ಬೆಂಕಿ ಬಿದ್ದಾಗ ಉಪಯೋಗಕ್ಕೆ ಬರಲಿಲ್ಲ ₹5.5 ಕೋಟಿ ಬೆಲೆಯ ಯಂತ್ರ!
ಭೋಪಾಲ್: ಮಧ್ಯಪ್ರದೇಶ ರಾಜಧಾನಿ ಭೀಕರ ಬೆಂಕಿ ದುರಂತದಿಂದ ಕಂಗೆಟ್ಟಿದೆ. ಉರಿ ಬಿಸಿಲಿನಲ್ಲಿ, ಭೋಪಾಲ್‌ನ ಸಾತ್ಪುರ ಭವನದಲ್ಲಿ ಸಂಭವಿಸಿದ ಬೆಂಕಿ ದುರಂತ 14 ಗಂಟೆಗಳ ನಂತರ ಹಿಡಿತಕ್ಕೆ ಸಿಕ್ಕಿದೆ. ಆದರೆ ಇದೇ ಸಂದರ್ಭದಲ್ಲಿ ಬರೋಬ್ಬರಿ ₹5.5 ಕೋಟಿ ಬೆಲೆಯ ಅಗ್ನಿಶಾಮಕ ವಾಹನ ವ್ಯರ್ಥವಾಗಿ ಬಿದ್ದಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
9 ತಿಂಗಳ ಹಿಂದೆ ಮಧ್ಯಪ್ರದೇಶ ಸರ್ಕಾರ ಬರೋಬ್ಬರಿ 5.5 ಕೋಟಿ ರೂಪಾಯಿ ಖರ್ಚು ಮಾಡಿ ಹೈಡ್ರಾಲಿಕ್ ಅಗ್ನಿಶಾಮಕ ವಾಹನ ತರಿಸಿತ್ತು. ಹೀಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದ ಈ ಅಗ್ನಿಶಾಮಕ ವಾಹನ, ಸುಮಾರು 18 ಮಹಡಿ ಕಟ್ಟದಲ್ಲಿ ಬೆಂಕಿ ಬಿದ್ದರೂ ಸುಲಭವಾಗಿ ನಂದಿಸುವ ಸಾಮರ್ಥ್ಯ ಹೊಂದಿತ್ತು. ಆದ್ರೆ ಕೇವಲ 7 ಮಹಡಿಗಳಷ್ಟು ಎತ್ತರ ಇರುವ ಸಾತ್ಪುರ ಭವನದಲ್ಲಿ ಬೆಂಕಿ ಬಿದ್ದಾಗ ಈ ಅಗ್ನಿಶಾಮಕ ವಾಹನ ಉಪಯೋಗಕ್ಕೆ ಬಂದಿಲ್ಲ! ಅಲ್ಲದೆ ದುರಂತ ಸಂಭವಿಸಿ, ಇಡೀ ಕಟ್ಟಡ ಹೊತ್ತಿ ಉರಿಯುವಾಗ ಆ ಕಟ್ಟಡದ ಪಕ್ಕದಲ್ಲೇ ಅತ್ಯಾಧುನಿಕ ಅಗ್ನಿಶಾಮಕ ಹೈಡ್ರಾಲಿಕ್ ಯಂತ್ರ ಅನಾಥವಾಗಿ ನಿಂತಿತ್ತು.

ಅಗ್ನಿಶಾಮಕ ವಾಹನಕ್ಕೆ ರಸ್ತೆ ಕೊರತೆ!
ಈ ಕುರಿತು ಎನ್‌ಡಿಟಿವಿ ವಿಸ್ತೃತ ವರದಿ ಮಾಡಿದ್ದು, ಮಧ್ಯಪ್ರದೇಶದ ಸಚಿವರು ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿರುವಂತೆ 'ಅಗ್ನಿಶಾಮಕ ಹೈಡ್ರಾಲಿಕ್ ಯಂತ್ರ, ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡದ ಬಳಿ ಹೋಗಲು ಸ್ಥಳ ಇರಲಿಲ್ಲ. ಅಲ್ಲಿ ಪಾರ್ಕಿಂಗ್ ಪ್ರದೇಶ ನಿರ್ಮಿಸಲಾಗಿತ್ತು, ಹೀಗಾಗಿ ದಾರಿ ಸಿಕ್ಕಿರಲಿಲ್ಲ. ಆದರೆ ಇಂದು ಬೆಳಗ್ಗೆಯಷ್ಟೇ ಸಿಎಂ ಶಿವರಾಜ್ ಚೌಹಾಣ್ ಅವರು ಆದೇಶ ಹೊರಡಿಸಿದ್ದು, ದೊಡ್ಡ ದೊಡ್ಡ ಕಟ್ಟಡಗಳ ಬಳಿ ಅಗ್ನಿಶಾಮಕ ವಾಹನಗಳಿಗೆ ಸ್ಥಳಾವಕಾಶ ಮಾಡಿಕೊಡಲು ತಿಳಿಸಿದ್ದಾರೆ.' ಎಂದಿದ್ದಾರೆ.
ತಂತ್ರಜ್ಞರು ಕೂಡ ಅಲ್ಲಿಗೆ ಬಂದಿಲ್ಲ?
ಹೀಗೆ ಕೋಟಿ ಕೋಟಿ ಖರ್ಚು ಮಾಡಿ ತಂದಿದ್ದ ಅಗ್ನಿಶಾಮಕ ಹೈಡ್ರಾಲಿಕ್ ಯಂತ್ರ ವ್ಯರ್ಥ ಆಗೋಗಿದೆ. ಅದರಲ್ಲೂ ಮಧ್ಯಪ್ರದೇಶ ಸರ್ಕಾದ ಪ್ರಮುಖ ಕಚೇರಿ ಇದ್ದ ಕಡೆಯೇ ಇಂಥ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಂದ್ಕಡೆ ನೂತನ ಅಗ್ನಿಶಾಮಕ ಹೈಡ್ರಾಲಿಕ್ ಯಂತ್ರ ಚಲಾಯಿಸುವ ಸಿಬ್ಬಂದಿ ಕೂಡ ಬಂದಿರಲಿಲ್ಲ ಎಂದು ವಿವರಣೆ ನೀಡಲಾಗಿದೆ. ಒಟ್ಟು 5 ಸಿಬ್ಬಂದಿಗೆ ಈ ವಿನೂತನ ಅಗ್ನಿಶಾಮಕ ಹೈಡ್ರಾಲಿಕ್ ಯಂತ್ರದ ಬಗ್ಗೆ ತಿಳಿದಿದ್ದು, ಅವರು ಕೂಡ ಅಲ್ಲಿಗೆ ಬಂದಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಈ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
3ನೇ ಮಹಡಿಯಲ್ಲಿ ಹೊತ್ತಿದ್ದ ಬೆಂಕಿ!
ಭೋಪಾಲ್‌ನ ಸಾತ್ಪುರ ಭವನದ ಆರು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ, ಅದು ತ್ವರಿತವಾಗಿ ಆರನೇ ಮಹಡಿಗೆ ವ್ಯಾಪಿಸಿತು. ಬೆಂಕಿ ನಂದಿಸಲು ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಬಂದರೂ ಬೆಂಕಿ ಹಿಡಿತಕ್ಕೆ ಸಿಕ್ಕಿರಲಿಲ್ಲ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸಂಪರ್ಕಿಸಿ ವಾಯುಪಡೆ ನೆರವು ಕೋರಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೂ ಈ ಬಗ್ಗೆ ಚರ್ಚೆ ನಡೆಸಿದ್ದು, ಪರಿಸ್ಥಿತಿಯನ್ನು ತಿಳಿಸಿ ಅಗತ್ಯ ನೆರವು ಕೋರಿದ್ದರು. ಅಂತೂ ಈ ಎಲ್ಲಾ ಪರದಾಟದ ಮಧ್ಯೆ ಸತತ 14 ಗಂಟೆಗಳ ನಂತರ ಬೆಂಕಿ ಆರಿದೆ.
ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು?
ಘಟನೆಗೆ ಎಸಿ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ನಂಬಲಾಗಿದೆ. ಆದರೆ ನಿಖರವಾದ ಕಾರಣ ನಿರ್ಧರಿಸಲು ವಿಚಾರಣೆ ನಡೆಸಲಾಗುವುದು. ಅದೃಷ್ಟವಶಾತ್ ಎಲ್ಲ ಇಲಾಖೆ ಹಾಗೂ ಸಿಬ್ಬಂದಿ & ಅಧಿಕಾರಿಗಳನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಯಾವುದೇ ಪ್ರಾಣಹಾನಿ ನಡೆದಿಲ್ಲ. ಇದು ದುರದೃಷ್ಟಕರ ಘಟನೆ ಎಂದು ಕರೆದಿರುವ ಮಧ್ಯಪ್ರದೇಶ ಆರೋಗ್ಯ ಸಚಿವ ಪ್ರಭುರಾಮ್ ಚೌಧರಿ, ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಆದರೆ ಇಷ್ಟೆಲ್ಲದರ ಮಧ್ಯೆ 5.5 ಕೋಟಿ ರೂಪಾಯಿ ಖರ್ಚು ಮಾಡಿ ತಂದ ಹೈಡ್ರಾಲಿಕ್ ಅಗ್ನಿಶಾಮಕ ಯಂತ್ರ ವ್ಯರ್ಥವಾಗಿದ್ದು ಮಾತ್ರ ವಿಪರ್ಯಾಸವೇ ಸರಿ.












Click it and Unblock the Notifications