Agniveer recruitment: ಗಮನಿಸಿ, ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ
ಭಾರತೀಯ ಸೇನೆಯು ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ಘೋಷಿಸಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ.
ನವದೆಹಲಿ, ಫೆಬ್ರವರಿ. 05: ಸೇನೆಗೆ ಸೇರಲು ಬಯಸುವ ಯುವ ಸಮುದಾಯಕ್ಕೆ ಅಗ್ನೀಪಥ ಒಂದು ವೇದಿಕೆಯಾಗಿದ್ದು, ಕೋಟ್ಯಾಂತರ ಜನ ಈ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇದರ ನಡುವೆ ಸೈನ್ಯವು ಅಗ್ನಿವೀರ್‌ಗಳಿಗೆ ತನ್ನ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ಘೋಷಿಸಿದೆ.
ಇನ್ನು ಮುಂದೆ ಸೇನಾ ಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳು ಮೊದಲು ನಾಮನಿರ್ದೇಶಿತ ಕೇಂದ್ರಗಳಲ್ಲಿ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) ತೆಗೆದುಕೊಳ್ಳಬೇಕಾಗುತ್ತದೆ. ಪರೀಕ್ಷೆಯ ನಂತರ ಆಯ್ಕೆಗಾಗಿ ನಡೆಯುವ ನೇಮಕಾತಿ ರ್‍ಯಾಲಿಗಳ ಸಮಯದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ನಂತರ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.
ಸೇನೆಯು ವಿವಿಧ ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸೈನಿಕರ ನೇಮಕಾತಿಗಾಗಿ ಮೂರು ಹಂತಗಳನ್ನು ವಿವರಿಸಲಾಗಿದೆ.

ಈ ಹಿಂದೆ, ಅಗ್ನಿವೀರ್‌ಗಳ ನೇಮಕಾತಿ ಪ್ರಕ್ರಿಯೆಯು ಬೇರೆ ರೀತಿಯಾಗಿತ್ತು. ಅಭ್ಯರ್ಥಿಗಳು ಮೊದಲು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಬೇಕಾಗಿತ್ತು, ನಂತರ ಅವರ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದ್ದವು ಕೊನೆಯ ಹಂತವಾಗಿ ಸಿಇಇಗೆ ಅರ್ಹತೆ ಪಡೆಯಬೇಕಾಗಿತ್ತು.
ಇದುವರೆಗೆ 19,000 ಅಗ್ನಿವೀರ್‌ಗಳು ಸೇನೆಗೆ ಸೇರ್ಪಡೆಗೊಂಡಿದ್ದು, ಮಾರ್ಚ್ ಮೊದಲ ವಾರದಿಂದ 21,000 ಮಂದಿ ಸೇನೆ ಸೇರಲಿದ್ದಾರೆ. 2023-24ರ ಮುಂದಿನ ನೇಮಕಾತಿಯಲ್ಲಿ ಸೇನೆಗೆ ಸೇರಲು ಸಿದ್ಧವಿರುವ ಸುಮಾರು 40,000 ಅಭ್ಯರ್ಥಿಗಳಿಗೆ ಹೊಸ ನೇಮಕಾತಿ ನಿಯಮಗಳು ಅನ್ವಯಿಸುತ್ತವೆ.
ಹಿಂದಿನ ನೇಮಕಾತಿ ರ್‍ಯಾಲಿಗಳಲ್ಲಿ ಭಾಗವಹಿಸಿದ ಅಭ್ಯರ್ಥಿಗಳ ಸಂಖ್ಯೆಯು ಚಿಕ್ಕ ಪಟ್ಟಣಗಳಲ್ಲಿ 5,000 ರಿಂದ ದೊಡ್ಡ ನಗರಗಳಲ್ಲಿ 1.5 ಲಕ್ಷದವರೆಗೆ ದಾಟಿದೆ. ಹೀಗಾಗಿ ನೇಮಕಾತಿಗಾಗಿ ಬರುವ ಸಾವಿರಾರು ಅಭ್ಯರ್ಥಿಗಳನ್ನು ನಿಭಾಯಿಸಲು ಅಗತ್ಯವಿರುವ ಆಡಳಿತಾತ್ಮಕ ವೆಚ್ಚಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಪರಿಗಣಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

"ಮುಂಚಿನ ನೇಮಕಾತಿ ಪ್ರಕ್ರಿಯೆಯಿಂದಾಗಿ ಸಾವಿರಾರು ಮಂದಿ ಬರುತ್ತಿದ್ದರು. ಇದರಿಂದಾಗಿ ವೆಚ್ಚ ಹೆಚ್ಚಾಗುತ್ತಿತ್ತು. ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕಾಗಿತ್ತು. ಗಣನೀಯವಾಗಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಬೇಕಾಗಿತ್ತು. ಈಗೀನ ಹೊಸ ನೇಮಕಾತಿ ಪ್ರಕ್ರಿಯೆಯಿಂದಾಗಿ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ. ಆಡಳಿತಾತ್ಮಕ ಮತ್ತು ವ್ಯವಸ್ಥಾಪನಾ ಹೊರೆಯನ್ನು ಸರಾಗಗೊಳಿಸುತ್ತದೆ" ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.












Click it and Unblock the Notifications