Tamil Nadu: ತಮಿಳುನಾಡು ಚುನಾವಣೆ; ಎಐಎಡಿಎಂಕೆ - ಬಿಜೆಪಿ ಮೈತ್ರಿ ಮಹತ್ವದ ಘೋಷಣೆ ಮಾಡಿ ಅಮಿತ್ ಶಾ
ತಮಿಳುನಾಡಿನಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಬಿಜೆಪಿ ಶತಪ್ರಯತ್ನ ಮಾಡುತ್ತಲೇ ಇದೆ. ಪ್ರಾದೇಶಿಕ ಪಕ್ಷಗಳು ಬಲವಾಗಿರುವ ತಮಿಳುನಾಡಿಲ್ಲಿ ಬಿಜೆಪಿಗೆ ಗೆಲುವು ಸುಲಭವಲ್ಲ ಎಂದು ಗೊತ್ತಿದ್ದು ಪ್ರಾದೇಶಿಕ ಪಕ್ಷದ ಜೊತೆ ಕೈಜೋಡಿಸಲು ಮುಂದಾಗಿದೆ. ವಿರೋಧ ಪಕ್ಷ ಎಐಎಡಿಎಂಕೆ ಮತ್ತು ಬಿಜೆಪಿ ಒಟ್ಟಾಗಿ ತಮಿಳುನಾಡಿನ ಮುಂದಿನ ಚುನಾವಣೆಗಳನ್ನು ಎದುರಿಸಲು ಕೈಜೋಡಿಸಿವೆ. ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ನಾಯಕತ್ವದಲ್ಲಿ ಎರಡೂ ಪಕ್ಷ ಚುನಾವಣೆಗೆ ಹೋಗಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಶುಕ್ರವಾರ ಚೆನ್ನೈನಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಎರಡೂ ಪಕ್ಷಗಳು ಈ ಹಿಂದೆಯೂ ಮೈತ್ರಿ ಮಾಡಿಕೊಂಡಿದ್ದವು. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು ಎರಡೂ ಪಕ್ಷಗಳು ಇದೀಗ ಕೈಜೋಡಿಸಿವೆ. "ಅಗತ್ಯವಿದ್ದರೆ ನಾವು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸುತ್ತೇವೆ" ಎಂದು ಅಮಿತ್ ಶಾ ತಿಳಿಸಿದರು. ಪಳನಿಸ್ವಾಮಿ ಮತ್ತು ರಾಜ್ಯ ಬಿಜೆಪಿ ನಾಯಕ ಕೆ ಅಣ್ಣಾಮಲೈ ಕೂಡ ಜಂಟಿಗೋಷ್ಠಿಯಲ್ಲಿ ಹಾಜರಿದ್ದರು.

1998 ರಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ನೇತೃತ್ವದಲ್ಲಿ ಮೈತ್ರಿ ಮಾಡಿಕೊಂಡಾಗ ಲೋಕಸಭೆಯಲ್ಲಿ ಭಾರಿ ಗೆಲುವಿನ ಬಗ್ಗೆ ಅಮಿತ್ ಶಾ ನೆನಪು ಮಾಡಿಕೊಂಡರು. ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟವು ಒಂದು ಹಂತದಲ್ಲಿ 39 ಲೋಕಸಭಾ ಸ್ಥಾನಗಳಲ್ಲಿ 30 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಕೂಡ ತಮಿಳುನಾಡಿನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸುಲಭವಾಗಿ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಎಐಎಡಿಎಂಕೆಯ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಅವರು, ಜನರು ಬಿಜೆಪಿ ಕೆಲವು ವಿಷಯಗಳನ್ನು ಸ್ವಂತವಾಗಿ ನಿಭಾಯಿಸಲು ಅವಕಾಶ ನೀಡಬೇಕು ಮತ್ತು ಎಐಎಡಿಎಂಕೆ ಮೇಲೆ ಹೆಚ್ಚಿನ ಹೊರೆ ಹಾಕಬಾರದು ಎಂದು ಮನವಿ ಮಾಡಿದರು.
ಕೆ ಅಣ್ಣಾಮಲೈ ಅವರ ಬದಲಿಗೆ ಪಕ್ಷದ ತಮಿಳುನಾಡು ಮುಖ್ಯಸ್ಥರಾಗಿ ನೈನಾರ್ ನಾಗೇಂತಿರನ್ ಅವರನ್ನು ನಾಮನಿರ್ದೇಶನ ಮಾಡುವುದಾಗಿ ಬಿಜೆಪಿ ಘೋಷಿಸಿದ ನಂತರ ಈ ಘೋಷಣೆ ಹೊರಬಿದ್ದಿದೆ. ಪಕ್ಷಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಕ್ಕಾಗಿ ಅಣ್ಣಾಮಲೈ ಅವರಿಗೆ ಅಮಿತ್ ಶಾ ಧನ್ಯವಾದ ತಿಳಿಸಿದರು. ರಾಷ್ಟ್ರ ಮಟ್ಟದಲ್ಲಿ ಅಣ್ಣಾಮಲೈಗೆ ಜವಾಬ್ದಾರಿ ನೀಡುವುದಾಗಿ ಅಮಿತ್ ಶಾ ಸೂಚನೆ ಕೊಟ್ಟರು.
ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಹೋರಾಡುವ ನಿರ್ಧಾರವನ್ನು ಈಗಾಗಲೇ ನಿರ್ಧರಿಸಲಾಗಿರುವುದರಿಂದ, ಅಣ್ಣಾಮಲೈ ಅವರನ್ನು ಬದಲಾಯಿಸುವ ನಿರ್ಧಾರಕ್ಕೂ ಮೈತ್ರಿ ಘೋಷಣೆಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸ್ಪಷ್ಟನೆ ಕೊಟ್ಟಿದೆ.












Click it and Unblock the Notifications