ವಿಮಾನ ದುರಂತ: ವರದಿಯಲ್ಲಿ ಬಯಲಾಯ್ತು ರಣಭೀಕರ ಸಂಗತಿ; ಪೈಲಟ್‌ಗಳ ಸಂಭಾಷಣೆಯಲ್ಲಿತ್ತು ಪತನದ ರಹಸ್ಯ
ನವದೆಹಲಿ, ಜುಲೈ 12: ಜೂನ್ ತಿಂಗಳು ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ-171 ವಿಮಾನ ಪತನಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯೊಂದು ಇದೀಗ ಹೊರಬಿದ್ದಿದೆ. ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನ ಸಂಬಂಧ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆ ನಡೆಸಿ 15 ಪುಟಗಳ ಪ್ರಾಥಮಿಕ ತನಿಖಾ ವರದಿಯನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಕೆ ಮಾಡಿದೆ.
ಪ್ರಾಥಮಿಕ ವರದಿಯಲ್ಲಿ ವಿಮಾನ ಪತನಕ್ಕೂ ಕೆಲವೇ ಕೆಲವು ನಿಮಿಷಗಳ ಮುನ್ನ ಪೈಲಟ್‌ಗಳ ಕಾಕ್‌ಪಿಟ್ ರೆಕಾರ್ಡ್ ಆಗಿರುವ ಸಂಭಾಷಣೆಯಲ್ಲಿ ಏನಿತ್ತು ಎಂಬ ವರದಿ ಬಹಿರಂಗಗೊಂಡಿದೆ. ಲಂಡನ್ಗೆ ಹೊರಟಿದ್ದ ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್‌ಗಳು ಸ್ಥಗಿತಗೊಂಡಿದ್ದೇ ಪತನಕ್ಕೆ ಕಾರಣ. ಇಂಧನ ಪೂರೈಕೆ ಸ್ಥಗಿತವಾದ ಕಾರಣ ಎಂಜಿನ್ಗಳು ಸ್ಥಗಿತವಾಗಿದ್ದವು ಎನ್ನಲಾಗಿದ್ದು, ಈ ಕುರಿತು ಪೈಟಲ್ಗಳು ನಡೆಸಿದ್ದ ಕೊನೇ ಕ್ಷಣದ ಸಂಭಾಷಣೆ ಕೂಡ ಲಭ್ಯವಾಗಿದೆ.

ವಿಮಾನ ಪತನಗೊಳ್ಳುವ ಕೆಲ ಕ್ಷಣದಲ್ಲಿ ಕೊನೆ ಸಂಭಾಷಣೆಯಿಂದ ಕೆಲ ಸಂಗತಿಗಳು ಬಹಿರಂಗವಾಗಿವೆ. ಎಂಜಿನ್ ಸ್ಥಗಿತಗೊಂಡ ಬಗ್ಗೆ ಪೈಲಟ್ ಮತ್ತು ಸಹ-ಪೈಲಟ್ ನಡುವಿನ ಸಂಭಾಷಣೆ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ನಲ್ಲಿ ದಾಖಲಾಗಿದೆ. ಪೈಲಟ್ ಸುಮಿತ್ ಸಭರ್ವಾಲ್ ಸಹ-ಪೈಲಟ್ ಕ್ಲೈವ್ ಕುಂದರ್ ಅವರ ಬಳಿ, Why did you cut off?, ಅಂದರೆ ನೀವು ಯಾಕೆ ಕಡಿತಗೊಳಿಸಿದ್ದೀರಿ ಎಂದು ಕೇಳಿದ್ದಾರೆ. ಎಂಜಿನ್ಗೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದನ್ನು ಉದ್ದೇಶಿಸಿ ಸುಮಿತ್ ಸಭರ್ವಾಲ್ ಹೀಗೆ ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕ್ಲೈವ್ ಕುಂದರ್, ನಾನೇನೂ ಮಾಡಿಲ್ಲ ಎಂದಿದ್ದಾರೆ. ಹೀಗಾಗಿ, ತಾಂತ್ರಿಕ ದೋಷದಿಂದ ವಿಮಾನ ಅಪಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಅಹಮದಾಬಾದ್‌ನಿಂದ ಲಂಡನ್ ಗೆ ಹೊರಟು ಟೇಕಾಫ್ ಆದ ಬೆನ್ನಲ್ಲೇ ಎಂಜಿನ್‌ಗಳ ಇಂಧನ ಸ್ವಿಚ್‌ಗಳು ಇದ್ದಕ್ಕಿದ್ದಂತೆ RUN ನಿಂದ CUTOFF ಗೆ ಬದಲಾದವು. ಈ ಘಟನೆ ಕೇವಲ 1 ಸೆಕೆಂಡ್ ಅಂತರದಲ್ಲಿ ಸಂಭವಿಸಿತ್ತು. ಇದರಿಂದಾಗಿ ಎಂಜಿನ್ಗೆ ಇಂಧನ ಬರುವುದು ನಿಂತುಹೋಗಿ ಎಂಜಿನ್ ಆಫ್ ಆಗಿದೆ ಎಂದು ಪ್ರಾಥಮಿಕ ತನಿಖಾ ವರದಿಯ್ಲಿ ಉಲ್ಲೇಖಿಸಲಾಗಿದೆ. ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಎಂಜಿನ್‌ಗಳು ಇದ್ದಕ್ಕಿದ್ದಂತೆ ಆಫ್ ಆಗಿವೆ. ಇದರಿಂದಾಗಿ ವಿಮಾನ ಅಪಘಾತಕ್ಕೀಡಾಗಿದೆ.
ಡ್ರೋನ್ ಛಾಯಾಗ್ರಹಣ/ವಿಡಿಯೋಗ್ರಫಿ ಸೇರಿದಂತೆ ಅವಶೇಷಗಳ ಸ್ಥಳ ಚಟುವಟಿಕೆಗಳು ಪೂರ್ಣಗೊಂಡಿವೆ. ಅವಶೇಷಗಳನ್ನು ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ
ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಎರಡೂ ಎಂಜಿನ್‌ಗಳನ್ನು ಮರುಪಡೆಯಲಾಗಿದೆ. ಹೆಚ್ಚಿನ ಪರೀಕ್ಷೆಗಳಿಗೆ ಆಸಕ್ತಿಯ ಅಂಶಗಳನ್ನು ಗುರುತಿಸಲಾಗಿದೆ. ಇನ್ನೂ ಸಾಕ್ಷಿಗಳು ಮತ್ತು ಬದುಕುಳಿದ ಪ್ರಯಾಣಿಕರ ಹೇಳಿಕೆಯನ್ನು ತನಿಖಾಧಿಕಾರಿಗಳು ಪಡೆದುಕೊಂಡಿದ್ದಾರೆ.












Click it and Unblock the Notifications