ಕೇಂದ್ರ ಗೃಹ ಖಾತೆ ಅಮಿತ್ ಶಾ ಅವರಿಗೋ, ಮತ್ತಾರಿಗೋ?
ನವದೆಹಲಿ, ಮೇ 30 : ಲೋಕಸಭಾ ಚುನಾವಣೆ ಯಶಸ್ಸಿನ ರೂವಾರಿ ಮತ್ತು ಗಾಂಧಿನಗರದಿಂದ ಜಯಿಸಿ ಸಂಸತ್ ಪ್ರವೇಶಿಸಿರುವ ಅಮಿತ್ ಶಾ ಅವರು ನರೇಂದ್ರ ಮೋದಿ ಅವರು ಕೇಂದ್ರ ಸಂಪುಟ ಸೇರುವುದು ಹೆಚ್ಚೂಕಡಿಮೆ ಖಚಿತವಾಗಿರುವುದರಿಂದ ಅವರಿಗೆ ಯಾವ ಖಾತೆ ಸಿಗಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಮುಂಬರುವ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅಮಿತ್ ಶಾ ಅವರನ್ನು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿಯೇ ಮುಂದುವರಿಸಲಾಗುವುದು ಎಂಬ ಬಗ್ಗೆ ಮಾತು ಕೇಳಿಬಂದಿತ್ತು. ಆದರೆ, ಇದೀಗ ಬಂದಿರುವ ಮಾಹಿತಿಯ ಪ್ರಕಾರ, ಅವರು ಮೋದಿಯವರ ಕೇಂದ್ರ ಸಂಪುಟ ಸೇರಲಿದ್ದಾರೆ.
ಒಂದು ವೇಳೆ ಅವರು ಕೇಂದ್ರ ಸಚಿವರಾಗಿ ಪ್ರಮಾಣ ಸ್ವೀಕರಿಸಿದರೆ ಇಂಥದೇ ಖಾತೆ ನೀಡಬೇಕೆಂದು ಅವರ ಅಭಿಮಾನಿಗಳು ಈಗಾಗಲೆ ಬೇಡಿಕೆ ಇಡಲು ಪ್ರಾರಂಭಿಸಿದ್ದಾರೆ. ಅವರ ಪ್ರಕಾರ, ಅತ್ಯಂತ ಪ್ರಮುಖ ಹುದ್ದೆಯಾದ ಗೃಹ ಖಾತೆ ಅಮಿತ್ ಶಾ ಅವರಿಗೆ ಸಿಗಬೇಕು. ಇದನ್ನು ಹಿಂದಿನ ಸರಕಾರದಲ್ಲಿ ನಿಭಾಯಿಸುತ್ತಿದ್ದ ರಾಜನಾಥ್ ಸಿಂಗ್ ಅವರಿಗೆ ಬೇರೆ ಖಾತೆ ನೀಡಬೇಕೆಂಬುದು ಅವರ ಆಗ್ರಹ.

ಆದರೆ, ಅವರಿಗೆ ಅತ್ಯಂತ ಮಹತ್ತರವಾದ ಹಣಕಾಸು ಖಾತೆಯನ್ನು ನೀಡಲಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಆ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ, ಆದರೆ, ಅನಾರೋಗ್ಯದಿಂದ ಬಳಲುತ್ತಿರುವ ಅರುಣ್ ಜೇಟ್ಲಿ ಅವರು ಸಂಪುಟದಲ್ಲಿ ಜವಾಬ್ದಾರಿ ನೀಡಬಾರದು ಎಂದು ಮನವಿ ಮಾಡಿಕೊಂಡಿರುವುದರಿಂದ, ಆ ಖಾತೆ ಯಾರಿಗೆ ಸಿಗಲಿದೆ ಎಂಬುದು ಸದ್ಯಕ್ಕೆ ಚಿದಂಬರ ರಹಸ್ಯವಾಗಿದೆ.
ಹಿಂದೆ ಅರುಣ್ ಜೇಟ್ಲಿ ಅವರು ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದಾಗ, 16ನೇ ಲೋಕಸಭೆಯ ಕಟ್ಟಕಡೆಯ ಮಧ್ಯಂತರ ಆಯವ್ಯಯವನ್ನು ಪಿಯೂಶ್ ಗೋಯಲ್ ಅವರು ಮಂಡಿಸಿದ್ದರು. ಈ ಬಾರಿ ಅವರಿಗೇ ಆ ಖಾತೆ ನೀಡಿದರೂ ಅಚ್ಚರಿಯಿಲ್ಲ. ಹಾಗೆಯೆ, ಗೃಹ ಖಾತೆಯನ್ನು ರಾಜನಾಥ್ ಸಿಂಗ್ ಅವರೇ ಇಟ್ಟುಕೊಳ್ಳಲಿದ್ದಾರೆ ಮತ್ತು ಕೇಂದ್ರ ರಕ್ಷಣಾ ಖಾತೆ ನಿರ್ಮಲಾ ಸೀತಾರಾಮನ್ ಅವರೇ ನಿಭಾಯಿಸಲಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ.












Click it and Unblock the Notifications