ಬರಲಿದೆ ಮತ್ತೊಂದು ಚಂಡಮಾರುತ; ಜೂನ್ 10ರಿಂದ ಮಳೆ
ನವದೆಹಲಿ, ಜೂನ್ 04 : ಒಂದು ಕಡೆ ಮುಂಗಾರು ಮತ್ತೊಂದು ಕಡೆ ಚಂಡಮಾರುತ. ಈ ಬಾರಿ ದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗುವ ನಿರೀಕ್ಷೆ ಇದೆ. ಅರಬ್ಬೀ ಸಮುದ್ರದಲ್ಲಿ ಉಂಟಾಗಿದ್ದ 'ನಿಸರ್ಗ' ಚಂಡಮಾರುತ ದುರ್ಬಲವಾಗಿದ್ದು, ಮತ್ತೊಂದು ಚಂಡಮಾರುತದ ಮುನ್ಸೂಚನೆ ನೀಡಲಾಗಿದೆ.
Recommended Video
ಗುರುವಾರ ಭಾರತೀಯ ಹವಾಮಾನ ಇಲಾಖೆ ಈ ಕುರಿತು ಮಾಹಿತಿ ನೀಡಿದೆ. ಬಂಗಾಳಕೊಲ್ಲಿಯ ಪೂರ್ವ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಪ್ರಸ್ತುತ ವಾಯುಭಾರ ಕುಸಿತ ಉಂಟಾಗುವ ಸೂಚನೆಗಳು ಸಿಕ್ಕಿವೆ.
ಜೂನ್ 8ರ ಹೊತ್ತಿಗೆ ಈ ಕುರಿತು ಸ್ಪಷ್ಟವಾದ ಚಿತ್ರಣ ಹವಾಮಾನ ಇಲಾಖೆಗೆ ಲಭ್ಯವಾಗಲಿದೆ. ಜೂನ್ 10ರಿಂದ ಒಡಿಶಾ ರಾಜ್ಯದಲ್ಲಿ ಈ ಚಂಡಮಾರುತದ ಪ್ರಭಾವದಿಂದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮೇ ತಿಂಗಳಿನಲ್ಲಿ ಬಂಗಾಳಕೊಲ್ಲಿಯಲ್ಲಿ ಎದ್ದಿದ್ದ ಅಂಫಾನ್ ಚಂಡಮಾರುತ ತೀವ್ರ ಸ್ವರೂಪ ಪಡೆದಿತ್ತು. ಅದು ಪಶ್ಚಿಮ ಬಂಗಾಳ ರಾಜ್ಯಕ್ಕೆ ಅಪ್ಪಳಿಸಿ ಅಪಾರ ಹಾನಿ ಉಂಟು ಮಾಡಿತ್ತು. ಅಸ್ಸಾಂ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರಿ ಮಳೆಯಾಗಿತ್ತು.
ಭಾರತದಲ್ಲಿ ಜೂನ್ 1ರಿಂದ ಸೆಪ್ಟೆಂಬರ್ ಅಂತ್ಯದ ತನಕ ಮುಂಗಾರು ಮಾರುತಗಳ ಅವಧಿಯಾಗಿದೆ. ಈಗಾಗಲೇ ನೈಋತ್ಯ ಮುಂಗಾರು ಕೇರಳವನ್ನು ಪ್ರವೇಶ ಮಾಡಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜೂನ್ 5ರಿಂದ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ನೈಋತ್ಯ ಮುಂಗಾರು ಮಾರುತಗಳಿಗೆ ಪೂರಕವಾದ ವಾತಾವರಣವಿದೆ. ಕರ್ನಾಟಕ, ತಮಿಳುನಾಡು, ಪುದುಚೇರಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 2 ರಿಂದ 3 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications