದೇಶದ ಕಾಂಗ್ರೆಸ್ಸಿನಲ್ಲಿ ಭಾರೀ ಭಿನ್ನಾಭಿಪ್ರಾಯಗಳಿವೆ. ಜ್ಯೋತಿರಾಧಿತ್ಯ ಮತ್ತು ಕಮಲ್ ನಾಥ್ ಅವರ ಹೆಸರುಗಳು ಮುಂಚೂಣಿಯಲ್ಲಿದ್ದರೂ, ದಿಗ್ವಿಜಯ್ ಕೂಡ ಕುರ್ಚಿಯ ಮೇಲೆ ಒಂದು ಕಣ್ಣಿಟ್ಟೇ ಇಟ್ಟಿದ್ದಾರೆ.

ಟಿಕೆಟ್ ಸಿಗದಿದ್ದರೆ ಬಂಡಾಯದ ಹಾಡು, ರಾಜಸ್ಥಾನದ್ದೂ ಅದೇ ಪಾಡು!

ಕಾಂಗ್ರೆಸ್ಸಿಗೆ ರಾಜಸ್ತಾನ ಆಶಾದಾಯಕ

ಕಾಂಗ್ರೆಸ್ಸಿಗೆ ರಾಜಸ್ತಾನ ಆಶಾದಾಯಕ

ಛತ್ತೀಸ್ ಘಡದಲ್ಲಿ ಮಾಜಿ ಕಾಂಗ್ರೆಸ್ಸಿಗ ಅಜಿತ್ ಜೋಗಿ ಅವರು, ಮೈತ್ರಿಗೆ ಯತ್ನಿಸುತ್ತಿದ್ದ ಕಾಂಗ್ರೆಸ್ಸಿಗೆ ಸಾಕಷ್ಟು ಬಾರಿ ಮುಜುಗರ ತಂದಿಟ್ಟಿದ್ದಾರೆ. ಕಾಂಗ್ರೆಸ್ ಅಜಿತ್ ಜೋಗಿ ಜೊತೆ ಮೈತ್ರಿಗೆ ಕೈಚಾಚಿದ್ದರೆ, ಅದನ್ನು ಧಿಕ್ಕರಿಸಿದ ಅಜಿತ್, ಮಾಯಾವತಿ ಅವರ ಪಕ್ಷದೊಡನೆ ಮೈತ್ರಿ ಮಾಡಿಕೊಂಡಿದ್ದಾರೆ. ಇವೆರಡೂ ರಾಜ್ಯಗಳನ್ನು ಹೊರತುಪಡಿಸಿದರೆ, ಕಾಂಗ್ರೆಸ್ಸಿಗೆ ಆಶಾದಾಯಕವಾಗಿರುವುದು ರಾಜಸ್ತಾನ ಮಾತ್ರ. ಏಕೆಂದರೆ, ಬಿಜೆಪಿ ನಾಯಕಿ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧವೇ ಜನ ತಿರುಗಿಬಿದ್ದಿದ್ದಾರೆ. ಅಲ್ಲದೆ, ರಾಜಸ್ತಾನದಲ್ಲಿ ಎಂದೂ ಒಂದೇ ಪಕ್ಷ ಸತತ ಮತ್ತೊಂದು ಬಾರಿ ಅಧಿಕಾರ ಪಡೆದುಕೊಂಡಿಲ್ಲ. ಇದು ಕಾಂಗ್ರೆಸ್ಸಿಗೆ ಭಾರೀ ಆಶಾದಾಯಕವಾಗಿ ಪರಿಣಮಿಸಿದೆ.

ಹಿರಿಯ ನಾಯಕರಿಗೆ ಟಿಕೆಟ್ ಇಲ್ಲ! ಫಲಿಸುತ್ತಾ, ಉಲ್ಟಾ ಹೊಡೆಯತ್ತಾ ಕಾಂಗ್ರೆಸ್ ತಂತ್ರ?

ಅಶೋಕ್ ಗೆಹ್ಲೋಟ್ ವಸ್ಸಸ್ ಸಚಿನ್ ಪೈಲಟ್

ಅಶೋಕ್ ಗೆಹ್ಲೋಟ್ ವಸ್ಸಸ್ ಸಚಿನ್ ಪೈಲಟ್

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಅಶೋಕ್ ಗೆಹ್ಲೋಟ್ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲ ಸಿದ್ಧತೆ ನಡೆಸಿದ್ದು, ಮುಖ್ಯಮಂತ್ರಿ ಹುದ್ದೆಗೆ ಅವರೇ ಪ್ರಬಲ ಆಕಾಂಕ್ಷಿ ಮತ್ತು ಪ್ರಥಮ ಆಯ್ಕೆಯಾಗಿದ್ದಾರೆ. ಆದರೆ, ರಾಜಸ್ತಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ, ಯುವ ನಾಯಕ ಸಚಿನ್ ಪೈಲಟ್ ಕೂಡ ತಾವೂ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಸ್ಪರ್ಧಿ ಎಂಬುದನ್ನು ಸಾರಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸುವುದು ಕಾಂಗ್ರೆಸ್ಸಿಗೆ ಭಾರೀ ಸವಾಲಾಗಿದೆ. ಅಶೋಕ್ ಗೆಹ್ಲೋಟ್ ಅವರು ತಮ್ಮ ಬೆಂಬಲಿಗರನ್ನು ಕ್ರೋಢೀಕರಿಸುತ್ತಿದ್ದರೆ, ಸಚಿನ್ ಪೈಲಟ್ ಅವರು ಕೂಡ ತಮ್ಮ ಬೆಂಬಲ ವರ್ಧನೆಗೆ ಮುಂದಾಗಿದ್ದಾರೆ.

ವಸುಂಧರಾ ಬೆಂಬಲಕ್ಕೆ ನಿಂತ ಆರೆಸ್ಸೆಸ್

ವಸುಂಧರಾ ಬೆಂಬಲಕ್ಕೆ ನಿಂತ ಆರೆಸ್ಸೆಸ್

ರಾಜಸ್ತಾನದಲ್ಲಿ ಕಾಂಗ್ರೆಸ್ ಸದ್ಯಕ್ಕೆ ಬಿಜೆಪಿಗಿಂತ ಉತ್ತಮ ಸ್ಥಾನದಲ್ಲಿ ಕುಳಿತಿದ್ದರೂ, ಗೆಲ್ಲುವ ಅವಕಾಶ ಪಡೆದಿದ್ದರೂ, ಈ ಆಂತರಿಕ ಕಚ್ಚಾಟದಿಂದಾಗಿ, ಬಿಜೆಪಿಯ ದೌರ್ಬಲ್ಯಗಳಿಗಿಂತ ಕಾಂಗ್ರೆಸ್ಸಿನ ಹೊಡೆದಾಟಗಳೇ ಎದ್ದು ಕಾಣಿಸುತ್ತಿವೆ. ಸಮೀಕ್ಷೆ ಹೊರಬಿದ್ದ ನಂತರ ಸಾಕಷ್ಟು ಅಧ್ಯಯನದಲ್ಲಿ ತೊಡಗಿರುವ ಭಾರತೀಯ ಜನತಾ ಪಕ್ಷ, ರಾಜಸ್ತಾನದಲ್ಲಿ ಹಲವಾರು ಹಳೆ ಅಭ್ಯರ್ಥಿಗಳಿಗೆ ಕೊಕ್ ನೀಡಿ ಹೊಸ ಮುಖಗಳಿಗೆ ಟಿಕೆಟ್ ನೀಡಿದರೂ ಅಚ್ಚರಿಯಿಲ್ಲ. ಅಲ್ಲದೆ, ವಸುಂಧರಾ ಆಡಳಿತವನ್ನು ಟೀಕಿಸುತ್ತಿದ್ದ ಆರೆಸ್ಸೆಸ್ ಈ ಬಾರಿ ಅವರ ಬೆಂಬಲಕ್ಕೆ ನಿಂತಿರುವುದು ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾದರೂ ಅಚ್ಚರಿಯಿಲ್ಲ. ಆದರೆ, ಕಾಂಗ್ರೆಸ್ಸಿನಲ್ಲಿ ಇನ್ನೂ ಟಿಕೆಟ್ ಹಂಚಿಕೆಯ ಬಗ್ಗೆ ಸ್ಪಷ್ಟತೆಯಿಲ್ಲ, ದೃಢ ನಿರ್ಧಾರಗಳು ಕಂಡುಬರುತ್ತಿಲ್ಲ. ರಾಜಸ್ತಾನದಲ್ಲಿ ಡಿಸೆಂಬರ್ 7ರಂದು ಒಂದೇ ಹಂತದಲ್ಲಿ ಮತದಾನ ನಡೆದು, ಡಿಸೆಂಬರ್ 11ರಂದು ಫಲಿತಾಂಶ ಹೊರಬೀಳಲಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is not just any particular state but the Bharatiya Janata Party (BJP) is banking more on infighting in Madhya Pradesh, Chhattisgarh and Rajasthan than anything. The BJP is more hopeful with the Congress infighting even in the state where every survey disappointed the party – Rajasthan.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more