Aravalli Range: ಮರುಭೂಮಿಗೆ ಹಸಿರು ತೇಪೆಯಂತಿರುವ ಅರಾವಳಿ ಹೀಗಿದೆ: ರಹಮತ್ ತರೀಕೆರೆ ಬರಹ
ಪೂರ್ವ ಭಾರತದ ಅಪರೂಪದ ಕಾಡುಬೆಟ್ಟಗಳಿರುವ ಅರಾವಳಿಯ ಶ್ರೇಣಿಯನ್ನು ಸರ್ಕಾರವು ಗಣಿಗಾರಿಕೆಗೆ ಅವಕಾಶ ಕೊಡುವ ಹುನ್ನಾರ ನಡೆಸಿದ್ದು, ಅರಾವಳಿ ತಪ್ಪಲಿನ ಜನ ಕೆರಳಿ ಬೀದಿಗೆ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಾವಳಿಯಲ್ಲಿ ತಿರುಗಾಡಿ ಬಂದ ನೆನಪುಗಳನ್ನು ಹಂಚಿಕೊಂಡಿರುವೆ - ರಹಮತ್ ತರೀಕೆರೆ, ಸಾಹಿತಿ.
ಹಿಮಾಲಯ, ಬಯಲುಸೀಮೆ ಹಾಗೂ ಪಶ್ಚಿಮಘಟ್ಟಗಳಲ್ಲಿ ಅಲೆದಾಡಿರುವ ನಾನು, ಅರಾವಳಿ ಕಾಡುಗಳನ್ನು ನೋಡಿರಲಿಲ್ಲ. ಇದು ಗುಜರಾತಿನಿಂದ ಮೊದಲುಗೊಂಡು ರಾಜಸ್ಥಾನ ಹರಿಯಾಣಗಳನ್ನು ಹಾದು ದೆಹಲಿಯ ಅಂಚಿನಲ್ಲಿ ಕೊನೆಗೊಳ್ಳುವ ಹಸಿರುಪಟ್ಟೆ. ಸಬರಮತಿ ಮೊದಲಾದ ಹೊಳೆಗಳಿಗೆ ಜನ್ಮನೀಡುವ ಅರಾವಳಿ, ಜಗತ್ತಿನ ಪ್ರಾಚೀನ ಗಿರಿಶ್ರೇಣಿಗಳಲ್ಲಿ ಒಂದಂತೆ. ವಯಸ್ಸಿನಲ್ಲಿ ಇದರ ಮುಂದೆ ಹಿಮಾಲಯವೊಂದು ಕೂಸಂತೆ. ಅಬೂ ಪರ್ವತದಲ್ಲಿ ಮತ್ತು ದೆಹಲಿಯ ಅಂಚಿನಲ್ಲಿ ಅರಾವಳಿಯ ಕಿಂಚಿತ್ ದರ್ಶನವಾಗಿತ್ತಾದರೂ ಪ್ರವೇಶ ಸಾಧ್ಯವಾಗಿರಲಿಲ್ಲ.

ಈಚೆಗೆ ಉದಯಪುರ-ಜೋಧಪುರಗಳ ನಡುವಿನ ಅರಾವಳಿ ಅಭಯಾರಣ್ಯದಲ್ಲಿ ಪ್ರವೇಶ ಸಾಧ್ಯವಾಯಿತು. ಅರಾವಳಿಯ ಲಕ್ಷಣವೆಂದರೆ, ಕಲ್ಲರೆಗಳಿಂದ ಕೂಡಿದ ಬೆಟ್ಟಗಳು, ನೆತ್ತಿಯಲ್ಲಿ ವಿರಳವೂ ಕಣಿವೆಯಲ್ಲಿ ದಟ್ಟವೂ ಆಗುವ ಕಾನನ, ಮಳೆಗಾಲದಷ್ಟೇ ಹರಿವ ಹಳ್ಳಗಳು, ಬಿಸಿಲನ್ನು ತಡೆದು ಅಲ್ಪಮಳೆಯಲ್ಲಿ ಜೀವಿಸಬಲ್ಲ ಸಸ್ಯಾವಳಿ. ನಾವು ಹೋದಾಗ ಚಳಿ ಕಾಲಿಟ್ಟಿತ್ತು. ಕೆಲವು ಮರಗಳು ಎಲೆಹಣ್ಣಾಗಿ ಅರಿಶಿಣ ಮಿಂದ ಮದುಮಕ್ಕಳಾಗಿದ್ದವು. ಮತ್ತೆ ಕೆಲವು ಎಲೆಯುದುರಿಸಿ ನೀಲಾಕಾಶದಡಿ ಬತ್ತಲೆನಿಂತ ಆದಿವಾಸಿ ಮಕ್ಕಳಂತಿದ್ದವು. ಕವಳೆ ನೆಲ್ಲಿ ಬಾರೆ ಬಿದಿರು ಈಚಲು ಬೇವು ಅತ್ತಿ ದಿಂಡುಗ ಹಾಲೆ ಮುತ್ತುಗ ಮೊದಲಾದವನ್ನು ನೋಡುವಾಗ, ನಮ್ಮ ಜೋಗಿಮಟ್ಟಿ ಸೊಂಡೂರು ದರೋಜಿ ಜರಿಮಲೆ ಕಾಡುಗಳಿಗೇ ಬಂದಂತಾಯಿತು.
ಅರಾವಳಿಯ ಕಾಡುಗಳು ಹಿಂದೊಮ್ಮೆ ಹುಲಿಗಳಿಗೆ ಖ್ಯಾತವಾಗಿದ್ದವು. ರಾಜಸ್ಥಾನದ ಅರಮನೆಗಳಲ್ಲಿ ರಾಜರು ಮತ್ತು ಬ್ರಿಟಿಷರು, ಅಟ್ಟಣಿಗೆ ಕಟ್ಟಿಕೊಂಡು ಹುಲಿ ಬೇಟೆಯಾಡುತ್ತಿರುವ ವರ್ಣಚಿತ್ರಗಳೂ ಫೊಟೊಗಳೂ ಇವೆ. ಇಲ್ಲಿನ ಗುಡಿಗಳ ಭಿತ್ತಿಗಳಲ್ಲೂ ಬೇಟೆಶಿಲ್ಪಗಳೇ ರಾರಾಜಿಸುತ್ತಿವೆ. ಆದರೀಗ ಅರಾವಳಿ ಶ್ರೇಣಿಯ ರಣಥಂಬೂರಲ್ಲಿ ಮಾತ್ರ ಹುಲಿಗಳಿವೆ. ಉಳಿದಂತೆ ನಾವು ಚಾರಣಿಸಿದ ಕುಂಭಳಗಢ-ರಣಕಪುರ ಅಭಯಾರಣ್ಯದಲ್ಲಿ ಕರಡಿ, ಚಿರತೆ, ಸಾರಂಗ, ಹಂದಿ, ಮುಸಿಯ ನೀಲಗಾಯಿ, ತೋಳ, ನವಿಲುಗಳಿದ್ದವು. ಮೊದಲಿಗೇ ಎದ್ದು ಕಂಡಿದ್ದು ಕಾಡಿನಲ್ಲಿ ಬಿಳಿಯ ಕರವಸ್ತ್ರಗಳನ್ನು ಒಣಹಾಕಿದಂತೆ ಸೂರ್ಯರಶ್ಮಿಗೆ ಹೊಳೆಯುತ್ತಿದ್ದ ಸಹಸ್ರಾರು ಜೇಡರ ಬಲೆಗಳು. ಮಂಜಿನ ಗುಹೆಯೊಳಗೆ ತಪಕ್ಕೆ ಕೂತಂತಿರುವ ಜೇಡಗಳು, ಬಾಗಿ ನೋಡಹೋದರೆ ಪುಳಕ್ಕನೆ ಬಿಲದೊಳಗೆ ಅಡಗುತ್ತಿದ್ದವು. ಕಾಡೆಂದರೆ ಹುಲಿಸಿಂಹಗಳಿಂದ ಮಾತ್ರವಲ್ಲ, ನಮ್ಮಂತಹ ಕೀಟಗಳಿಂದಲೂ ರೂಪುಗೊಂಡಿದೆ ಎಂಬ ದಿಟವನ್ನು ಕಾಣಿಸುವಂತೆ.
ಗೈಡ್ ದಾವೂರಾಂ, ಕರ್ವಾಲೊ' ಕಾದಂಬರಿಯ ಮಂದಣ್ಣ. ಭಿಲ್ ಸಮುದಾಯ ದವನು. ತೆಳ್ಳಗೆ ಕುಳ್ಳಗೆ ಕಪ್ಪಗಿದ್ದ ಈತ, ನೀರೊಳಗಿನ ಮೀನಂತೆ ಅಡವಿಯೊಳಗೆ ಸಂಚರಿಸಬಲ್ಲವನು; ಏಕಕಾಲದಲ್ಲಿ ಕಿವಿ ಕಣ್ಣು ನೆಲ ಮುಗಿಲುಗಳನ್ನು ಚುರುಕಾಗಿ ನಿಟ್ಟಿಸುತ್ತಿದ್ದವನು. ಈತ ನಮಗೆ ಮಣ್ಣಹಾದಿಯಲ್ಲಿ ಹಾದುಹೋಗಿರುವ ಹಾವಿನ ಪಟ್ಟೆ ತೋರಿಸಿದ; ಮರದ ಬುಡದಲ್ಲಿ ಮಣ್ಣುಕೆದರಿ ಉಂಟಾದ ತಗ್ಗನ್ನು ನೀಲಗಾಯಿಯ ಮಲಗುದಾಣವೆಂದ; ಮರದ ತೊಗಟೆ ಕೆಂಪಾದೆಡೆಯನ್ನು ಬಾರಾಸಿಂಗ ಜಿಂಕೆಗಳು ಕೋಡ ತುರಿಸುತ್ತ ಗೈದ ಗಾಯವೆಂದ; ಮುದಿಮರದ ಪೊಟರೆಯಲಿ ಧ್ಯಾನಸ್ಥ ಗೂಬೆಗಳ ದರ್ಶನ ಮಾಡಿಸಿದ; ಮುಸಿಯಗಳ ಚೀತ್ಕಾರ ಕೇಳಿ ಹತ್ತಿರದಲ್ಲೇ ಚಿರತೆಯಿದೆ ಎಂದು ಪಿಸುಗುಟ್ಟಿದ; ಕರಡಿಗಳ ಕೂಗನ್ನು ಕೇಳಿಸಿ, ಕಾದಾಟಕ್ಕೆ ಇಲ್ಲವೇ ಬೇಟಕ್ಕೆ ಹಾಕುತ್ತಿರುವ ಪೀಠಿಕೆಯೆಂದು ವಿಶ್ಲೇಷಿಸಿದ; ತಾಯ್ಗರಡಿಯೊಂದು ಒಬ್ಬನ ಕಣ್ಣು ಕಿತ್ತು, ಅವನ ಹೆಂಡತಿ ಅವನನ್ನು ಸಾಕಬೇಕಾದ ಕತೆಯನ್ನೂ ಹೇಳಿದ. ಅವನ ಪ್ರಕಾರ 'ಯಾವ ಪ್ರಾಣಿಯೂ ತಾನಾಗಿ ಮೇಲೆಬೀಳದು.
ನಾವು ಬಂಡಿಯಲ್ಲಿದ್ದರೂ ಸುಮ್ಮನಿರುತ್ತವೆ. ನಾವು ನೆಲದಲ್ಲಿದ್ದರೆ ಮಾತ್ರ ನಿಲ್ಲುವುದಿಲ್ಲ. ಶಬ್ದಮಾಡದೆ ಬಂದಿರಾದರೆ, ಕೆಲವಾದರೂ ಪ್ರಾಣಿಗಳು ಕಂಡಾವು'. ಆದರೆ ಊರಸುದ್ದಿಯನ್ನೂ ಕಾಡಿಗೂ ತಂದು ಗಳಹುವ ಚಾರಣಿಗರ ವಟವಟದಿಂದ ಯಾವ ಪ್ರಾಣಿ ತಾನೇ ಮುಖಾಬಿಲೆಯಾದೀತು? ನವಿಲು ಕಾಡಕೋಳಿಗಳು ನಮ್ಮನ್ನು ಕಂಡರೂ ಕ್ಯಾರೆ ಎನ್ನಲಿಲ್ಲ. ಒಂದು ತಾಯ್‌ಹಂದಿ ಮರಿಗಳಿದ್ದ ಕಾರಣ, ಇವರ ಸಹವಾಸ ಬೇಡವೆಂಬಂತೆ ದುಡುಗುಟ್ಟು ಓಡುತ್ತ ಪರಾರಿಯಾಯಿತು.
ಅರಾವಳಿಯಲ್ಲಿ ರಾಜಸ್ಥಾನದ ಕಾಡು ಇಲಾಖೆಯು ಕಟ್ಟಿಸಿರುವ ಮಳೆನೀರು ಇಂಗಿಸುವ ಕಟ್ಟೆಗಳು ಯಥೇಚ್ಛವಾಗಿವೆ. ಅವನ್ನು ಕಾಣುತ್ತ, ರಾಜಸ್ಥಾನದ ಪಾರಂಪರಿಕ ಜಲಕೊಯಿಲಿನ ಪ್ರಯೋಗಗಳನ್ನು ಲೋಕಕ್ಕೆ ತಿಳಿಸಿದ, ಕಾಡಂಚಿನ ಜನರಿಗೆ ಇದರ ಮಹತ್ವವನ್ನೂ ಮನಗಾಣಿಸಿದ ರಾಜೇಂದ್ರಸಿಂಗರ ನೆನಪಾಯಿತು. ಅವರೊಮ್ಮೆ ಹಂಪಿಗೆ ಬಂದು ಉಪನ್ಯಾಸವನ್ನೂ ಕೊಟ್ಟಿದ್ದರು. ಸಿಂಧ್-ರಾಜಸ್ಥಾನಗಳೆಂದರೆ ಕುಡಿನೀರಿಗಾಗಿ ಪರದಾಡುವ ಮಹಿಳೆಯರೇ ಮನದೆದುರು ಬರುತ್ತಾರೆ. ಜಲದ ಅರಕೆಯೂ ಅದರೊಟ್ಟಿಗೆ ಮಹಿಳೆಯರಿಗಿರುವ ದೈನಿಕ ಸಂಬಂಧವೂ ಇಲ್ಲಿನ ಕಲೆಗಳಲ್ಲಿ ಸೈತ ಬಿಂಬಿತವಾಗಿದೆ.
ಉದಯಪುರದಲ್ಲಿ ನಾವು ವೀಕ್ಷಿಸಿದ ನೀರಬಿಂದಿಗೆ ಹೊತ್ತು ಮಾಡುವ ಒಂದು ಕುಣಿತಕ್ಕೆ, ಹಿನ್ನೆಲೆಯಾಗಿ ಹಾಡಿದ ಹಾಡಿನಲ್ಲಿ, ಯಾರು ಹೆಚ್ಚು ಬಿಂದಿಗೆ ಹೊರುತ್ತಾರೆ ಎಂದು ಮಹಿಳೆಯರು ಮಾತಾಡಿಕೊಳ್ಳುವುದೇ ವಸ್ತುವಾಗಿತ್ತು. ಒಂದು ಪ್ರದೇಶದಲ್ಲಿರುವ ಕಡಲು ಮರುಭೂಮಿ ಬೆಟ್ಟ ಬಯಲು ಧಗೆ ತಣ್ಪು ಮಳೆ-ಬಿಸಿಲುಗಳಿಗೂ, ಅಲ್ಲಿನ ಜನಜೀವನದ ಭಾಗವಾಗಿರುವ ಭಾಷೆ ಸಾಹಿತ್ಯ ಧರ್ಮ ವಾಸ್ತುಶಿಲ್ಪ ಶಿಲ್ಪ ಚಿತ್ರಕಲೆ ಹಾಡು-ಕುಣಿತ ಅಡುಗೆ-ತೊಡುಗೆಗಳಿಗೂ ಒಳನಂಟಿರುತ್ತದೆ. ಅರಾವಳಿಯ ಚಾರಣವು ರಾಜಸ್ಥಾನದ ನಿಸರ್ಗ ಪರಿಸರದ ಜತೆಗೇ ಅಲ್ಲಿನ ಸಾಂಸ್ಕೃತಿಕ ಲೋಕದ ಮುಖಗಳನ್ನೂ ಕಾಣಿಸಿತು.
ವರ್ಷವಿಡೀ ಹರಿವ ಹೊಳೆಗಳ ನಾಡಿಂದ ಹೋದವರಿಗೆ, ಅರಾವಳಿಯ ಒಣಹಳ್ಳಗಳನ್ನು ನೋಡುತ್ತಿದ್ದರೆ, ಮನಸು ಖಿನ್ನಗೊಳ್ಳುತ್ತದೆ. ನಮ್ಮ ಹೊಳೆಹಳ್ಳಗಳ ಮಹತ್ವವೂ ಮನವರಿಕೆಯಾಗುತ್ತದೆ. ಪಡುವಣ ಘಟ್ಟದ ಶೋಲಾ ಮತ್ತು ಹಿಮಾಲಯಗಳಿಗೆ ಇರುವಂತೆ, ಅರಾವಳಿ ಬೆಟ್ಟಗಳಿಗೆ ಜಲಸಂಚಯದ ಗುಣ ಕಡಿಮೆ. ನಾವೊಂದೆಡೆ ಒಣನದಿಯ ಪಾತ್ರದೊಳಗೆ ನಡೆಯಬೇಕಾಯಿತು. ಜಿನುಗುಧಾರೆಗಳಿಂದ ಮಡುಗಟ್ಟಿದ ಕೆಲವು ದೊಣೆಗಳನ್ನು ಬಿಟ್ಟರೆ, ಉರುಟು ಬಂಡೆಗಳಿಂದ ಕೂಡಿದ ಇಳಿಜಾರಿನ ಆ ನದೀಪಾತ್ರವು, ರುದ್ರರಮಣೀಯವೂ ಅಪಾಯಕರವೂ ಆಗಿತ್ತು.
ದಾವೂರಾಮನ ಪ್ರಕಾರ, ಅತ್ತೆಯೊಬ್ಬಳು ಸೊಸೆಯನ್ನು ಬೈಯುತ್ತ ಧುಮುಗುಡುತ್ತ ನಡೆದಳಂತೆ. ಅದುವೇ ಸದರಿ ಒಣಗಿದ ಹೊಳೆಯಾಯಿತಂತೆ. (ಸಿನಿಮಾಗಳಿಂದ ಹಿಡಿದು ಜನಪದ ಕತೆಗಳತನಕ ಪಾಪದ ಅತ್ತೆಯೇ ವಿಲನ್!) ಅತ್ತೆಕಾಟ ತಡೆಯಲಾರದೆ ಮನೆಬಿಟ್ಟು ಅಳುತ್ತ ಹೋದ ಸೊಸೆಯ ಕಣ್ಣೀರು ಹರಿದು ಸದಾ ಜಲವಿರುವ ಬನಾಸ್ ಎಂಬ ಹೊಳೆಯಾಯಿತಂತೆ. ನಿಸರ್ಗದ ವಿದ್ಯಮಾನಗಳನ್ನು ಕೌಟುಂಬಿಕ ಸಂಬಂಧಗಳಿಗೆ ಸಮೀಕರಿಸುವುದು ಬುಡಕಟ್ಟು ಸಂಸ್ಕೃತಿಯ ಜಾಯಮಾನವಿರಬೇಕು.
ನಮ್ಮ ಅರಣ್ಯ ಪ್ರವೇಶ ಮತ್ತು ನಿರ್ಗಮನದ ತಾಣಗಳಾದ ರಣಕಪುರ ಮತ್ತು ಘಾಣೇರಾವಗಳು ಪ್ರಾಚೀನ ಬಸದಿಗಳಿಗೂ ಖ್ಯಾತವಾಗಿದ್ದವು. ಅಮೃತಶಿಲೆಯಿಂದ ಗೇಯಲ್ಪಟ್ಟ ಇವು ಹಚ್ಚಗಿನ ವನಭಿತ್ತಿಯಲ್ಲಿ ಗುಡ್ಡೆಹಾಕಿಟ್ಟ ಹಿಮರಾಶಿಯಂತೆ, ಹಸಿರ್ಗಡಲಲ್ಲಿ ತೇಲುವ ಬಿಳಿಯ ಹಡಗುಗಳಂತೆ ಥಟ್ಟನೆ ಪ್ರತ್ಯಕ್ಷವಾಗುತ್ತವೆ.
ಇವು ಅರಾವಳಿಯನ್ನು ಭೇದಿಸಿಕೊಂಡು ಹೋಗುವ ವಣಿಕ ಪಥದಲ್ಲಿ ಚಲಿಸುತ್ತಿದ್ದ ವಣಿಕರಿಗೂ ಜೈನಮುನಿಗಳಿಗೂ ಆಶ್ರಯದಾಣಗಳಾಗಿ ಕೆಲಸ ಮಾಡಿರಬೇಕು. ಕಟ್ಟಿಸಿದವರೂ ವಣಿಕರೇ. ಇದೇ ಸೀಮೆಯ ಊರುಗಳ ಭೂಮಿಕೆಯಲ್ಲಿ ನಡೆಯುವ ನಮ್ಮ ವಡ್ಡಾರಾಧನೆ'ಯ ಕಥೆಗಳಲ್ಲಿ, ವಣಿಕರ ಕಾರವಾನಿನ ಜತೆ ಯಾತ್ರಿಕರು ಹೋಗುವ, ದರೋಡೆಕೋರರಿಗೆ ಬಲಿಯಾಗುವ ಸನ್ನಿವೇಶಗಳಿವೆ. ಸೇನೆಯೂ ಸನ್ಯಾಸಿಗಳೂ ವಣಿಕರ ಕಾರವಾನುಗಳೂ ಸಂಚರಿಸುತ್ತಿದ್ದ ಅರಾವಳಿಯ ಕಲ್ಲುಹಾಸಿನ ಪ್ರಾಚೀನ ಪಥವು ನಮಗೆ ಅಲ್ಲಲ್ಲಿ ಎದುರುಗೊಳ್ಳುತ್ತಿತ್ತು. ಅದನ್ನೀಗ ಜೀಪ್ ಸಫಾರಿಗಾಗಿ ಮರಾಮತ್ತು ಮಾಡಲಾಗಿದೆ. ಮೇವಾಡದ ದೊರೆಗಳ ಮೃಗಯಾವಿನೋದಕ್ಕೆ ಕಟ್ಟಲಾದ ಅಟ್ಟಣಿಗೆ ಮತ್ತು ಭವನಗಳು, ಪ್ರಾಣಿಗಣತಿ ಮಾಡುವ ಪರಿಸರ ವಿಜ್ಞಾನಿಗಳ ಡೇರೆಗಳಾಗಿ ಬಳಕೆಯಾಗುತ್ತಿವೆ.
ಚಾರಣದುದ್ದಕ್ಕೂ ನೂರಾರು ಹಕ್ಕಿಗಳ ಕಲರವ ಆಲಿಸಿದೆವು. ಇದಕ್ಕೆ ಬೇಕಾಗಿ ಬಾರೆ ಅತ್ತಿ ಸೀತಾಫಲ ಆಲ ಬಸಿರಿ ನೆಲ್ಲಿಯ ಮರಗಳೂ ಅಲ್ಲಿದ್ದವು. ದಾವೂರಾಂ ಹಾದಿಯುದ್ದಕ್ಕೂ ಸೀತಾಫಲಗಳನ್ನು ಕಿತ್ತುಕೊಟ್ಟು ಜೋಳಿಗೆ ತುಂಬಿಸಿದನು. ಕಾಡಂಚಿನ ಊರುಗಳಲ್ಲೂ ಸೀತಾಫಲ ಮಾರುವ ಬುಡಕಟ್ಟು ಜನ ಸಾಲುಗಟ್ಟಿ ಕೂತಿರುತ್ತಿದ್ದರು. ಬುಟ್ಟಿಗೆ ಐವತ್ತು ರೂಪಾಯಿ. ಸರ್ಕಾರ ಕಾಡುತ್ಪತ್ತಿಯ ಸಂಗ್ರಹವನ್ನು ನಿಷೇಧಿಸಿದೆ. ಆದರೂ ಜೇನಿಗಾಗಿ ಕಡಿದುರುಳಿಸಿದ ಮತ್ತು ಅಂಟಿಗಾಗಿ ಕಚ್ಚಹಾಕಿಸಿಕೊಂಡ ದಿಂಡುಗದ ಮರಗಳು ರಣರಂಗದಲ್ಲಿ ಬಿದ್ದ ಗಾಯಾಳುಗಳಂತೆ ಕಂಡವು. ಇದನ್ನು ಅರಾವಳಿಯ ಜತೆ ಇರುವ ಗುಡ್ಡಗಾಡಿನವರು ಮಾಡುತ್ತ ಬಂದಿರುವ ಸಹಬಾಳ್ವೆಯ ಭಾಗವಾಗಿದ್ದವು.
ಆದರೆ ಅರಾವಳಿಯ ಮೇಲೆ ಯುದ್ಧಘೋಷಣೆ ಮಾಡಿರುವ ಸಂಗತಿಗಳು ಬೇರೆಯೇ ಇದ್ದವು. ಮರುಭೂಮಿಗೆ ಹಸಿರತೇಪೆ ಹಾಕಿದಂತಿರುವ ಅರಾವಳಿ ಕಾಡುಗಳು, ರಾಜಸ್ಥಾನದ ಪಾಲಿಗೆ ಶ್ವಾಸಕೋಶಗಳೆಂದೇ ಸರ್ಕಾರ ಕಾಪಿಟ್ಟಿದೆ. ಆದರೆ ಅದು ವನ್ಯಜೀವಿಗಳ ಏಕಾಂತವನ್ನು ಕದಡುವ ಸಫಾರಿಯನ್ನೂ ನಡೆಸುತ್ತಿದೆ. (ತೆರೆದ ಜೀಪುಗಳಲ್ಲಿ ಸಫಾರಿಗರು ಕೇಕೆ ಹಾಕಿಕೊಂಡು ಎದುರಾಗುತ್ತಿದ್ದರು.) ಕಾಡಂಚಿನಲ್ಲಿ ರೆಸಾರ್ಟುಗಳಿಗೂ ಅಮೃತಶಿಲೆಯ ಕ್ವಾರಿಗಳಿಗೂ ಅನುಮತಿಸಿದೆ. ಗಣಿಗಾರಿಕೆಯಿಂದ ಸೊಂಡೂರಿನ ಬೆಟ್ಟಗಳು ರಕ್ತಸಿಕ್ತವಾಗಿ ಕಾಣುವಂತೆ, ಅರಾವಳಿಯ ಬೆಟ್ಟಗಳು ಕಲ್ಲಗೆತದಿಂದ ಕೀವುಸೋರುವ ದೇಹದಂತೆ ಬಿಳಿಚಿಕೊಂಡಿದ್ದವು. ಜೋಧಪುರ-ಉದಯಪುರ ರಸ್ತೆಯ ಎರಡೂ ಬದಿ, ಅಮೃತಶಿಲೆಯ ನೂರಾರು ಉದ್ಯಮಗಳಿಂದ ಎದ್ದ ಬಿಳೀಧೂಳಿನ ಹೊಗೆ ಆಗಸಕ್ಕಡರಿತ್ತು.
ಅರಾವಳಿಯಲ್ಲಿ ಬುಡಕಟ್ಟು ಜನರ ಕೃಷಿ ಹಿಡುವಳಿಗಳೂ ಇವೆ. ಹಾದಿಯಲ್ಲಿ ಸಿಕ್ಕ ತನ್ನ ಮನೆಗೆ ದಾವೂರಾಂ ಕರೆದೊಯ್ದು ಚಹ ಕುಡಿಸಿದನು. ದೊಡ್ಡಬೆಟ್ಟದಿಂದ ನೀರು ಜಿನುಗುವ ಕಣಿವೆಯಲ್ಲಿ ಅವನ ಜಮೀನಿತ್ತು. ಅದರೊಳಗೆ ವಯಸ್ಸಿನಿಂದ ಹಣ್ಣಾದ ಅವನಪ್ಪನಿದ್ದನು. ಸಾಸಿವೆಪೈರು ಗೇಣುದ್ದವಿತ್ತು. ದಾವೂರಾಂ ಮೆಕ್ಕೆಜೋಳ ಹಾಕಿದರೆ ಹಂದಿಗಳು ಸತ್ಯಾನಾಸ್ ಮಾಡುತ್ತವೆ' ಎಂದು ಶಪಿಸಿದನು. ಅರಣ್ಯ ಇಲಾಖೆಯಲ್ಲಿರುವ ಆತನ ಮೃಗಸಂರಕ್ಷಣ ಪ್ರಜ್ಞೆಗೂ ಬೆಳೆ ಕಾಪಾಡಿಕೊಳ್ಳುವ ರೈತಾಪಿಪ್ರಜ್ಞೆಗೂ ನಡುವೆ ಸಂಘರ್ಷ ನಡೆಯುತ್ತಿತ್ತು.
ಸಫಾರಿಗೊ ಚಾರಣಕ್ಕೊ ಬರುವ ನಗರವಾಸಿಗಳಿಗೆ ಹಾದಿತೋರಲು, ಅವರ ಫೋಟೊಗ್ರಫಿಗೆ ವಸ್ತುವಾಗಲು, ಅವರನ್ನು ಖುಶಿಪಡಿಸಲು ತಾಲೀಮು ಪಡೆದಿರುವ ಆತ, ಬೇಸಾಯಕ್ಕಿಂತ ಹೆಚ್ಚು ರಖಮು ತರುವ ನಾಗರಿಕ ಸಮಾಜದ ಸಹವಾಸಕ್ಕೆ ಹಾತೊರೆಯುತ್ತಿದ್ದನು. ನಾವೋ, ನಗರ ಬದುಕಿನ ಏತಕಾನತೆಯಿಂದ ಬೇಸತ್ತು, ಮೈಮನಗಳಿಗೆ ಮೆತ್ತಿಕೊಂಡಿರುವ ಮಂಕನ್ನು ಕಳೆದುಕೊಂಡು ಚೈತನ್ಯ ಪಡೆಯಲು ಕಾಡನ್ನು ಹೊಕ್ಕವರು. ನಮಗೆ ಬಿಡುಗಡೆಯಂತೆ ಕಾಣುವ ಕಾಡುಬೆಟ್ಟಗಳು, ಅದರೊಳಗಿವವರಿಗೆ ಬಂಧನವಾಗಿವೆಯೇ? ಇದೊಂದು ವೈರುಧ್ಯಕರ ಸೆಳೆತಗಳ ಮುಖಾಮುಖಿ.
ಈ ಮುಖಾಮುಖಿಯಲ್ಲಿ ಅರಾವಳಿಯ ಕಾಡುಬೆಟ್ಟ ಖಗಮೃಗಗಳಿಗೆ ಅಭಿಮತವೇನು? ಅವಕ್ಕೆ ಬಾಯಿದ್ದಿದ್ದರೆ ಈ ನಿಮ್ಮ ಸಫಾರಿ ಕ್ವಾರಿ ಚಾರಣ ಹೊಲಗದ್ದೆ ರೆಸಾರ್ಟು ಎಲ್ಲವೂ ನಮ್ಮ ಪಾಲಿನ ಪೀಡೆಗಳು' ಎಂದು ಹೇಳುತ್ತಿದ್ದವೇನೊ. ಜಡತೆಯನ್ನು ತೊಡೆದು ಹೊಸ ಅನುಭವವನ್ನೂ ಇನ್ನಿಲ್ಲದ ಆನಂದವನ್ನೂ ಕೊಟ್ಟ ಅರಾವಳಿ, ಕಂಗೆಡುವ ಪ್ರಶ್ನೆಗಳನ್ನೂ ಹುಟ್ಟಿಸಿತು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications