ಅರಾವಳಿ ಪರ್ವತ ಶ್ರೇಣಿಗೂ ನಾವು ಬಳಸುವ ಸಿಮೆಂಟ್‌ಗೂ ಇದೆ ನಂಟು: ಕೃಷ್ಣ ಭಟ್ ಬರಹ
ರಾಜಸ್ಥಾನದ ಅರಾವಳಿ ಪರ್ವತ ಶ್ರೇಣಿ ಗಣಿಗಾರಿಕೆ ವಿಚಾರದಲ್ಲಿ ಜನರ ಆಂದೋಲನಕ್ಕೆ ಜಯ ಸಿಕ್ಕಿದೆ. ಅರಾವಳಿ ಪವರ್ತ ಶ್ರೇಣಿಯಲ್ಲಿ ಗಣಿಗಾರಿಕೆಗೆ ಅವಕಾಶ ಕಲ್ಪಿಸುವ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸೋಮವಾರ ನಡೆದ ಅರಾವಳಿ ಪರ್ವತ ಶ್ರೇಣಿ ವಿಚಾರಣೆಯ ವ್ಯಾಖ್ಯಾನವನ್ನು ಮರುವ್ಯಾಖ್ಯಾನಿಸಿ ಕಳೆದ ತಿಂಗಳು ಹೊರಡಿಸಲಾಗಿದ್ದ ಆದೇಶವು ಪರಿಸರದ ದೃಷ್ಟಿಯಿಂದ ಗಂಭೀರ ಪರಿಣಾಮಗಳನ್ನುಂಟುಮಾಡುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಗಮನಿಸಿದೆ.
ಅರಾವಳಿ ಪರ್ವತ ಶ್ರೇಣಿಯ ಭವಿಷ್ಯಕ್ಕೆ ಸಂಬಂಧಿಸಿದ ಮಹತ್ವದ ವಿಚಾರಣೆಯಲ್ಲಿ, ಸುಪ್ರೀಂ ಕೋರ್ಟ್ ತನ್ನದೇ ಆದ ಹಿಂದಿನ ಆದೇಶ ತಾತ್ಕಾಲಿಕವಾಗಿ ತಡೆಹಿಡಿದಿದೆ. ಇನ್ನೂ ಅರಾವಳಿ ಪರ್ವತದ ಕುರಿತು ಫೇಸ್ ಬುಕ್ ಬಳಕೆದಾರರೊಬ್ಬರಾದ ಕೃಷ್ಣ ಭಟ್ ಅವರು ಅರಾವಳಿ ಪರ್ವತ ಶ್ರೇಣಿಗೂ ಹಾಗೂ ನಾವು ಬಳಸುವ ಸಿಮೆಂಟ್‌ಗೂ ಇರುವ ನಂಟಿನ ಕುರಿತು ಬರಹದ ಮೂಲಕ ತಿಳಿಸಿದ್ದಾರೆ.

ಅರಾವಳಿ ಪರ್ವತ ಶ್ರೇಣಿಯಲ್ಲಿ ಗಣಿಗಾರಿಕೆ ವಿಷಯ ಭಾರಿ ಚರ್ಚೆ ಆಗ್ತಾ ಇದೆ. ಅಲ್ಲಿ ಎಷ್ಟು ಎತ್ತರದ ಪರ್ವತಗಳನ್ನು ಅರಾವಳಿ ಪರ್ವತ ಎಂದು ನಿರ್ಧಾರ ಮಾಡಬೇಕು ಎಂಬುದು ಸದ್ಯದ ಚರ್ಚೆಯ ವಿಷಯ. ಈಗಲೂ ಅಲ್ಲಿ 100 ಮೀ. ಗಿಂತ ಎತ್ತರದ ಪರ್ವತಗಳಲ್ಲೂ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಹೊಸ ತೀರ್ಪು ನೀಡುವುದಕ್ಕೆ ವರ್ಷಗಟ್ಟಲೆ ಮಾಡಿದರೆ ಅಥವಾ ನಿಯಮ ಬಿಗಿ ಮಾಡಿ ತೀರ್ಪು ನೀಡಿದರೆ ಇಡೀ ದೇಶದ ಕಟ್ಟಡ ನಿರ್ಮಾಣ ಉದ್ಯಮಕ್ಕೆ ಭಾರಿ ಹೊಡೆತ ಕೊಡುತ್ತೆ.
ಅರಾವಳಿ ಪರ್ವತ ಶ್ರೇಣಿಯಲ್ಲಿ ಸುಣ್ಣದ ಕಲ್ಲುಗಳು ವ್ಯಾಪಕವಾಗಿ ಸಿಗುತ್ತವೆ. ಈ ಸುಣ್ಣದ ಕಲ್ಲುಗಳೇ ನಮ್ಮ ಸಿಮೆಂಟ್ ಉತ್ಪಾದನೆಯಲ್ಲಿ ಪ್ರಮುಖ ಕಚ್ಚಾವಸ್ತು. ಲೈಮ್‌ಸ್ಟೋನ್ ಇಲ್ಲದಿದ್ದರೆ ಸಿಮೆಂಟ್ ಇಲ್ಲ. 2021-22 ರಲ್ಲಿ ಇಡೀ ದೇಶದಲ್ಲಿ ಅಧಿಕೃತವಾಗಿ 400 ಮಿಲಿಯನ್ ಟನ್ ಲೈಮ್‌ಸ್ಟೋನ್ ಹೊರತೆಗೆಯಲಾಗಿದೆ. ಇದರಲ್ಲಿ ರಾಜಸ್ಥಾನದ ಅರಾವಳಿ ಪ್ರಾಂತ್ಯದ್ದೇ 30% ಗಿಂತ ಹೆಚ್ಚು ಇದೆ. ಈ ಭಾಗದಲ್ಲಿ ಸಿಮೆಂಟ್ ಉದ್ಯಮ ಅಪಾರ ಪ್ರಮಾಣದಲ್ಲಿ ಬೆಳೆದಿದೆ. ಆಂಧ್ರಪ್ರದೇಶವನ್ನು ಬಿಟ್ಟರೆ, ರಾಜಸ್ತಾನದಲ್ಲೇ ಅತಿ ಹೆಚ್ಚಿನ ಸಿಮೆಂಟ್ ಉತ್ಪಾದನೆಯಾಗುತ್ತದೆ. ಆಂಧ್ರದಲ್ಲಿ 63 ಮಿಲಿಯನ್ ಟನ್ ಸಿಮೆಂಟ್ ಉತ್ಪಾದನೆಯಾದರೆ, ರಾಜಸ್ಥಾನದಲ್ಲಿ 55 ಮಿ.ಟನ್ ಸಿಮೆಂಟ್ ಉತ್ಪಾದನೆಯಾಗುತ್ತದೆ. ಸಿಮೆಂಟ್ ವಿಷಯದಲ್ಲಿ ದಕ್ಷಿಣ ಭಾರತಕ್ಕೆ ಆಂಧ್ರ ಹೇಗೋ ಉತ್ತರ ಭಾರತಕ್ಕೆ ರಾಜಸ್ಥಾನ ಆ ಸ್ಥಾನ ತುಂಬುತ್ತದೆ.
ಒಂದು ವೇಳೆ ಇಲ್ಲಿನ ಅರಾವಳಿ ಪರ್ವತ ಶ್ರೇಣಿಯಲ್ಲಿ ಗಣಿಗಾರಿಕೆ ನಿಯಮ ಬದಲಾದರೆ, ಈ ಸಿಮೆಂಟ್ ಉದ್ಯಮಕ್ಕೆ ಹೊಡೆತ ಬೀಳುತ್ತದೆ. ಆಗ ದಕ್ಷಿಣ ಭಾರತದಿಂದಲೇ ಉತ್ತರ ಭಾರತದ ಸಿಮೆಂಟ್ ಬೇಡಿಕೆ ಪೂರೈಕೆಯಾಗಬೇಕಾಗಿ ಬಂದು, ಇಡೀ ದೇಶದ ಸಿಮೆಂಟ್ ಬೆಲೆಯಲ್ಲಿ ಏರಿಕೆಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಒಂದು ಸಮೀಕ್ಷೆಯ ಪ್ರಕಾರ 2.5 ಬಿಲಿಯನ್ ಟನ್ ಲೈಮ್‌ಸ್ಟೋನ್ ಸಂಗ್ರಹ ಈ ರಾಜಸ್ಥಾನದ ಭಾಗದಲ್ಲಿರುವ ಅರಾವಳಿ ಪರ್ವತ ಶ್ರೇಣಿಯಲ್ಲಿದೆಯಂತೆ. ಇನ್ನು ರಾಜಸ್ಥಾನದಲ್ಲಿ ಲೈಮ್‌ಸ್ಟೋನ್ ಜೊತೆಗೆ ನಮ್ಮ ಮನೆಗಳ ಅಡುಗೆಮನೆಯಲ್ಲಿ ಹಾಕಿಕೊಳ್ಳುವ ಕ್ವಾರ್ಟ್ಜ್ ಕಲ್ಲುಗಳೂ ಇಲ್ಲಿಂದಲೇ ಬರುತ್ತವೆ. ಉಳಿದಂತೆ ಜಲ್ಲಿ ಕಲ್ಲಿಗೆ ಬಳಕೆಯಾಗುವ ಕಲ್ಲುಗಳೂ ಉತ್ತರ ಭಾರತಕ್ಕೆ ಇಲ್ಲಿಂದಲೇ ಪೂರೈಕೆಯಾಗುತ್ತವೆ.
ಇಡೀ ಅರಾವಳಿ ಪರ್ವತ ಶ್ರೇಣಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಲ್ಲಿ ಯಾವುದೇ ವಿಶಿಷ್ಟ ಅಥವಾ ಅತ್ಯಂತ ಅಪರೂಪದ ಖನಿಜವನ್ನು ಹೊರತೆಗೆಯುತ್ತಿಲ್ಲ. ಅಂದರೆ, ಇಲ್ಲಿನ ಗಣಿಗಾರಿಕೆಯಿಂದ ಯಾವುದೋ ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೋ, ಬ್ಯಾಟರಿ ಉತ್ಪಾದನೆಗೋ ಅಥವಾ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೋ ಖನಿಜಗಳ ಪೂರೈಕೆ ಆಗುತ್ತಿಲ್ಲ. ಬದಲಿಗೆ, ನಮ್ಮ ಮನೆ ನಿರ್ಮಾಣಕ್ಕೆ ಬೇಕಿರುವ ಸಿಮೆಂಟ್, ಜಲ್ಲಿ ಕಲ್ಲು ಹಾಗೂ ಇತರ ಗ್ರಾನೈಟ್ ಸಿಗುತ್ತಿದೆ.
ಇದರ ಹಿಂದೆ ಷಡ್ಯಂತ್ರವಿದೆಯೋ, ಅಸಲಿ ಕಾಳಜಿ ಇದೆಯೋ, ಪರಿಸರ ಪ್ರೇಮದಲ್ಲಿ ಕೊರತೆಯೋ, ಹೆಚ್ಚಳವೋ... ಇವೆಲ್ಲ ಚರ್ಚೆಯ ಆಚೆಗೆ ನಮ್ಮ ದೈನಂದಿನ ಅಗತ್ಯಕ್ಕೆ ಬೇಕಿರುವ ವಸ್ತುಗಳನ್ನು ಇಲ್ಲಿಂದ ಹೊರತೆಗೆಯಲಾಗುತ್ತಿದೆ. ಒಂದು ವೇಳೆ ಅಲ್ಲಿನ ಗಣಿಗಾರಿಕೆ ನಿಂತರೆ ನಮ್ಮ ಬೇಡಿಕೆ ನಿಲ್ಲುವುದಿಲ್ಲ. ಪೂರೈಕೆ ಮಾತ್ರ ನಿಲ್ಲುತ್ತದೆ. ಆಗ ನಮ್ಮ ಬೇಡಿಕೆಯನ್ನು ಪೂರೈಸಲು ಕಂಪನಿಗಳು ಪರ್ಯಾಯ ಮಾರ್ಗ ಹುಡುಕಿ ಬೇರೆ ಕಡೆ ಗಣಿಗಾರಿಕೆ ಶುರು ಮಾಡುತ್ತವೆ.
ಈ ಪರ್ವತ ಶ್ರೇಣಿಯನ್ನು ಉಳಿಸಿಕೊಳ್ಳಬೇಕು ಎಂದಾದರೆ, ನಾವು ಬೇರೆ ಪರ್ವತವನ್ನು ಕಡಿಯಲೇಬೇಕು. ಇದಲ್ಲದಿದ್ದರೆ, ಇನ್ನೊಂದು... ಅಷ್ಟೇ... ಇದಕ್ಕೆ ಶಾಶ್ವತ ಪರಿಹಾರ ನಮ್ಮ ಬಳಿಯೇ ಇದೆ. ನಮ್ಮ ಬೇಡಿಕೆಯನ್ನೇ ಕಡಿಮೆ ಮಾಡಿಕೊಳ್ಳಬೇಕು. ಅಂದರೆ, ನಾವು ಸಿಮೆಂಟಿನಿಂದ ಮನೆ ಕಟ್ಟುವುದನ್ನು ಬಿಟ್ಟು, ಮಣ್ಣಿನಿಂದ ಮನೆ ಕಟ್ಟಬೇಕು! ಸಿಮೆಂಟಿನ ಛಾವಣಿ ಹಾಕುವುದನ್ನು ಬಿಟ್ಟು ಮಂಗಳೂರು ಹೆಂಚನ್ನು ಹೊದ್ದಿಸಬೇಕು. ನೆಲಕ್ಕೆ ಗ್ರಾನೈಟ್ ಹಾಕುವುದನ್ನು ಬಿಟ್ಟು, ಮಣ್ಣಿನ ಟೈಲ್ಸ್ ಹಾಕಿಕೊಳ್ಳಬೇಕು.
ಗೋಡೆಗಳಿಗೆ ಹಾಲೋ ಬ್ರಿಕ್ಸ್ ಅಥವಾ ಎಮ್‌ಸ್ಯಾಂಡ್ ಹಾರ್ಡ್ ಪ್ರೆಸ್ ಮಾಡಿದ ಬ್ರಿಕ್ಸ್ ಬಳಸುವ ಬದಲು ಇಟ್ಟಿಗೆಯನ್ನು ಮಾತ್ರವೇ ಬಳಸಬೇಕು. ಅದಕ್ಕೆ ಸಿಮೆಂಟಿನ ಪ್ಲಾಸ್ಟರಿಂಗ್ ಮಾಡದೇ, ಮಣ್ಣಿನ ವಸ್ತುಗಳನ್ನು ಬಳಸಿ ಪ್ಲಾಸ್ಟರಿಂಗ್ ಮಾಡಬೇಕು. ಅದು ಸಾಧ್ಯವೇ? ಅದು ಸಾಧ್ಯ ಎಂದಾದರೆ, ನಾವು ಅರಾವಳಿ ಪರ್ವತ ಶ್ರೇಣಿ ಉಳಿಸಿ ಎಂದು ಕೇಳಬಹುದು. ಇಂದು ಅರಾವಳಿ ಉಳಿಸಿ ಎಂದು ಹೇಳುವ ಎಲ್ಲರೂ ಅಲ್ಲಿಂದಲೇ ಬಂದ ಸಿಮೆಂಟು, ಜಲ್ಲಿ, ಗ್ರಾನೈಟ್‌ನ ಹೊದೆಸಿದ ಕಟ್ಟಡದ ಒಳಗೆ ಕುಳಿತು ಕೂಗುತ್ತಿದ್ದಾರೆ ಎಂದು ಕೃಷ್ಣ ಭಟ್ ಅವರು ಬರೆದುಕೊಂಡಿದ್ದಾರೆ.












Click it and Unblock the Notifications