ಹಿಜಾಬ್ ವಿವಾದದ ನಡುವೆ ಮಹಿಳಾ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ
ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ದಲ್ಲಿ ಮೊದಲ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಹಿಳಾ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದರು. ಕರ್ನಾಟಕದಲ್ಲಿ ಹಿಜಾಬ್ ವಿವಾದ ಸೃಷ್ಟಿಯಾಗಿರುವುದರ ಮಧ್ಯೆ ಬಿಜೆಪಿಯು ಸದಾ ಮಹಿಳಾ ಹಕ್ಕುಗಳ ಪರವಾಗಿರುತ್ತದೆ ಎಂದು ಹೇಳಿದ್ದಾರೆ. ಆ ಮೂಲಕ ಮುಸ್ಲಿಂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಲು ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅತ್ಯಗತ್ಯ ಎಂದಿದ್ದಾರೆ.
ಗುರುವಾರ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, 11 ಜಿಲ್ಲೆಗಳಲ್ಲಿ 58 ವಿಧಾನಸಭೆ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದರ ಮಧ್ಯೆ ಇನ್ನೊಂದು ದಿಕ್ಕಿನಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ ಪ್ರಧಾನಿ ಮೋದಿ ಮುಸ್ಲಿಂ ಮಹಿಳೆಯರ ಹಕ್ಕುಗಳ ಪರವಾಗಿ ಮಾತನಾಡಿದ್ದಾರೆ.
ಬಿಜೆಪಿಯು ಮುಸ್ಲಿಂ ಮಹಿಳೆಯರ ಪರ ನಿಲ್ಲುವುದು:
"ಬಿಜೆಪಿ ಸರ್ಕಾರ ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್‌ನಿಂದ ಮುಕ್ತಗೊಳಿಸಿತು. ಮುಸ್ಲಿಂ ಮಹಿಳೆಯರು ಮೋದಿ ಸರ್ಕಾರವನ್ನು ಬಹಿರಂಗವಾಗಿ ಬೆಂಬಲಿಸಲು ಪ್ರಾರಂಭಿಸಿರುವುದನ್ನು ವಿರೋಧಿಗಳಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಿದ್ದರೂ ನಾವು ದೇಶದ ಪ್ರತಿಯೊಬ್ಬ ಮುಸ್ಲಿಂ ಮಹಿಳೆಯೊಂದಿಗೆ ನಿಲ್ಲುತ್ತೇವೆ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಹೊತ್ತಿಕೊಂಡಿರುವ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದದ ಕಿಡಿ ರಾಜ್ಯ-ರಾಷ್ಟ್ರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕುತ್ತಿದೆ. ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ತಿಳಿಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ ಮೂರು ದಿನಗಳವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿದ ಘಟನೆ ನಂತರ ರಾಜ್ಯದಲ್ಲಿ ವಿವಾದ ಹುಟ್ಟಿಕೊಂಡಿತು. ಕಳೆದ ತಿಂಗಳು ಹುಟ್ಟಿಕೊಂಡ ವಿವಾದ ಮಂಗಳವಾರದ ಹೊತ್ತಿಗೆ ರಾಜ್ಯಾದ್ಯಂತ ಪ್ರತಿಭಟನೆ ಮತ್ತು ಆಕ್ರೋಶದ ಕಿಡಿಯನ್ನು ಹೊತ್ತಿಸಿದೆ.
ಕುಟುಂಬ ರಾಜಕಾಣರದ ವಿರುದ್ಧ ವಾಗ್ದಾಳಿ:
ಸಹರಾನ್‌ಪುರದಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಉತ್ತರ ಪ್ರದೇಶದಲ್ಲಿ ಈ ಹಿಂದಿನ ಸರ್ಕಾರಗಳು ತಮ್ಮ ಕುಟುಂಬಗಳ ಬಗ್ಗೆ ನೋಡಿಕೊಂಡವೇ ಹೊರತೂ ಜನರ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ಕಿಡಿ ಕಾರಿದರು. "ಯಾರಾದರೂ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದರೆ ನೆನಪಿನಲ್ಲಿಡಿ ಅವುಗಳು ಸಾಮಾನ್ಯವಾಗಿ ಖಾಲಿ, ಬೇಜವಾಬ್ದಾರಿ ಭರವಸೆಗಳೇ ಆಗಿರುತ್ತವೆ. ಅವರು ಹೊಸಬೆಳಕನ್ನು ಮೂಡಿಸುವ ಭರವಸೆ ನೀಡಿದರೂ ಉತ್ತರ ಪ್ರದೇಶವನ್ನು ಕತ್ತಲೆಯಲ್ಲಿಟ್ಟರು," ಎಂದು ಪ್ರಧಾನಿ ಮೋದಿ ದೂಷಿಸಿದ್ದಾರೆ.
ಯೋಗಿ ಸರ್ಕಾರವನ್ನು ಹಾಡಿ ಹೊಗಳಿದ ಪ್ರಧಾನಿ:
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ, "ರಾಜ್ಯದ ಬಿಜೆಪಿ ಸರ್ಕಾರವು ಬಡವರಿಗೆ ಉಚಿತ ಮನೆಗಳನ್ನು ಮತ್ತು ಉತ್ತಮ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುತ್ತಿರುವುದು ಬಹಳ ಮುಖ್ಯವಾಗಿದೆ. ರೈತರ ಖಾತೆಗಳಿಗೆ ನೇರವಾಗಿ ಹಣ ತಲುಪಲು, ಯುಪಿಯಲ್ಲಿ ಬಿಜೆಪಿ ಸರ್ಕಾರ ಅಗತ್ಯವಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಬಡವರು ಪಡಿತರ ಪಡೆಯಲು ಬಿಜೆಪಿ ಅಗತ್ಯವಾಗಿದೆ," ಎಂದು ಮೋದಿ ಹೇಳಿದರು.
ಗಲಭೆಮುಕ್ತ ಮತ್ತು ಮಹಿಳಾ ಸುರಕ್ಷತೆಗಾಗಿ ಬಿಜೆಪಿಗೆ ಮತ:
ಉತ್ತರ ಪ್ರದೇಶವನ್ನು ಗಲಭೆಮುಕ್ತವಾಗಿರಿಸಲು ಹಾಗೂ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಆತಂಕಮುಕ್ತ ವಾತಾವರಣವನ್ನು ಸೃಷ್ಟಿಸುವುದಕ್ಕೆ ಬಿಜೆಪಿಗೆ ಮತವನ್ನು ನೀಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.












Click it and Unblock the Notifications