Aravind Srinivas: ಕೇವಲ 0.01 ಅಂಕದಿಂದ IIT ಕೈತಪ್ಪಿತು, MITಯಿಂದಲೂ ರಿಜೆಕ್ಟ್! ಆದ್ರೂ ಇಂದು $20 ಬಿಲಿಯನ್ ಮೌಲ್ಯದ ಕಂಪನಿ CEO
ಸಾಧನೆ ಮಾಡುವ ಛಲವಿದ್ದರೆ ಎಂತಹ ಕಷ್ಟದ ಪರಿಸ್ಥಿತಿಯನ್ನಾದರೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಪರ್ಪ್ಲೆಕ್ಸಿಟಿ ಎಐ ಸಿಇಒ ಅರವಿಂದ್ ಶ್ರೀನಿವಾಸ್ ಅವರೇ ಒಂದೊಳ್ಳೆ ಉದಾಹರಣೆ. ಚೆನ್ನೈನ ಆರ್ಥಿಕವಾಗಿ ಹಿಂದುಳಿದ ಕೆಳ ಮಧ್ಯಮ ವರ್ಗದ ತಮಿಳು ಕುಟುಂಬದಿಂದ ಬಂದ ಅವರು, ಇಂದು ಬರೋಬ್ಬರಿ 20 ಬಿಲಿಯನ್ ಡಾಲರ್ ಅಂದರೆ ಸುಮಾರು 1.6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಎಐ (AI) ಸ್ಟಾರ್ಟ್‌ಅಪ್‌ನ ಸಿಇಒ ಆಗಿ ಬೆಳೆದಿದ್ದಾರೆ. ಆದರೆ, ಅವರು ಈ ಹಂತಕ್ಕೆ ತಲುಪಿದ ಹಾದಿ ಅಷ್ಟು ಸುಲಭವಾಗಿರಲಿಲ್ಲ.
ಫೋರ್ಬ್ಸ್ ವರದಿಗಳ ಪ್ರಕಾರ, 2025ರ ಹೊತ್ತಿಗೆ ಅವರ ಒಟ್ಟು ಆಸ್ತಿ ಮೌಲ್ಯ 2.1 ಬಿಲಿಯನ್ ಡಾಲರ್ ತಲುಪಿದೆ. ಓರ್ವ ವ್ಯಕ್ತಿ ರಾತ್ರೋರಾತ್ರಿ ಬಿಲಿಯನೇರ್ ಅಥವಾ ಸಿಇಒ ಆಗಲು ಖಂಡಿತ ಸಾಧ್ಯವಿಲ್ಲ ಅಲ್ಲವೇ. ಅರವಿಂದ್ ಅವರ ಈ ಯಶಸ್ಸಿನ ಹಿಂದೆ ಹಲವಾರು ಸೋಲು, ನಿರಾಕರಣೆ ಹಾಗೂ ಕಠಿಣ ಪರಿಶ್ರಮದ ಕಥೆಯಿದೆ.

ಐಐಟಿ ಮದ್ರಾಸ್‌ನಲ್ಲಿ 0.01 ಅಂಕದಿಂದ ಕೈತಪ್ಪಿದ ಕಂಪ್ಯೂಟರ್ ಸೈನ್ಸ್
ಅರವಿಂದ್ ಶ್ರೀನಿವಾಸ್ ಅವರು ಕಠಿಣ ಪರಿಶ್ರಮದಿಂದ ಜೆಇಇ ಪರೀಕ್ಷೆ ಬರೆದು ಐಐಟಿ ಮದ್ರಾಸ್‌ನಲ್ಲಿ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಅವರು ಕನಸು ಕಂಡಿದ್ದು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಓದಬೇಕು ಎಂದು. ದುರದೃಷ್ಟವಶಾತ್, ಅವರಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸೀಟು ಸಿಕ್ಕಿತು.
ವೆಂಚರ್ ಕ್ಯಾಪಿಟಲಿಸ್ಟ್‌ಗಳಾದ ಆರತಿ ರಾಮಮೂರ್ತಿ ಮತ್ತು ಶ್ರೀರಾಮ್ ಕೃಷ್ಣನ್ ನಡೆಸುವ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಅರವಿಂದ್, ತಮ್ಮೊಂದಿಗೆ ಜೆಇಇಗೆ ಸಿದ್ಧತೆ ನಡೆಸಿದ್ದ ಸ್ನೇಹಿತರೆಲ್ಲರೂ ಕಂಪ್ಯೂಟರ್ ಸೈನ್ಸ್ ವಿಭಾಗ ಸೇರುತ್ತಿರುವುದನ್ನ ನೋಡಿ ತೀವ್ರ ಹತಾಶೆಗೆ ಒಳಗಾಗಿದ್ದಾಗಿ ನೆನಪಿಸಿಕೊಂಡಿದ್ದಾರೆ.
ಮೊದಲ ಸೆಮಿಸ್ಟರ್ ಮುಗಿದ ಬಳಿಕ, ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಬದಲಾಯಿಸಿಕೊಳ್ಳಲು ಅವರು ಪ್ರಯತ್ನಿಸಿದರು. ಆದರೆ ಕೇವಲ 0.01 ಸಿಜಿಪಿಎ (CGPA) ಅಂಕಗಳ ಕೊರತೆಯಿಂದಾಗಿ ಅವರಿಗೆ ಆ ಅವಕಾಶ ಕೈತಪ್ಪಿತು. ಇದು ಅವರಿಗೆ ಯುಗಾಂತ್ಯದಂತೆ ಭಾಸವಾಗಿತ್ತು. ಈ ಘಟನೆಯಿಂದಾಗಿ ಅವರು ಒಂದು ವರ್ಷದ ಮಟ್ಟಿಗೆ ಖಿನ್ನತೆಗೆ ಒಳಗಾಗಿದ್ದರು.
ಛಲ ಬಿಡದ ಸಾಧಕ: ಸ್ವಯಂ ಕಲಿಕೆ ಮತ್ತು ಎಂಐಟಿ ನಿರಾಕರಣೆ
ಖಿನ್ನತೆಯಿಂದ ಹೊರಬಂದ ಅರವಿಂದ್, ಈ ಸೋಲನ್ನೇ ತನ್ನ ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಂಡರು. ಜಗತ್ತಿಗೆ ತನ್ನ ಸಾಮರ್ಥ್ಯವನ್ನ ಸಾಬೀತುಪಡಿಸುವ ಛಲದಿಂದ ಅವರು ಆನ್‌ಲೈನ್ ತರಗತಿಗಳು, ಕಾಂಪಿಟೇಟಿವ್ ಪ್ರೋಗ್ರಾಮಿಂಗ್ ವೆಬ್‌ಸೈಟ್‌ಗಳ ಮೂಲಕ ತಾವೇ ಸ್ವತಃ ಕೋಡಿಂಗ್ ಕಲಿಯಲು ಪ್ರಾರಂಭಿಸಿದರು. ತನಗೆ ಎದುರಾದ ನಿರಾಕರಣೆಯ ಮೇಲಿನ ಸಿಟ್ಟೇ ಅವರಿಗೆ ಪ್ರೇರಣೆಯಾಗಿತ್ತು.
ಎಲೆಕ್ಟ್ರಿಕಲ್ ವಿದ್ಯಾರ್ಥಿಯಾಗಿದ್ದರೂ, ಮೂರನೇ ವರ್ಷದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮಷಿನ್ ಲರ್ನಿಂಗ್ ತರಗತಿಗೆ ಸೇರಿಕೊಂಡರು. ಆರಂಭದಲ್ಲಿ ಪ್ರಾಧ್ಯಾಪಕರು 'ಎಲೆಕ್ಟ್ರಿಕಲ್ ವಿದ್ಯಾರ್ಥಿಗಳಿಗೆ ಇದು ಕಷ್ಟವಾಗಬಹುದು, ನಿನ್ನ ಸಾಮರ್ಥ್ಯ ಸಾಬೀತುಪಡಿಸು' ಎಂದು ಎಚ್ಚರಿಸಿದ್ದರು. ಆದರೆ, ಛಲಬಿಡದೆ ಓದಿದ ಅರವಿಂದ್ ಅದೇ ತರಗತಿಯಲ್ಲಿ ಟಾಪರ್ ಆಗಿ ಹೊರಹೊಮ್ಮಿದರು.
ನಂತರ, ಪ್ರಸಿದ್ಧ ಕಂಪ್ಯೂಟರ್ ವಿಜ್ಞಾನಿ ಹಾಗೂ ಟ್ಯೂರಿಂಗ್ ಪ್ರಶಸ್ತಿ ವಿಜೇತ ಯೋಶುವಾ ಬೆಂಗಿಯೊ ಅವರ ಬಳಿ ಇಂಟರ್ನ್‌ಶಿಪ್ ಮಾಡುವ ಅವಕಾಶ ಅವರಿಗೆ ಸಿಕ್ಕಿತು. ಬೆಂಗಿಯೊ ಅವರ ಶಿಫಾರಸಿನ ಪತ್ರದೊಂದಿಗೆ ಪಿಎಚ್‌ಡಿ ಮಾಡಲು ಜಗತ್ತಿನ ಪ್ರತಿಷ್ಠಿತ ಎಂಐಟಿ ಮತ್ತು ಯುಸಿ ಬರ್ಕ್ಲಿಗೆ ಅರ್ಜಿ ಸಲ್ಲಿಸಿದರು.
ಎಂಐಟಿ ಅವರನ್ನ ತಿರಸ್ಕರಿಸಿತು. ಆದರೆ ಯುಸಿ ಬರ್ಕ್ಲಿಯಲ್ಲಿ ಪ್ರವೇಶ ಸಿಕ್ಕಿತು ಮತ್ತು ಅಲ್ಲಿಯೇ ಅವರು ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಪೂರೈಸಿದರು.
ಓಪನ್ ಎಐ ನಿಂದ ಪರ್ಪ್ಲೆಕ್ಸಿಟಿ ಎಐ ಸಿಇಒ ವರೆಗಿನ ಪಯಣ
ಪಿಎಚ್‌ಡಿ ಮುಗಿಸಿದ ನಂತರ, ಅರವಿಂದ್ ಅವರು ಗೂಗಲ್ ಡೀಪ್‌ಮೈಂಡ್ ಮತ್ತು ಓಪನ್ ಎಐನಂತಹ ವಿಶ್ವದ ಅತಿದೊಡ್ಡ ಕೃತಕ ಬುದ್ಧಿಮತ್ತೆ ಸಂಸ್ಥೆಗಳಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸಿದರು. ಆಗಸ್ಟ್ 2022ರಲ್ಲಿ, ತಮ್ಮ ಆಪ್ತರಾದ ಆಂಡಿ ಕೊನ್ವಿನ್ಸ್ಕಿ, ಡೆನಿಸ್ ಯರಾಟ್ಸ್ ಮತ್ತು ಜಾನಿ ಹೋ ಅವರೊಂದಿಗೆ ಸೇರಿ 'ಪರ್ಪ್ಲೆಕ್ಸಿಟಿ ಎಐ' ಎಂಬ ಕ್ರಾಂತಿಕಾರಿ ಸರ್ಚ್ ಎಂಜಿನ್ ಸ್ಟಾರ್ಟ್‌ಅಪ್ ಅನ್ನು ಹುಟ್ಟುಹಾಕಿದರು.
ಕೇವಲ ಕೆಲವೇ ವರ್ಷಗಳಲ್ಲಿ ಈ ಸಂಸ್ಥೆ ಅಗಾಧವಾಗಿ ಬೆಳೆಯಿತು. ಇಂದು ಇದು ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್, ಎಐ ದಿಗ್ಗಜ ಯಾನ್ ಲೆಕುನ್ ಸೇರಿದಂತೆ ಅನೇಕ ಗಣ್ಯರಿಂದ ಹೂಡಿಕೆ ಪಡೆದಿದೆ. 2025ರ ವೇಳೆಗೆ ಇದರ ಮೌಲ್ಯ ಬರೋಬ್ಬರಿ 20 ಬಿಲಿಯನ್ ಡಾಲರ್ ತಲುಪಿದೆ.
ಸಾಮಾನ್ಯ ಹಿನ್ನೆಲೆ, ಅಸಾಮಾನ್ಯ ಸಾಧನೆ
ಝೆರೋಧಾ ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗಿನ ಸಂವಾದದಲ್ಲಿ ಅರವಿಂದ್ ತಮ್ಮ ಕೌಟುಂಬಿಕ ಹಿನ್ನೆಲೆಯನ್ನ ಹಂಚಿಕೊಂಡಿದ್ದರು. ಅವರ ತಾಯಿ ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದರು ಮತ್ತು ತಂದೆ ಹಣಕಾಸು ವಿಭಾಗದಲ್ಲಿ ಅಕೌಂಟೆಂಟ್ ಆಗಿದ್ದರು. ಇವರ ಇಡೀ ಕುಟುಂಬದಲ್ಲಿ ಇಂಜಿನಿಯರಿಂಗ್ ಓದಿದ ಮೊದಲ ವ್ಯಕ್ತಿ ಅರವಿಂದ್.
"ನಾವು ಆರ್ಥಿಕವಾಗಿ ಕೆಳಮಧ್ಯಮ ವರ್ಗದವರಾಗಿದ್ದೆವು. ನನಗೆ ಯಾವುದಾದರೂ ಒಂದು ಸಣ್ಣ ಕೆಲಸ ಸಿಕ್ಕರೂ ಸಾಕು, ಅದೇ ದೊಡ್ಡ ಯಶಸ್ಸು ಎಂದು ನಮ್ಮ ತಾಯಿ ಭಾವಿಸಿದ್ದರು. ನಾನು ಶೂನ್ಯದಿಂದ ಬಂದವನು, ಕಳೆದುಕೊಳ್ಳಲು ನನ್ನ ಬಳಿ ಏನೂ ಇರಲಿಲ್ಲ" ಎಂದು ಮತ್ತೊಂದು ಸಂದರ್ಶನದಲ್ಲಿ ಅರವಿಂದ್ ಹೆಮ್ಮೆಯಿಂದ ಹೇಳಿದ್ದಾರೆ.
ಒಮ್ಮೆ ಐಐಟಿ ಮತ್ತು ಎಂಐಟಿಯಿಂದ ತಿರಸ್ಕರಿಸಲ್ಪಟ್ಟ ಸಾಮಾನ್ಯ ಹುಡುಗ, ಸೋಲುಗಳಿಗೆ ಕುಗ್ಗದೆ ಛಲದಿಂದ ಮುನ್ನುಗ್ಗಿ ಇಂದು ಜಗತ್ತಿನ ಟಾಪ್ ಎಐ ಕಂಪನಿಯೊಂದರ ಸಿಇಒ ಆಗಿ ಬೆಳೆದಿರುವುದು ಯುವಜನತೆಗೆ ನಿಜಕ್ಕೂ ಒಂದು ಅದ್ಭುತ ಸ್ಫೂರ್ತಿಯಾಗಿದೆ.


Click it and Unblock the Notifications
