Free Site: ಸಿಲಿಂಡರ್ ಆಯ್ತು, ಹಣ ಆಯ್ತು ಈಗ 'ಉಚಿತ ಸೈಟ್' ಘೋಷಿಸಿದ ಮೈತ್ರಿ ಪಕ್ಷಗಳು!: ಪ್ರಣಾಳಿಕೆಯಲ್ಲಿ ಏನಿದೆ?
ಅಮರಾವತಿ, ಮೇ 01: ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಕೆಲವೆಡೆ ವಿಧಾನಸಭಾ ಚುನಾವಣೆ ಸಹ ನಡೆಯಲಿದೆ. ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಉಚಿತ ಯೋಜನೆ ನೀಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಪಕ್ಷ ಸಿಲೆಂಡರ್ ಆಯ್ತು, ಹಣ ಆಯ್ತು, ಇದೀಗ ಉಚಿತ ನಿವೇಶನ (Site) ಕೊಡುವುದಾಗಿ ಘೋಷಿಸಿದೆ.
ಹೌದು, ಆಂಧ್ರಪ್ರದೇಶದಲ್ಲಿ ಮೇ 13ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಈ ಮೈತ್ರಿ ಪಕ್ಷಗಳು ಗೆದ್ದರೆ ಭರ್ಜರಿ ಭಾಗ್ಯಗಳನ್ನು ನೀಡುವುದಾಗಿ ಘೋಷಿಸಿದೆ.

ಸದ್ಯ ಆಂಧ್ರಪ್ರದೇಶದಲ್ಲಿ ಗೆಲ್ಲಲು ತೆಲುಗು ದೇಶಂ ಪಕ್ಷ (TDP), ಜನಸೇನಾ ಮತ್ತು ಬಿಜೆಪಿ ಮೂರು ಚುನಾವಣೆ ಸಂಬಂಧ ಮೈತ್ರಿ ಮಾಡಿಕೊಂಡಿವೆ. ಟಿಡಿಪಿ ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷ ನಟ ಪವನ್ ಕಲ್ಯಾಣ್ ಹಾಗೂ ಬಿಜೆಪಿ ಮೈತ್ರಿ ಕೂಟದ ಪ್ರಣಾಳಿಕೆ ಮಂಗಳವಾರ ಬಿಡುಗಡೆ ಆಗಿದೆ.
900 ಚದರಡಿ ನಿವೇಶನ ಉಚಿತ
ಈ ಪ್ರಣಾಳಿಕೆಯಲ್ಲಿ ಬಡವರಿಗೆ 900 ಚದರಡಿ ಉಚಿತ ಸೈಟ್, ಉಚಿತ ಬಸ್ ಪ್ರಯಾಣ, ಮಹಿಳೆಯರಿಗೆ ಪಿಂಚಣಿಯಂತಹ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮೈತ್ರಿ ಪಕ್ಷಗಳು ಪ್ರಣಾಳಿಕೆಯಲ್ಲಿ ತಿಳಿಸಿವೆ.

ಬಡವರಿಗೆ 900 ಚದರ ಅಡಿಯ ಉಚಿತ ಭೂಮಿ, ಮನೆ ಕಟ್ಟಲು ಉಚಿತ ಮರಳು, ತಲ್ಲಕಿ ವಂಡನಮ್ ಯೋಜನೆಯಲ್ಲಿ ದಾಖಲಾದ ಶಾಲಾ ಮಕ್ಕಳಿಗೆ ವಾರ್ಷಿಕ 15,000 ರೂಪಾಯಿ, ಮನೆಗಳಿಗೆ ಉಚಿತ ನೀರು ಸಂಪರ್ಕ, ಉಚಿತ ಕುಡಿಯುವ ನೀರು, ಮೀನುಗಾರಿಕೆ ನಿಷೇಧ ಅವಧಿಯಲ್ಲಿ 20000 ರೂ. ಆರ್ಥಿಕ ನೆರವು, ವಾಸಿಸುವವನೆ ಭೂಮಿ ಮಾಲೀಕ ಕಾಯ್ದೆ ರದ್ದು ಭರವಸೆಗಳನ್ನು ನೀಡಿದೆ.
ರೂ.25 ಲಕ್ಷ ಆರೋಗ್ಯ ವಿಮೆ ಸೌಲಭ್ಯ
ದೋಣಿ ರಿಪೇರಿಗೆ ಸಹಾಯಧನ, ಸಣ್ಣ ವ್ಯಾಪ್ತಿಗಳಿಗೆ ಬಡ್ಡಿ ರಹಿತ ಸಾಲ, ಹಿಂದುಳಿದ ಜಾತಿಗಳ ರಕ್ಷಣೆಗೆ ವಿಶೇಷ ಕಾಯ್ದೆ, ಎಲ್ಲ ಕುಟುಂಬಗಳಿಗೆ 25 ಲಕ್ಷ ರೂ.ನ ಆರೋಗ್ಯ ವಿಮೆ, ಅಪಘಾತ ಸಾವಿಗೆ ಹತ್ತು ಲಕ್ಷ ರೂ. ವಿಮೆ ಯೋಜನೆ ಜಾರಿ ಸೇರಿದಂತೆ ಹಲವು ಭರವಸೆಗಳನ್ನು ಮೈತ್ರಿಕೂಟ ತಿಳಿಸಿದೆ.
ಸಾಮಾನ್ಯ ಎಂಬಂತಾದ ಉಚಿತ ಭಾಗ್ಯಗಳ ಘೋಷಣೆ
ಈ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಉಚಿತ ಐದು ಗ್ಯಾರೆಂಟಿಗಳನ್ನು ಘೋಷಿಸಿತ್ತು. ನಂತರ ಅದೇ ರೀತಿ ಉಚಿತ ಘೋಷಣೆಗಳನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಇವೆರಡು ರಾಜ್ಯಗಳಲ್ಲಿ ಸಹ ಕಾಂಗ್ರೆಸ್ ಗೆದ್ದಿತ್ತು. ಇದೀಗ ಚುನಾವಣೆಗಳಲ್ಲಿ ಉಚಿತ ಘೋಷಣೆಗಳನ್ನು ಹಲವು ಪಕ್ಷಗಳು ಅನುಸರಿಸುತ್ತಿವೆ.












Click it and Unblock the Notifications