ಪ್ರೇಯಸಿಯ ತಲೆ, ಕಾಲು ಕತ್ತರಿಸಿ ಚೀಲದಲ್ಲಿ ಶವ ತುಂಬಿ ಬಿಸಾಡಿದ ಪಾಗಲ್ ಪ್ರೇಮಿ
ಉತ್ತರ ಪ್ರದೇಶ: 32 ವರ್ಷದ ಮಹಿಳಾ ಹೆಚ್‌ಆರ್ ಮ್ಯಾನೇಜರ್‌ನ್ನು ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯ ಶಿರಚ್ಛೇದನ ಮಾಡಿ, ಕಾಲುಗಳನ್ನು ಕತ್ತರಿಸಿ, ಶವವನ್ನು ಚೀಲದಲ್ಲಿ ತುಂಬಿ ಬಳಿಕ ಯಮುನಾ ನದಿಗೆ ಸಮೀಪದ ಸೇತುವೆ ಬಳಿ ಎಸೆದಿರುವ ಈ ಪ್ರಕರಣ ಬೆಚ್ಚಿಬೀಳಿಸಿದೆ. ಪಾಗಲ್ ಪ್ರೇಮಿಯೇ ಈ ಕೃತ್ಯದ ಆರೋಪಿ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಮೃತ ಮಹಿಳೆಯನ್ನು ಮಿಂಕಿ ಶರ್ಮಾ ಎಂದು ಗುರುತಿಸಲಾಗಿದೆ. ಆಕೆ ಆಗ್ರಾದ ಬಗಿಯಾ ಪ್ರದೇಶದ ನಿವಾಸಿಯಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಹೆಚ್‌ಆರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಿಂಕಿ, ಸಂಜಯ್ ಪ್ಲೇಸ್‌ನಲ್ಲಿರುವ ಅದೇ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ವಿನಯ್ ಸಿಂಗ್ (30) ಎಂಬ ಯುವಕನೊಂದಿಗೆ ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ಪೊಲೀಸರ ಪ್ರಕಾರ, ಮಿಂಕಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಇಬ್ಬರ ನಡುವೆ ಇತ್ತೀಚೆಗೆ ಪದೇ ಪದೇ ಜಗಳಗಳು ನಡೆಯುತ್ತಿದ್ದವು. ಇದೇ ಕಾರಣದಿಂದ ಆರೋಪಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.

ಜನವರಿ 23ರಂದು ಮಿಂಕಿ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದರು. ಆದರೆ ರಾತ್ರಿ 8 ಗಂಟೆಯಾದರೂ ಮನೆಗೆ ಮರಳದೇ ಇದ್ದ ಕಾರಣ ಕುಟುಂಬದವರು ಆತಂಕಗೊಂಡರು. ತಂದೆ ಹಾಗೂ ಸಹೋದರರು ಆಕೆಯ ಕಚೇರಿಗೆ ತೆರಳಿದಾಗ ಅದು ಬಂದ್ ಆಗಿತ್ತು. ಬಳಿಕ ಅವರು ರಾತ್ರಿ 10 ಗಂಟೆ ಸುಮಾರಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಮರುದಿನ ಬೆಳಿಗ್ಗೆ ಎತ್ಮಾದುಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಜವಾಹರ್ ಸೇತುವೆ ಬಳಿ ಚೀಲವೊಂದು ಅನುಮಾನಾಸ್ಪದವಾಗಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚೀಲ ತೆರೆಯುತ್ತಿದ್ದಂತೆ, ಮಹಿಳೆಯೊಬ್ಬರ ಶಿರವಿಲ್ಲದ ಶವ ಪತ್ತೆಯಾಯಿತು.
ನೇಲ್ ಪಾಲಿಷ್ ಸಹಾಯದಿಂದ ಶವದ ಗುರುತು ಪತ್ತೆ
ಆರಂಭದಲ್ಲಿ ಶವದ ಗುರುತು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಆದರೆ ಮೃತಳ ಕೈಗಳಲ್ಲಿ ಇದ್ದ ಬಂಗಾರದ ಬಣ್ಣದ ನೇಲ್ ಪಾಲಿಷ್ ಗಮನಕ್ಕೆ ಬಂದಿತು. ಬಳಿಕ ಪೊಲೀಸರು ಮಿಂಕಿಯ ಮನೆಗೆ ತೆರಳಿದಾಗ, ಆಕೆಯ ಕೊಠಡಿಯಲ್ಲಿ ಅದೇ ಬಣ್ಣದ ನೇಲ್ ಪಾಲಿಷ್ ಬಾಟಲ್ ಪತ್ತೆಯಾದ ಕಾರಣ ಶವ ಅವರದ್ದೇ ಎಂದು ದೃಢಪಟ್ಟಿತು ಎಂದು ವಿವರಿಸಿದ್ದಾರೆ.
ಪೊಲೀಸರು ಮಿಂಕಿ ಕೆಲಸ ಮಾಡುತ್ತಿದ್ದ ಕಚೇರಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಆರೋಪಿ ವಿನಯ್ ಸಿಂಗ್ ಚೀಲವನ್ನು ಎಳೆದುಕೊಂಡು ಹೋಗುತ್ತಿರುವುದು ಹಾಗೂ ಮಿಂಕಿಯ ಸ್ಕೂಟರ್‌ನಲ್ಲೇ ಅದನ್ನು ಸಾಗಿಸುತ್ತಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಎಂಜಿ ರಸ್ತೆ ಹಾಗೂ ಹೆದ್ದಾರಿಯಲ್ಲಿನ ಕ್ಯಾಮೆರಾಗಳಲ್ಲೂ ಇದೇ ದೃಶ್ಯಗಳು ಪತ್ತೆಯಾದವು. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ವಿನಯ್ ಸಿಂಗ್‌ನನ್ನು ಬಂಧಿಸಿದ್ದು, ವಿಚಾರಣೆ ವೇಳೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಪ್ರೇಯಸಿಯ ಸ್ಕೂಟಿಯಲ್ಲೇ ಶವ ಸಾಗಾಟ
ಪೊಲೀಸರ ಹೇಳುವಂತೆ ಜನವರಿ 23ರಂದು ವಿನಯ್ ಮಿಂಕಿಯನ್ನು ಕಚೇರಿಗೆ ಕರೆಸಿಕೊಂಡಿದ್ದ. ಅಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಆಕ್ರೋಶಗೊಂಡ ಆರೋಪಿ ಚಾಕುವಿನಿಂದ ಮಿಂಕಿಯ ಕುತ್ತಿಗೆಗೆ ಮಾರಕವಾಗಿ ಇರಿದು ಕೊಲೆ ಮಾಡಿದ್ದ. ಬಳಿಕ ಶವವನ್ನು ತುಂಡರಿಸಿ, ಶಿರ ಹಾಗೂ ಕಾಲುಗಳನ್ನು ಬೇರ್ಪಡಿಸಿದ್ದ. ಸಾಕ್ಷ್ಯ ನಾಶ ಮಾಡಲು ಕಚೇರಿಯನ್ನು ಫಿನೈಲ್ ಬಳಸಿ ಸ್ವಚ್ಛಗೊಳಿಸಿದ್ದ. ಶವವನ್ನು ಚೀಲದಲ್ಲಿ ತುಂಬಿ ಮಿಂಕಿಯ ಸ್ಕೂಟರ್‌ನಲ್ಲಿ ಜವಾಹರ್ ಸೇತುವೆ ಬಳಿ ಕೊಂಡೊಯ್ದಿದ್ದ.
ಬಳಿಕ ಯಮುನಾ ನದಿಗೆ ಎಸೆಯಲು ಯತ್ನಿಸಿದ್ದು, ತೂಕ ಹೆಚ್ಚಾಗಿದ್ದ ಕಾರಣ ಸೇತುವೆ ಬಳಿಯೇ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ಆರೋಪಿಯು ಮೃತಳ ಶಿರ, ಮೊಬೈಲ್ ಫೋನ್, ಬಟ್ಟೆ ಹಾಗೂ ಬ್ಯಾಗ್‌ನ್ನು ಡ್ರೈನೇಜ್ ಬಳಿ ಎಸೆದಿರುವುದಾಗಿ ಹೇಳಿದ್ದಾನೆ. ಇದೀಗ ಮಿಂಕಿಯ ಶಿರವನ್ನು ಪತ್ತೆಹಚ್ಚುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications