ನಂಬರ್ ಪ್ಲೇಟ್ ಇಲ್ಲದ ಖಾಸಗಿ ವಾಹನದಲ್ಲಿ ನೇಹಾ ಬೋರಾ ವಶಕ್ಕೆ: ದೆಹಲಿಯಲ್ಲಿ ಹೆಚ್ಚಾಯ್ತು ಪ್ರತಿಭಟನೆಯ ಕಾವು

ದೆಹಲಿಯ ಜಂತರ್ ಮಂತರ್ ಬಳಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಭಾನುವಾರದಂದು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA)ನ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರನ್ನ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಾಸಗಿ ವಾಹನದಲ್ಲಿ ನೇಹಾ ಬೋರಾ ವಶಕ್ಕೆ

ಪ್ರತಿಭಟನಾ ನಿರತ ಐಸಾ ಕಾರ್ಯಕರ್ತರು ಮತ್ತು ವಿದ್ಯಾರ್ಥಿ ಮುಖಂಡರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ದೆಹಲಿ ಪೊಲೀಸರು ನೇಹಾ ಬೋರಾ ಅವರನ್ನ ಯಾವುದೇ ಅಧಿಕೃತ ನಂಬರ್ ಪ್ಲೇಟ್ ಇಲ್ಲದ ಖಾಸಗಿ ವಾಹನದಲ್ಲಿ ಕರೆದೊಯ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

AISA Chief Neha Bora Detained by Delhi Police During Protests Demanding CEC s Resignation Today

ಅಷ್ಟೇ ಅಲ್ಲದೆ, ಅವರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ವಾಹನದಲ್ಲಿ ಯಾವುದೇ ಮಹಿಳಾ ಪೊಲೀಸ್ ಅಧಿಕಾರಿ ಇರಲಿಲ್ಲ. ಇದು ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ವಿದ್ಯಾರ್ಥಿ ಸಂಘಟನೆಗಳು ದೂರಿದ್ದು, ಅವರನ್ನ ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬುದು ಕೂಡ ಆರಂಭದಲ್ಲಿ ತಿಳಿದಿರಲಿಲ್ಲ. ದೆಹಲಿ ಪೊಲೀಸರು ಈ ಆರೋಪಗಳ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಜಂತರ್ ಮಂತರ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಸತತ ಮೂರನೇ ದಿನವೂ ಐಸಾ ಕಾರ್ಯಕರ್ತರು ಜಂತರ್ ಮಂತರ್ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸಿದರು. ಅಶೋಕ ರಸ್ತೆಯ ಆಂಧ್ರ ಭವನ ವೃತ್ತದಿಂದ ಆರಂಭವಾದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಯುವಜನರು ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿದರು.

ಆದರೆ, ಜಂತರ್ ಮಂತರ್ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಬಿಗಿಯಾಗಿತ್ತು. ಬ್ಯಾರಿಕೇಡ್‌ಗಳನ್ನ ಅಳವಡಿಸಿ ಪ್ರತಿಭಟನಾಕಾರರನ್ನ ತಡೆಯಲು ಪೊಲೀಸರು ಯತ್ನಿಸಿದಾಗ, ಇಬ್ಬರ ನಡುವೆ ಲಘು ಸಂಘರ್ಷ ಏರ್ಪಟ್ಟಿತು. ನೇಹಾ ಬೋರಾ ಅವರು ಬ್ಯಾರಿಕೇಡ್ ಹಾರಿ ಮುಂದೆ ಹೋಗಲು ಯತ್ನಿಸುತ್ತಿರುವ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿವೆ.

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೇಳಿಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಶನಿವಾರದಂದು ಕೂಡ ಸುಮಾರು 150ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದರು.

ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ನೇಹಾ ಬೋರಾ, ಆಮ್ ಆದ್ಮಿ ಪಕ್ಷದ ನಾಯಕರು ಹಾಗೂ ಹೋರಾಟಗಾರ ಯೋಗೇಂದ್ರ ಯಾದವ್ ಸೇರಿದಂತೆ 500ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಸಮೀಪದ ಕೆಲವು ಮೆಟ್ರೋ ನಿಲ್ದಾಣಗಳಿಗೆ ಸಾರ್ವಜನಿಕರ ಪ್ರವೇಶವನ್ನ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.

ಎಸ್ಐಆರ್ ಪ್ರಕ್ರಿಯೆ ಕುರಿತು ವಿವಾದ

ಇತ್ತೀಚೆಗೆ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಎಸ್ಐಆರ್ ಪ್ರಕ್ರಿಯೆ ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬ ಅಂಶ ಮಾಧ್ಯಮವೊಂದರ ವರದಿಯಲ್ಲಿ ಬೆಳಕಿಗೆ ಬಂದಿತ್ತು. ತಮ್ಮ ಗಮನಕ್ಕೆ ತಾರದೆ ಅಥವಾ ತಮ್ಮ ಶಿಫಾರಸುಗಳಿಲ್ಲದೆ ಈ ಆದೇಶಗಳನ್ನ ಹೊರಡಿಸಲಾಗಿದೆ ಎಂದು ಇಬ್ಬರು ಆಯುಕ್ತರು ದಾಖಲೆಗಳಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು.

ಆದರೆ, ಚುನಾವಣಾ ಆಯೋಗವು ಈ ಆರೋಪಗಳನ್ನ ತಳ್ಳಿಹಾಕಿದೆ. ಆಯೋಗದ ಆಂತರಿಕ ಚರ್ಚೆಗಳಲ್ಲಿ ಭಿನ್ನಾಭಿಪ್ರಾಯಗಳು ಮತ್ತು ವೀಕ್ಷಣೆಗಳು ವ್ಯಕ್ತವಾಗುವುದು ಒಂದು ಸಹಜವಾದ ಆಡಳಿತಾತ್ಮಕ ಪ್ರಕ್ರಿಯೆ. ಆಯೋಗ ಹೊರಡಿಸುವ ಪ್ರತಿಯೊಂದು ಆದೇಶವು ಸಂಪೂರ್ಣ ಕಾನೂನುಬದ್ಧವಾಗಿದೆ ಮತ್ತು ಸ್ಥಾಪಿತ ಶಾಸನಬದ್ಧ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂದು ಚುನಾವಣಾ ಆಯೋಗ ಸಮರ್ಥಿಸಿಕೊಂಡಿದೆ. ಆದರೂ, ವಿದ್ಯಾರ್ಥಿ ಸಂಘಟನೆಗಳು ಪಾರದರ್ಶಕತೆಗೆ ಆಗ್ರಹಿಸಿ ತಮ್ಮ ಹೋರಾಟವನ್ನು ಮುಂದುವರಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+