ಲಾಕ್ ಡೌನ್ ವಿಸ್ತರಣೆ; ಸಿಎಂಗಳ ಅಭಿಪ್ರಾಯ ಕೇಳಿದ ಅಮಿತ್ ಶಾ
ನವದೆಹಲಿ, ಮೇ 28 : ಕೊರೊನಾ ವೈರಸ್ ಸೋಂಕು ಹರಡದಂತೆ ಜಾರಿಗೊಳಿಸಿರುವ 4ನೇ ಹಂತದ ಲಾಕ್ ಡೌನ್ ಮೇ 31ರಂದು ಅಂತ್ಯಗೊಳ್ಳಲಿದೆ. ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತು ಕೇಂದ್ರ ಗೃಹ ಸಚಿವರು ರಾಜ್ಯಗಳ ಮುಖ್ಯಮಂತ್ರಿಗಳ ಅಭಿಪ್ರಾಯ ಕೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ.
ಲಾಕ್ ಡೌನ್ ಮುಂದುವರೆಸಬೇಕೆ?, ಹೇಗೆ ಅದನ್ನು ಹಂತ-ಹಂತವಾಗಿ ತೆಗೆಯಬಹುದು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯವನ್ನು ನೀಡಲಿದ್ದಾರೆ. ಈಗಾಗಲೇ ಹಿಮಾಚಲ ಪ್ರದೇಶ ಸರ್ಕಾರ ಜೂನ್ 30ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಸಂಸದೀಯ ಕಾರ್ಯದರ್ಶಿಗಳು ಎಲ್ಲಾ ಮುಖ್ಯಮಂತ್ರಿಗಳ ಅಭಿಪ್ರಾಯವನ್ನು ಸಂಗ್ರಹಣೆ ಮಾಡಿ ಅಮಿತ್ ಶಾಗೆ ವರದಿ ನೀಡಲಿದ್ದಾರೆ. ಇನ್ನೂ ಎರಡು ದಿನದಲ್ಲಿ ಲಾಕ್ ಡೌನ್ ವಿಸ್ತರಣೆಯಾಗಲಿದೆಯೇ?, ಇಲ್ಲವೇ? ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿವೆ.
ಪ್ರತಿ ಬಾರಿ ಲಾಕ್ ಡೌನ್ ವಿಸ್ತರಣೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸುತ್ತಿದ್ದರು. ಆದರೆ, ಈ ಬಾರಿ ಇನ್ನೂ ಸಭೆಯನ್ನು ನಡೆಸಿಲ್ಲ.
ಭಾನುವಾರ ಮನ್ ಕೀ ಬಾತ್ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಗ ಲಾಕ್ ಡೌನ್ ವಿಸ್ತರಣೆ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇದೆ.












Click it and Unblock the Notifications