Amul Milk Price: ಇಂದಿನಿಂದ ಅಮುಲ್ ಹಾಲಿನ ಬೆಲೆ ಹೆಚ್ಚಳ, ದರ ಪಟ್ಟಿ ಇಲ್ಲಿದೆ
ಅಹಮದಾಬಾದ್, ಜೂನ್. 03: ಅಮುಲ್ ಹಾಲಿನ ಬೆಲೆಯನ್ನು ಸೋಮವಾರದಿಂದ ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸಲಾಗುವುದು ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಘೋಷಿಸಿದೆ. ಅಮುಲ್ ಹಾಲಿಗೆ ಇರುವ ಹೆಚ್ಚಿನ ಬೇಡಿಕೆ ಮತ್ತು ಉತ್ಪಾದನಾ ವೆಚ್ಚದ ಹೆಚ್ಚಳವನ್ನು ಉಲ್ಲೇಖಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ಅಮುಲ್ ಹಾಲಿನ ದರವನ್ನು ಎಲ್ಲಾ ಅಮುಲ್ ಉತ್ಪನ್ನಗಳಿಗೂ ಅನ್ವಯಿಸಲಾಗುತ್ತದೆ. ಎಲ್ಲಾ ಉತ್ಪನ್ನಗಳಿಗೂ ಅಮುಲ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂಪಾಯಿಗೆ ಹೆಚ್ಚಿಸಲಾಗಿದೆ. ಸೋಮವಾರದಿಂದ (ಜೂನ್ 3) ಬೆಲೆ ಏರಿಕೆ ಜಾರಿಗೆ ಬರಲಿದೆ. ಇದರೊಂದಿಗೆ ದೇಶದಾದ್ಯಂತ ಎಲ್ಲ ಮಾರುಕಟ್ಟೆಗಳಲ್ಲಿ ಅಮುಲ್ ಹಾಲಿನ ಪೌಚ್‌ನ ಬೆಲೆ ಲೀಟರ್‌ಗೆ 2 ರೂಪಾಯಿ ಏರಿಕೆಯಾಗಲಿದೆ. GCMMF ಕೊನೆಯ ಬಾರಿಗೆ ಹಾಲಿನ ದರವನ್ನು ಫೆಬ್ರವರಿ 2023 ರಲ್ಲಿ ಹೆಚ್ಚಿಸಿತು.

"ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳವು ಎಂಆರ್‌ಪಿಯಲ್ಲಿ 3-4% ಹೆಚ್ಚಳವಾದಂತಿದೆ. ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ. ಫೆಬ್ರವರಿ 2023 ರಿಂದ, ಪ್ರಮುಖ ಮಾರುಕಟ್ಟೆಗಳಲ್ಲಿ ಅಮುಲ್ ಪೌಚ್ ಹಾಲು ಬೆಲೆಗಳಲ್ಲಿ ಯಾವುದೇ ಹೆಚ್ಚಳವನ್ನು ಮಾಡಿಲ್ಲ ಎಂಬುದನ್ನು ಗಮನಿಸಬೇಕು" ಎಂದು ಜಿಸಿಎಂಎಂಎಫ್ ಹೇಳಿಕೆಯಲ್ಲಿ ತಿಳಿಸಿದೆ.
'ಅಮುಲ್' ಬ್ರಾಂಡ್‌ನಡಿಯಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಜಿಸಿಎಂಎಂಎಫ್‌ನ ಎಂಡಿ ಜಯನ್ ಮೆಹ್ತಾ, ಹೆಚ್ಚಿದ ಉತ್ಪಾದನಾ ವೆಚ್ಚವನ್ನು ರೈತರಿಗೆ ಸರಿದೂಗಿಸಲು ಈ ಏರಿಕೆ ಅಗತ್ಯ ಎಂದು ಹೇಳಿದ್ದಾರೆ. ಈಗ ಎರಡು ರೂಪಾಯಿ ಏರಿಕೆಯೊಂದಿಗೆ, 500 ಮಿಲಿ ಅಮುಲ್ ಎಮ್ಮೆ ಹಾಲು 36 ರೂ., 500 ಮಿಲಿ ಅಮುಲ್ ಗೋಲ್ಡ್ ಹಾಲು 33 ರೂ. ಮತ್ತು 500 ಮಿಲಿ ಅಮುಲ್ ಶಕ್ತಿ ಹಾಲಿಗೆ 30 ರೂಪಾಯಿ ಆಗಲಿದೆ.
ಜಿಸಿಎಂಎಂಎಫ್ ಪ್ರಕಾರ, ಅಮುಲ್ ಒಂದು ಪಾಲಿಸಿಯಂತೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯ ಸುಮಾರು 80 ಪೈಸೆಗಳನ್ನು ಹಾಲು ಉತ್ಪಾದಕರಿಗೆ ನೀಡಲಾಗುತ್ತದೆ. "ಬೆಲೆ ಪರಿಷ್ಕರಣೆಯು ನಮ್ಮ ಹಾಲು ಉತ್ಪಾದಕರಿಗೆ ಲಾಭದಾಯಕ ಹಾಲಿನ ಬೆಲೆಗಳನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿನ ಹಾಲು ಉತ್ಪಾದನೆಗೆ ಅವರನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ" ಎಂದು ತಿಳಿಸಿದೆ.












Click it and Unblock the Notifications