ಸಂಸತ್ ವಿಶೇಷ ಅಧಿವೇಶನ: ಸರ್ವಪಕ್ಷ ಸಭೆಗೆ ಕೌಂಟ್‌ಡೌನ್!
ನವದೆಹಲಿ: ಬಹು ನಿರೀಕ್ಷಿತ ಸಂಸತ್ ವಿಶೇಷ ಅಧಿವೇಶನದ ಆರಂಭಕ್ಕೆ ಇನ್ನೇನು ಕೆಲವೇ ಗಂಟೆ ಬಾಕಿ. ಅದ್ರಲ್ಲೂ ಹೊಸ ಸಂಸತ್ ಭವನದಲ್ಲಿ ನಡೆಯುವ ಮೊದಲನೇ ಅಧಿವೇಶನ ಇದಾಗಿದ್ದು, ಹೀಗಿದ್ದಾಗ ವಿಶೇಷ ಅಧಿವೇಶನಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸಿದೆ. ಇದೇ ಹಿನ್ನೆಲೆಯಲ್ಲಿ ಇಂದು ಸರ್ವಪಕ್ಷ ಸಭೆ ಕರೆದು ಚರ್ಚೆಗೂ ಮುಂದಾಗಿದೆ.
ಅಷ್ಟಕ್ಕೂ ನಾಳೆಯಿಂದ ಅಂದರೆ ಸೋಮವಾರದಿಂದ ಶುಕ್ರವಾರದ ತನಕ ಐದು ದಿನ ಕಾಲ ಕೇಂದ್ರ ಸರ್ಕಾರ ಕರೆದಿರುವ ಸಂಸತ್ ವಿಶೇಷ ಅಧಿವೇಶನ ನಡೆಯಲಿದೆ. ಎಲ್ಲಾ ಪಕ್ಷಗಳಿಂದ ಅಭಿಪ್ರಾಯ, ಸಲಹೆ ಪಡೆಯಲು ಇಂದು ಸಂಜೆ ಸರ್ವ ಪಕ್ಷ ನಾಯಕರ ಸಭೆ ಕರೆಯಲಾಗಿದೆ. ಇನ್ನು ಮುಖ್ಯ ಚುನಾವಣಾ ಆಯುಕ್ತರು & ಇತರ ಚುನಾವಣಾ ಆಯುಕ್ತರ ನೇಮಕದ ಮಸೂದೆ ಮೇಲಿನ ಚರ್ಚೆಯನ್ನು ಕೂಡ ಸರ್ಕಾರ ಕಾರ್ಯಸೂಚಿಯಲ್ಲಿ ಸೇರಿಸಿದೆ. ಕಳೆದ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನ ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು. ಹೀಗೆ ಹಲವು ಪ್ರಮುಖ ಮಸೂದೆಗಳು ವಿಶೇಷ ಅಧಿವೇಶನದಲ್ಲಿ ಪಾಸ್ ಆಗುವ ಸಾಧ್ಯತೆ ಇದೆ.

ವಿಶೇಷ ಅಧಿವೇಶನದ ಅಜೆಂಡಾ ಏನು?
ಅಷ್ಟಕ್ಕೂ ಯಾವುದೇ ಸಂಭಾವ್ಯ ಹೊಸ ಶಾಸನದ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳದಿದ್ದರೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ರೀತಿಯ ಚುನಾಯಿತ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಕುರಿತು ಕೆಲ ಚರ್ಚೆಗಳು ನಡೆದಿವೆ. ಹಾಗೇ ಮೇ 28 ರಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಿದ್ದ ಹೊಸ ಕಟ್ಟಡಕ್ಕೆ ಸಂಸತ್ತು ಈಗ ಸ್ಥಳಾಂತರ ಆಗುವ ಸಾಧ್ಯತೆ ಕೂಡ ಹೆಚ್ಚಾಗಿದ್ದು, ಸಂಸತ್ ವಿಶೇಷ ಅಧಿವೇಶನ ಕುರಿತ ನಿರೀಕ್ಷೆ ದುಪ್ಪಟ್ಟಾಗಿದೆ. ಇದಕ್ಕೆ ಮೊದಲು ಅಂದರೆ ಇಂದು ಸಂಜೆ ಸರ್ವಪಕ್ಷ ಸಭೆ ನಡೆಯಲಿದೆ.
ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ತಾರಾ?
ಇನ್ನೊಂದು ಕಡೆ ಹಲವು ಪ್ರಮುಖ ಮಸೂದೆಗಳ ವಿಚಾರ ವಿಶೇಷ ಅಧಿವೇಶನ ಸಂದರ್ಭ ಚರ್ಚೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ ವಿರೋಧ ಪಕ್ಷಗಳ ನಾಯಕರ ಜೊತೆಗೆ ಚರ್ಚಿಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾ ಕೇಂದ್ರ ಸರ್ಕಾರ? ಎಂಬ ಪ್ರಶ್ನೆಯೂ ಕಾಡುತ್ತಿದೆ. ಇನ್ನೇನು ಕೆಲ ಕ್ಷಣದಲ್ಲಿ ಸರ್ವಪಕ್ಷ ಸಭೆ ಆರಂಭವಾಗಲಿದೆ. ಆದರೆ ಇದೇ ವೇಳೆ ನಾಳೆಯ ವಿಶೇಷ ಅಧಿವೇಶನದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿಗಾಗಿ ವಿರೋಧ ಪಕ್ಷದ ನಾಯಕರು ಸಜ್ಜಾಗಿದ್ದಾರೆ. ಹೀಗಾಗಿ ಇಂದು ಸಂಜೆ ನಡೆಯುವ ಸರ್ವಪಕ್ಷ ಸಭೆ ಕುತೂಹಲ ಕೆರಳಿಸಿದೆ.

ಸೆಪ್ಟೆಂಬರ್ 18ಕ್ಕೆ ನಿಗದಿಪಡಿಸಲಾದ 'ಸಂವಿಧಾನ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸತ್ತಿನ ಪಯಣ, ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳು' ಎಂಬ ಚರ್ಚೆ ಜೊತೆ ರಾಜ್ಯಸಭೆಯಲ್ಲಿ ಈಗಾಗಲೇ ಅಂಗೀಕಾರ ಆಗಿರುವ 'ವಕೀಲರ (ತಿದ್ದುಪಡಿ) ಮಸೂದೆ, 2023', ಪತ್ರಿಕಾ ಮತ್ತು ನೋಂದಣಿ ಮಸೂದೆ ಸೇರಿದಂತೆ ಇತರ ಬಿಲ್‌ಗಳ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ದಿಢೀರ್ ವಿಶೇಷ ಅಧಿವೇಶನ ಏಕೆ?
ಸಾಮಾನ್ಯವಾಗಿ ಪ್ರತಿ ವರ್ಷ ಸಂಸತ್ತಿನ ಬಜೆಟ್, ಮಾನ್ಸೂನ್ ಮತ್ತು ಚಳಿಗಾಲದ ಅಧಿವೇಶನ ನಡೆಯುವುದು ವಾಡಿಕೆ. ಮುಂಗಾರು ಅಧಿವೇಶನ ಜುಲೈ & ಆಗಸ್ಟ್‌ನಲ್ಲಿ ನಡೆದರೆ ನವೆಂಬರ್ & ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಬಜೆಟ್ ಅಧಿವೇಶನವು ಪ್ರತಿ ವರ್ಷ ಜನವರಿ ಅಂತ್ಯದಿಂದ ಪ್ರಾರಂಭವಾಗುತ್ತೆ. ಆದರೆ ಈ ಬಾರಿ ದಿಢೀರ್ ವಿಶೇಷ ಅಧಿವೇಶನ ಕರೆದಿದ್ದು ಕುತೂಹಲ ಕೆರಳಿಸಿದೆ. ಇನ್ನೇನು ಕೆಲವೇ ಹೊತ್ತಲ್ಲಿ ಸರ್ವಪಕ್ಷ ಸಭೆಯು ಕೂಡ ಶುರುವಾಗಲಿದ್ದು, ಸಭೆಯ ಬಳಿಕ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ಒಟ್ನಲ್ಲಿ ಜಿ20 ಶೃಂಗಸಭೆ ಬಳಿಕ ನಡೆಯುತ್ತಿರುವ ಸಂಸತ್ ಅಧಿವೇಶನ ಇದೀಗ ಮತ್ತೆ ಭಾರಿ ಗಮನ ಸೆಳೆದಿದೆ. ಅದೇ ರೀತಿ ನೂತನ ಸಂಸತ್ ಭವನದಲ್ಲಿ ಅಧಿವೇಶನ ಶುರುವಾಗುತ್ತಾ? ಎಂಬ ಪ್ರಶ್ನೆ ಬೇರೆ ಮೂಡಿದೆ. ಹೀಗಾಗಿ ಇಂದು ಸಂಜೆ ನಡೆಯುವ ಸರ್ವಪಕ್ಷ ಸಭೆಯಲ್ಲೇ ಈ ಪ್ರಶ್ನೆಗೆ ಉತ್ತರ ಸಿಗಬಹುದು ಅಥವಾ ನಾಳೆಯವರೆಗೂ ಕಾಯಬೇಕಾಗಿ ಬರಬಹುದು.












Click it and Unblock the Notifications