1 ಸಾವಿರದ ಆಸೆ ತೋರಿಸಿ 23 ಲಕ್ಷ ರೂಪಾಯಿ ಮಹಾ ಮೋಸ!
ಹಣ ಇದ್ದರೆ ಜೀವನ, ಹಣ ಇಲ್ಲದೇ ಹೋದರೆ ಜೀವನವೇ ಇಲ್ಲ ಅನ್ನೋ ಮಾತನ್ನ ಪ್ರತಿ ದಿನವೂ ನಾವು ಕೇಳುತ್ತಾ ಇರುತ್ತೇವೆ. ಆದರೆ ಹಣವನ್ನ ನಾವು ಉತ್ತಮವಾದ ಹಾದಿಯಲ್ಲಿ ದುಡಿಯಬೇಕು. ಅಕಸ್ಮಾತ್ ಅಡ್ಡದಾರಿಯಲ್ಲಿ ದುಡಿದರೆ ಹಣ ಕೈಯಲ್ಲಿ ಉಳಿಯುವುದಿಲ್ಲ. ಇಂತಹ ಮಾತನ್ನು ಹಿರಿಯರಿಂದ ನಾವು ಕೇಳಿ ಕೂಡ, ಹಲವರು ಅಡ್ಡ ದಾರಿಯಲ್ಲಿ ಹಣ ಮಾಡಲು ಹೋಗಿ ಮೋಸ ಹೋದ ಘಟನೆ ನೋಡುತ್ತಿದ್ದೇವೆ. ಇದೇ ರೀತಿ ಎಂಬಿಎ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿ 1 ಸಾವಿರದ ಆಸೆಗೆ 23 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ!
ಜಗತ್ತಿನಲ್ಲಿ ಎಂತೆಂತಹ ಮೋಸಗಾರರು ಇದ್ದಾರೆ ಅನ್ನೋದು ನಿಮಗೆಲ್ಲಾ ಚೆನ್ನಾಗಿ ಗೊತ್ತಿದೆ. ಅದರಲ್ಲೂ ಆನ್‌ಲೈನ್ ಜಮಾನ ಶುರುವಾದ ನಂತರ ಮೋಸಗಾರರಿಗೆ ಕಡಿಮೆ ಏನು ಇಲ್ಲ ಬಿಡಿ. ಕಣ್ಣು ಮುಚ್ಚಿ ಕಣ್ಣು ಬಿಡುವ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಇದ್ದ ಹಣ ಮಾಯ ಮಾಡುತ್ತಾರೆ ಖದೀಮರು. ಹೀಗಾಗಿಯೇ, ಆನ್‌ಲೈನ್ ಮೂಲಕ ಏನೇ ವ್ಯವಹಾರ ಮಾಡುತ್ತಿದ್ದರೂ ಎಚ್ಚರಿಕೆ ವಹಿಸಬೇಕು. ಇಲ್ಲ ಅಂದ್ರೆ ಉಂಡೆ ನಾಮ ಗ್ಯಾರಂಟಿ. ಹೀಗೆಯೇ ಇಲ್ಲೊಬ್ಬ ಎಂಬಿಎ ವಿದ್ಯಾರ್ಥಿ ಯಾರೋ ವಂಚಕರ ಮಾತು ಕೇಳಿ ಕೇವಲ 1 ಸಾವಿರ ರೂ. ಆಸೆಗೆ, 23 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.

ವಂಚಕರ ಬಲೆಗೆ 23 ಲಕ್ಷ ಲಾಸ್!
ಅಷ್ಟಕ್ಕೂ ಈ ವಂಚನೆಯ ಕಥೆ ಶುರುವಾಗಿದ್ದು 2023 ರ ನವೆಂಬರ್ 17 ರಂದು. ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಷನ್ ಅಲ್ಲಿ ಹೂಡಿಕೆ ಸಲಹೆಗಾರ ಎಂಬ ಸೋಗಿನಲ್ಲಿ, ವಂಚಕರು ಬಲೆ ಹಾಕಿದ್ದರು. ವಂಚಕರು ವಿದ್ಯಾರ್ಥಿಯನ್ನು ಸಂಪರ್ಕಿಸಿ, ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮೊದಲು ವಿದ್ಯಾರ್ಥಿ 1,000 ಹೂಡಿಕೆ ಮಾಡಿ ಅದಕ್ಕೆ ಪ್ರತಿಯಾಗಿ 1400 ರೂಪಾಯಿ ಗಳಿಸಿದ್ದ. ಆ ಮೂಲಕ ವಿದ್ಯಾರ್ಥಿ ನಂಬಿಕೆ ಗಿಟ್ಟಿಸಿಕೊಳ್ಳುವಲ್ಲಿ ವಂಚಕರು ಯಶಸ್ವಿಯಾಗಿದ್ದರು. ನಂತರ ಮತ್ತೊಂದು ಖತರ್ನಾಕ್ ಐಡಿಯಾ ಮಾಡಿದ್ದರು. ವಿದ್ಯಾರ್ಥಿಗೆ ಸಾವಿರ, ಸಾವಿರ ರೂಪಾಯಿ ಲಾಭ ಕೊಟ್ಟು ಕೊನೆಗೆ ಬಲೆಗೆ ಬೀಳಿಸಿಕೊಂಡು ಮಹಾಮೋಸ ಮಾಡಿದ್ದಾರೆ.
ಏನಿದು ವಂಚನೆಯ ಜಾಲ?
ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಗ್ಪುರದ ಕಾಲೇಜು ಒಂದರಲ್ಲಿ. ವಿದ್ಯಾರ್ಥಿ ಒಬ್ಬ ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವು ಸಿಗುತ್ತದೆ ಎಂಬ ವಂಚಕರ ಮಾತಿಗೆ ತಲೆದೂಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಮಹಾರಾಷ್ಟ್ರ ನಾಗ್ಪುರದ ಕಾಲೇಜು ಒಂದರ ವಿದ್ಯಾರ್ಥಿ ಆಗಿದ್ದ, ಎಂಬಿಎ ಸ್ಟೂಡೆಂಟ್ ಹೀಗೆ ವಂಚಕರ ಮಾತು ಕೇಳಿ ₹23 ಲಕ್ಷ ಮೋಸ ಹೋಗಿದ್ದಾನೆ. ಪಶ್ಚಿಮ ಬಂಗಾಳದ ಹೂಗ್ಲಿ ಮೂಲದ 28 ವರ್ಷದ ವಿದ್ಯಾರ್ಥಿಗೆ ಈ ರೀತಿ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮೊದಲಿಗೆ ಸಾವಿರ ಸಾವಿರ ರೂ. ಹೂಡಿಕೆ ಮಾಡಿಸಿಕೊಂಡ ವಂಚಕರು ಕೊನೆಗೆ ವಿದ್ಯಾರ್ಥಿ ಕಡೆಯಿಂದ 23 ಲಕ್ಷ ರೂಪಾಯಿ ಪಡೆದು ವಂಚಿಸಿ ಎಸ್ಕೇಪ್ ಆಗಿದ್ದಾರೆ.
ಒಟ್ನಲ್ಲಿ ಕಣ್ಣ ಮುಂದೆ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತನ್ನು ಮರೆತ ಎಂಬಿಎ ವಿದ್ಯಾರ್ಥಿ ಈಗ 23 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಈ ಮೂಲಕ ಪರದಾಟ ಕೂಡ ಪಡುತ್ತಿದ್ದಾನೆ. ಈ ರೀತಿ ವಿದ್ಯಾವಂತರೇ ದುಡ್ಡು ಕಳೆದುಕೊಂಡ ಪ್ರಸಂಗ, ಈಗ ಸದ್ದನ್ನೂ ಮಾಡುತ್ತಿದೆ. ಹಾಗೇ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ.












Click it and Unblock the Notifications