Lok Sabha Election 2024; ಬಿಜೆಪಿ ಸೇರುವವರ ಆಯ್ಕೆಗೆ ಹೊಸ ಸಮಿತಿ!
ನವದೆಹಲಿ, ಜನವರಿ 02: ಬಿಜೆಪಿ 2024ರ ಲೋಕಸಭೆ ಚುನಾವಣೆ ತಯಾರಿಯನ್ನು ಚುರುಕುಗೊಳಿಸಿದೆ. ಈ ಬಾರಿ ಮತ್ತೆ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಏರಬೇಕು ಎಂಬ ಗುರಿಯೊಂದಿಗೆ ಹೊಸ ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಇದರ ಭಾಗವಾಗಿಯೇ ಹೊಸ ಸಮಿತಿಯೊಂದನ್ನು ರಚನೆ ಮಾಡಿದೆ.
ಈ ವರ್ಷದ ಏಪ್ರಿಲ್ ಅಂತ್ಯ ಅಥವ ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾಗಿರುವ ಬಿಜೆಪಿಗೆ ಹಲವಾರು ನಾಯಕರು ಸೇರಲು ಬಯಸಿದ್ದಾರೆ. ಇಂತಹ ನಾಯಕರನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಲಾಗಿದೆ.

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಕೇಂದ್ರದ ಆಡಳಿತ ಪಕ್ಷ ಹೊಸ ಸಮಿತಿಯನ್ನು ರಚನೆ ಮಾಡಿದೆ. ಚುನಾವಣೆ ಹೊಸ್ತಿಲಲ್ಲಿ ಯಾವುದೇ ಪಕ್ಷದ ನಾಯಕರು ಬಿಜೆಪಿ ಸೇರಲು ಈ ಸಮಿತಿಯ ಹಸಿರು ನಿಶಾನೆ ಅಗತ್ಯವಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜನವರಿ 6ರಂದು ಮೊದಲ ಸಭೆ; ಬಿಜೆಪಿ ಕೇಂದ್ರ ಮಟ್ಟದಲ್ಲಿ ರಚನೆ ಮಾಡಿರುವ ಈ ಸಮಿತಿ ಬೇರೆ ಪಕ್ಷದಿಂದ ಆಗಮಿಸುವ ಯಾವ ನಾಯಕರನ್ನು ಸೇರಿಸಿಕೊಳ್ಳಬಹುದು ಎಂದು ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಹೊಸದಾಗಿ ರಚನೆಯಾಗಿರುವ ಸಮಿತಿಯ ಮೊದಲ ಸಭೆ ಜನವರಿ 6ರಂದು ನಡೆಯಲಿದೆ.
ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷಕ್ಕೆ ಸೇರ್ಪಡೆಗೊಂಡು ಚುನಾವಣೆ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರವಾಗುವವರು, ಪಕ್ಷ ಬಿಟ್ಟು ಹೋಗುವವರು ಮುಂತಾದ ನಾಯಕರನ್ನು ಸೇರಿಸಿಕೊಳ್ಳಬಹುದೇ ಎಂಬುದನ್ನು ತೀರ್ಮಾನಿಸಲು ಈ ಸಮಿತಿಯನ್ನು ರಚನೆ ಮಾಡಲಾಗಿದೆ.
ಉದಾಹರಣೆಗೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಎಂಸಿಯ ಮುಕುಲ್ ರಾಯ್ ಮತ್ತು ಬಬೂಲ್ ಸುಪ್ರಿಯೋ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆದರೆ ಚುನಾವಣೆ ಮುಗಿದು ಟಿಎಂಸಿ ಅಧಿಕಾರಕ್ಕೆ ಬರುತ್ತಿದ್ದಂತೆ ವಾಪಸ್ ಹೋಗಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸಲು ತಂತ್ರ ರೂಪಿಸಿರುವ ಬಿಜೆಪಿ ಪಕ್ಷ ಕೇಂದ್ರದಲ್ಲಿ 3ನೇ ಬಾರಿಗೆ ಸರ್ಕಾರ ರಚನೆ ಮಾಡಿ ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದೆ. ಅದಕ್ಕಾಗಿ ಹಲವಾರು ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.
ಯಾವುದೇ ರಾಜ್ಯದ ಯಾವುದೇ ಪಕ್ಷದ ಪ್ರಮುಖ ನಾಯಕ ಚುನಾವಣೆ ಸಮಯದಲ್ಲಿ ಬಿಜೆಪಿ ಸೇರಲು ಬಯಸಿದರೆ ಈ ಸಮಿತಿ ಅದನ್ನು ಪರಿಶೀಲನೆ ನಡೆಸಲಿದೆ. ಸಮಿತಿಯ ಒಪ್ಪಿಗೆ ಇಲ್ಲದೇ ಯಾವ ನಾಯಕರು ಪಕ್ಷ ಸೇರುವಂತಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ.
ಲೋಕಸಭೆ ಚುನಾವಣೆ ಕಾರ್ಯತಂತ್ರ, ಉತ್ತರ ಪ್ರದೇಶದಲ್ಲಿ ರಾಮ ಮಂದಿರ ಉದ್ಘಾಟನೆ ಮುಂತಾದ ವಿಚಾರಗಳ ಕುರಿತು ಚರ್ಚೆ ನಡೆಸಲು ಬಿಜೆಪಿಯ ಹಿರಿಯ ನಾಯಕರ ಸಭೆ ದೆಹಲಿಯಲ್ಲಿ ನಡೆಯಿತು. ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, ಅಶ್ವಿನಿ ವೈಷ್ಣವ್, ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾಸ್ ಶರ್ಮಾ, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಕ್ಲಸ್ಟರ್ ಮಾದರಿಯಲ್ಲಿ ಲೋಕಸಭಾ ಕ್ಷೇತ್ರಗಳನ್ನು ವಿಭಾಗ ಮಾಡಿಕೊಂಡು ಕಾರ್ಯತಂತ್ರ ರೂಪಿಸಲು ಹಿಂದೆ ನಿರ್ಧರಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಚಾರವನ್ನು ಹೇಗೆ ನಡೆಸಬೇಕು? ಎಂದು ಸಹ ಯೋಜನೆ ರೂಪಿಸಲಾಗುತ್ತಿದೆ.
ಪಕ್ಷದ ಹಿರಿಯ ನಾಯಕರು, ಕೇಂದ್ರ ಸಚಿವರ ನೇತೃತ್ವದಲ್ಲಿ ಸಮಾವೇಶ, ಜಾಥಾಗಳನ್ನು ಸಹ ನಡೆಯಲು ಬಿಜೆಪಿ ತೀರ್ಮಾನಿಸಿದೆ. ಮುಂದಿನ ಸಭೆಗಳಲ್ಲಿ ಯಾವ-ಯಾವ ರಾಜ್ಯದಲ್ಲಿ ಯಾವ ನಾಯಕರು ಸಮಾವೇಶ, ಜಾಥಾ ನಡೆಸಿ 2024ರ ಚುನಾವಣೆ ಪ್ರಚಾರ ನಡೆಸಬೇಕು ಎಂದು ತೀರ್ಮಾನ ಕೈಗೊಳ್ಳಲಾಗುತ್ತದೆ.












Click it and Unblock the Notifications