ಚುನಾವಣೆ ಗುಂಗಿನಿಂದ ಜಮೀನು ಕಡೆ ಹೊರಳಿದ ರೈತರು!
ಹೆಚ್ಚಿನ ಜನರು ಕಳೆದೊಂದು ತಿಂಗಳಿಂದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿ ಓಡಾಡಿ ಒಂದಷ್ಟು ದುಡಿದವರು ಇದೀಗ ಚುನಾವಣೆ ಮುಗಿದಿದ್ದರಿಂದ ಜಮೀನಿನತ್ತ ಮುಖ ಮಾಡಿದ್ದಾರೆ.
ಗುಂಡ್ಲುಪೇಟೆ: ಮಾಜಿ ಹೆಚ್.ಎಸ್.ಮಹದೇವಪ್ರಸಾದ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾದಲ್ಲಿಂದ ಅದರ ಗುಂಗಿನಲ್ಲೇ ಕಾಲ ಕಳೆದಿದ್ದ ಹಳ್ಳಿಗಳ ರೈತರು ಇದೀಗ ನಿರಾಳರಾಗಿದ್ದು, ತಮ್ಮ ಜಮೀನಿನತ್ತ ದೃಷ್ಠಿನೆಟ್ಟಿದ್ದು, ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ದೃಶ್ಯ ಕಂಡು ಬಂದಿದೆ.
ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗಿರುವುದು ರೈತರಲ್ಲಿ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ. ಈ ನಡುವೆ ಹೆಚ್ಚಿನ ಜನರು ಕಳೆದೊಂದು ತಿಂಗಳಿಂದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿ ಓಡಾಡಿ ಒಂದಷ್ಟು ದುಡಿದವರು ಇದೀಗ ಚುನಾವಣೆ ಮುಗಿದಿದ್ದರಿಂದ ಜಮೀನಿನತ್ತ ಮುಖ ಮಾಡಿದ್ದಾರೆ. ಆದರೆ ಇನ್ನೂ ಕೆಲವರು ಫಲಿತಾಂಶ ಬಂದು ಬಿಡಲಿ ಎಂದು ಕಾಯುತ್ತಿದ್ದಾರೆ.

ಮತದಾನದ ದಿನವೇ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಸ್ವಲ್ಪ ಮಳೆ ಬಿದ್ದಿರುವುದು ರೈತರಿಗೆ ಹುಮ್ಮಸ್ಸು ತಂದಿದೆ. ಬಿಸಿಲಿನ ಬೇಗೆಯಲ್ಲಿ ಬೆಂದವರು ನಿರಾಳರಾಗಿದ್ದಾರೆ. ಜತೆಗೆ ಜಮೀನಿಗೆ ಬೋರ್‍ವೆಲ್‍ನ ಸೌಲಭ್ಯ ಇರುವವರು ನೀರು ಹಾಯಿಸಿಕೊಂಡು ಕೃಷಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಲ್ಲಿನ ಹಳ್ಳಿಗಳಿಗೆ ಭೇಟಿ ನೀಡಿದರೆ ಹೊಲದಲ್ಲಿ ಉಳುಮೆಯಲ್ಲಿ ತೊಡಗಿರುವ ರೈತರು ಕಂಡು ಬರುತ್ತಿದ್ದಾರೆ.
ಎತ್ತುಗಳಿಗಿಂತ ಟ್ರ್ಯಾಕ್ಟರ್ ನಲ್ಲಿ ಕೃಷಿ ಚಟುವಟಿಕೆ ನಡೆಸುವವರು ಹೆಚ್ಚಾಗಿದ್ದು, ಬರದಿಂದ ತತ್ತರಿಸಿದ ಹಲವರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡಿದ್ದಾರೆ. ಹೀಗಾಗಿ ಮಳೆ ಬಂದು ಕೃಷಿ ಮಾಡುವಂತಾದರೆ ಮತ್ತೆ ಜಾನುವಾರುಗಳನ್ನು ಖರೀದಿ ಮಾಡಬೇಕಾದ ಸ್ಥಿತಿ ಬಂದೊದಗಿದೆ.
ಈಗಾಗಲೇ ತಾಲೂಕಿನ ಹಂಗಳ, ಬೇಗೂರು, ತೆರಕಣಾಂಬಿ ಮೊದಲಾದ ಕಡೆ ರೈತರಿಗೆ ಅನುಕೂಲವಾಗುವಂತೆ ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ಜೋಳ, ಸೂರ್ಯಕಾಂತಿಯನ್ನು ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ಅಲಸಂದೆ, ಕಡಲೆಕಾಯಿ ಕೃಷಿಗೆ ಜಮೀನನ್ನು ಹದಗೊಳಿಸುತ್ತಿದ್ದಾರೆ. ಈ ಬಾರಿಯಾದರೂ ಉತ್ತಮ ಮಳೆಯಾಗಿ ಬೆಳೆ ಬೆಳೆಯುವಂತಾಗಲಿ ಎಂದು ರೈತರು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.












Click it and Unblock the Notifications