Governor: ಮಣಿಪುರ, ಮಿಜೋರಾಂ ಸೇರಿ ಐದು ರಾಜ್ಯಗಳಿಗೆ ರಾಜ್ಯಪಾಲರ ನೇಮಕ
ಜನಾಂಗೀಯ ಸಂಘರ್ಷ ನಡೆಯುತ್ತಿರುವ ಮಣಿಪುರ ಸೇರಿದಂತೆ ಐದು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. ರಾಷ್ಟ್ರಪತಿಗಳು ಐದು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಮಾಜಿ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮಣಿಪುರ ರಾಜ್ಯದ ಗವರ್ನರ್ ಆಗಿ ನೇಮಕಗೊಂಡಿದ್ದಾರೆ. ಮಾಜಿ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಮಿಜೋರಾಂ ರಾಜ್ಯದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.
ಹಿಂದೂ ಮೈತೇಯಿ ಮತ್ತು ಕುಕಿ ಕ್ರಿಶ್ಚಿಯನ್ ಸಮುದಾಯದ ನಡುವೆ ಜನಾಂಗೀಯ ಸಂಘರ್ಷ ನಡೆಯುತ್ತಿದ್ದು ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆಯ ನಡುವೆ ಹೊಸ ರಾಜ್ಯಪಾಲರ ನೇಮಕ ಮಾಡಲಾಗಿದೆ. ಮಾಜಿ ಸಚಿವ ಮತ್ತು ನಿವೃತ್ತ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಅವರನ್ನು ಮಿಜೋರಾಂ ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.

ಕೇರಳ ಮತ್ತು ಬಿಹಾರ ರಾಜ್ಯಪಾಲರಿಗೆ ರಾಜ್ಯಗಳನ್ನು ವಿನಿಮಯ ಮಾಡಲಾಗಿದೆ. ಕೇರಳ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್‌ರನ್ನು ಬಿಹಾರ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದ್ದು, ಬಿಹಾರ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಕೇರಳ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಒಡಿಶಾ ರಾಜ್ಯಪಾಲ ರಘುಬರ್ ದಾಸ್ ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದು, ಅವರ ಸ್ಥಾನಕ್ಕೆ ಮಿಜೋರಾಂ ರಾಜ್ಯಪಾಲ ಡಾ ಹರಿಬಾಬು ಕಂಬಂಪತಿ ಅವರನ್ನು ನೇಮಿಸಲಾಗಿದೆ.
ಮಣಿಪುರಕ್ಕೆ ಅಜಯ್ ಕುಮಾರ್ ಭಲ್ಲಾ
ಅಸ್ಸಾಂ ಮೇಘಾಲಯ ಕೇಡರ್‌ನ 1984-ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಅಜಯ್ ಕುಮಾರ್ ಭಲ್ಲಾ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. 2019ರಲ್ಲಿ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡ ಅವರು ಐದು ವರ್ಷಗಳ ಕಾಲ ಅಂದರೆ 2024ರವರೆಗೆ ಕರ್ತವ್ಯ ನಿಭಾಯಿಸಿದ್ದಾರೆ.
ಕೇರಳ ರಾಜ್ಯಪಾಲರ ನೇಮಕ ವಿವಾದ
ಕೇರಳ ಆಡಳಿತಾರೂಢ ಸರ್ಕಾರ ಮತ್ತು ರಾಜ್ಯಪಾಲರ ನಡುವ ವೈಮನಸ್ಸು ಉಂಟಾಗಿತ್ತು. ಮಂಗಳವಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆಯೋಜಿಸಿದ್ದ ಕ್ರಿಸ್‌ಮಸ್ ಆಚರಣೆಗೆ ಸತತ ಎರಡನೇ ವರ್ಷವೂ ಕೇರಣ ಸಿಎಂ ಪಿಣರಾಯಿ ವಿಜಯನ್ ಮತ್ತು ಸರ್ಕಾರದ ಸಚಿವರು ಗೈರು ಹಾಜರಾಗಿದ್ದರು. ವಿಶ್ವವಿದ್ಯಾಲಯಗಳಿಗೆ ಮಾಡಿದ ನೇಮಕಾತಿಗಳ ವಿಚಾರದಲ್ಲಿ ರಾಜ್ಯಪಾಲರು ಮತ್ತು ಅಧಿಕಾರದಲ್ಲಿರುವ ಸಿಪಿಐ(ಎಂ) ಮತ್ತು ಪಕ್ಷದ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐ ನಡುವೆ ವೈಮನಸ್ಸು ಉಂಟಾಗಿತ್ತು.
ಮಾಜಿ ಸಚಿವ, ಸೇನಾಧಿಕಾರಿಗೆ ರಾಜ್ಯಪಾಲರ ಹುದ್ದೆ
ನಾಗರಿಕ ವಿಮಾನಯಾನ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಾಜಿ ರಾಜ್ಯ ಸಚಿವ ಮತ್ತು ನಿವೃತ್ತ ಜನರಲ್, ವಿಕೆ ಸಿಂಗ್ ಮಿಜೋರಾಂ ರಾಜ್ಯದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. 2014 ರಿಂದ ಎರಡು ಬಾರಿ ಘಾಜಿಯಾಬಾದ್‌ನಿಂದ ಚುನಾವಣೆಗೆ ನಿಂತಿದ್ದರು. 2024ರ ಚುನಾವಣೆಗೆ ಮುನ್ನ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದರು. ಈಗ ಅವರಿಗೆ ರಾಜ್ಯಪಾಲ ಹುದ್ದೆ ಅರಸಿ ಬಂದಿದೆ.












Click it and Unblock the Notifications