ಗೋವಾ ವಿಧಾನಸಭೆ: ಮಣಿಪುರ ಹಿಂಚಾಚಾರಕ್ಕೆ ಪ್ರತಿಭಟನೆ, ಎಲ್ಲಾ 7 ಪ್ರತಿಪಕ್ಷ ಸದಸ್ಯರ ಅಮಾನತು!
ಪಣಜಿ, ಜುಲೈ. 31: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಗೋವಾ ವಿಧಾನಸಭೆಯ ಎಲ್ಲಾ ಏಳು ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿ ಸದನದಲ್ಲಿ ಗದ್ದಲವನ್ನು ಸೃಷ್ಟಿಸಿದ ನಂತರ ಸೋಮವಾರ ಎಲ್ಲರನ್ನು ಅಮಾನತು ಮಾಡಲಾಗಿದೆ. ಎರಡು ದಿನಗಳ ಕಾಲ ಅಮಾನತು ಮಾಡಿ ಆದೇಶಿಸಲಾಗಿದೆ.
ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ, ಕಾಂಗ್ರೆಸ್ ಶಾಸಕರಾದ ಅಲ್ಟೋನ್ ಡಿಕೋಸ್ಟಾ ಮತ್ತು ಕಾರ್ಲೋಸ್ ಫೆರೇರಾ, ಆಮ್ ಆದ್ಮಿ ಪಕ್ಷದ ವೆಂಜಿ ವಿಗಾಸ್ ಮತ್ತು ಕ್ರೂಜ್ ಸಿಲ್ವಾ, ಗೋವಾ ಫಾರ್ವರ್ಡ್ ಪಾರ್ಟಿಯ ವಿಜಯ್ ಸರ್ದೇಸಾಯಿ ಮತ್ತು ರೆವಲ್ಯೂಷನರಿ ಗೋನ್ಸ್ ಪಾರ್ಟಿಯ ವೀರೇಶ್ ಬೋರ್ಕರ್ ಅಮಾನತುಗೊಂಡ ಸದಸ್ಯರು.

ಪ್ರಶ್ನೋತ್ತರ ಅವಧಿಯ ನಂತರ, ಮಣಿಪುರ ಹಿಂಸಾಚಾರದ ಕುರಿತು ಸದನದಲ್ಲಿ ಚರ್ಚೆ ನಡೆಸುವಂತೆ ಯೂರಿ ಅಲೆಮಾವೊ ಒತ್ತಾಯಿಸಿದ್ದಾರೆ. ಆದರೆ, ಕಳೆದ ಶುಕ್ರವಾರ ಈ ವಿಷಯದ ಬಗ್ಗೆ ಕ್ರೂಜ್ ಸಿಲ್ವಾ ಅವರು ಮಂಡಿಸಿದ ಖಾಸಗಿ ಸದಸ್ಯರ ನಿರ್ಣಯವನ್ನು ಸ್ಪೀಕರ್ ರಮೇಶ್ ತವಡ್ಕರ್ ಅವರು ನಿರಾಕರಿಸಿದ್ದಾರೆ. ಹೀಗಾಗಿ ವಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
In an unprecedented development, the Speaker has suspended the ENTIRE OPPOSITION from the assembly for two days, simply for demanding a discussion on #Manipur. pic.twitter.com/ibQQaSGfvt
— Aam Aadmi Party Goa (@AAPGoa) July 31, 2023
ಪ್ರತಿಪಕ್ಷದ ಸದಸ್ಯರೆಲ್ಲರೂ ಕಪ್ಪು ಬಟ್ಟೆ ಧರಿಸಿ ಸದನದಲ್ಲಿ ಗದ್ದಲ ಸೃಷ್ಟಿಸಿದರು. ಈ ವಿಚಾರದಲ್ಲಿ ಇಡೀ ದೇಶವೇ ಸಂವೇದನಾಶೀಲವಾಗಿದೆ ಎಂದು ಸ್ಪೀಕರ್ ಹೇಳಿದ್ದು, "ಕೇಂದ್ರ ಗೃಹ ಸಚಿವಾಲಯವು ಸಮಸ್ಯೆಯನ್ನು ಪರಿಶೀಲಿಸುತ್ತಿದೆ. ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಲಾಗಿದೆ. ನಾವು ಸದನದಲ್ಲಿ ಈ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಿಲ್ಲ" ಎಂದು ಸ್ಪೀಕರ್ ಉತ್ತರ ನೀಡಿದ್ದಾರೆ.

ಸ್ಪೀಕರ್ ಉತ್ತರದಿಂದ ಅತೃಪ್ತಿಗೊಂಡ ಪ್ರತಿಪಕ್ಷ ಸದಸ್ಯರು ಮಣಿಪುರ ಉಳಿಸಿ, ಮಣಿಪುರ ಉಳಿಸಿ ಎಂದು ಘೋಷಣೆ ಕೂಗುತ್ತಾ ಸದನದ ಬಾವಿಗೆ ಇಳಿಸಿದ್ದಾರೆ. ಬಿಜೆಪಿ ಆಡಳಿತದ ಸರ್ಕಾರವನ್ನು ಬೆಂಬಲಿಸುವ ಎಂಜಿಪಿ ಶಾಸಕ ಜಿತ್ ಅರೋಲ್ಕರ್ ಅವರು ಮಾತನಾಡುವುದನ್ನು ಮುಂದುವರಿಸುತ್ತಿದ್ದಂತೆ, ವಿರೋಧ ಪಕ್ಷದ ಸದಸ್ಯರು ಪೋಸ್ಟರ್‌ಗಳೊಂದಿಗೆ ಅವರತ್ತ ಧಾವಿಸಿ ಅವರನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸಿದ್ದಾರೆ.
ಇದಾದ ತಕ್ಷಣ ಪ್ರತಿಪಕ್ಷದ ಸದಸ್ಯರನ್ನು ಮಾರ್ಷಲ್‌ಗಳು ಸದನದಿಂದ ಹೊರಕ್ಕೆ ಎಳೆದುಕೊಂಡು ಬಂದಿದ್ದಾರೆ. ಘಟನೆಯ ನಂತರ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಪರಿಸರ ಸಚಿವ ನೀಲೇಶ್ ಕಬ್ರಾಲ್ ಅವರು ವಿರೋಧ ಪಕ್ಷದ ಸದಸ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದು, ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಪ್ರಮೋದ್ ಸಾವಂತ್ ಹೇಳಿದ್ದಾರೆ. ಬಳಿಕ ಸ್ಪೀಕರ್ ತವಡ್ಕರ್ ಅವರು ಏಳು ವಿರೋಧ ಪಕ್ಷದ ಶಾಸಕರನ್ನು ಸೋಮವಾರದಿಂದ ಎರಡು ದಿನಗಳ ಕಾಲ ವಿಧಾನಸಭೆಯಿಂದ ಅಮಾನತುಗೊಳಿಸಿದ್ದಾರೆ.
ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿನಿಂದ ನೂರಾರು ಜನರು ಸಾವನ್ನಪ್ಪಿದ್ದು, 500 ಕ್ಕೂ ಹೆಚ್ಚು ಗಾಯಾಳುಗಳು, 5,000 ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಮತ್ತು 60,000 ಕ್ಕಿಂತ ಹೆಚ್ಚು ಜನರನ್ನು ಆಂತರಿಕವಾಗಿ ಸ್ಥಳಾಂತರ ಮಾಡಲಾಗಿದೆ. ಶನಿವಾರ, ಭಾನುವಾರ ವಿಪಕ್ಷಗಳ ಸಂಸದರ ನಿಯೋಗ ಮಣಿಪುರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದೆ.












Click it and Unblock the Notifications