ಕಲಬೆರಕೆ ಹಾಲು ಮಾರಾಟ: ದೂರು ದಾಖಲಾಗಿ 32 ವರ್ಷಗಳ ನಂತರ ಆರೋಪಿಗೆ ಆರು ತಿಂಗಳ ಜೈಲು ಶಿಕ್ಷೆ
ಲಕ್ನೋ, ಜನವರಿ. 20: ತಪ್ಪು ಮಾಡಿ ನ್ಯಾಯಾಲಯದಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ತಪ್ಪು ಯಾವತ್ತು ಮಾಡಿದರೂ ಮಾಡಿದ ತಪ್ಪಿಗೆ ಒಂದಲ್ಲ ಒಂದು ದಿನ ಶಿಕ್ಷೆ ಅನುಭವಿಸಲೇ ಬೇಕು ಎಂಬುದು ಹಿರಿಯರ ಮಾತು. ಇಂತಹದ್ದೇ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. 32 ವರ್ಷಗಳ ಹಿಂದೆ ದಾಖಲಾದ ದೂರಿನಲ್ಲಿ ಈಗ ಶಿಕ್ಷೆ ಪ್ರಕಟವಾಗಿದೆ.
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಕಲಬೆರಕೆ ಹಾಲು ಮಾರಾಟ ಮಾಡಿದ್ದ ವ್ಯಕ್ತಿಗೆ ಬರೋಬ್ಬರಿ ಮೂವತ್ತೆರಡು ವರ್ಷಗಳ ನಂತರ ಮುಜಾಫರ್‌ನಗರದ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಗ್ರಾಹಕರಿಗೆ ಕಲಬೆರಕೆ ಹಾಲು ಮಾರಾಟ ಪ್ರಕರಣದಲ್ಲಿ ಹರ್ಬೀರ್ ಸಿಂಗ್ ಎಂಬುವವರ ವಿರುದ್ಧ 32 ವರ್ಷಗಳ ಹಿಂದೆ ದುರು ದಾಖಲಾಗಿತ್ತು. ಈಗ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಪ್ರಶಾಂತ್ ಕುಮಾರ್ ಅವರು ಆರೋಪಿ ಹಾಲು ಮಾರಾಟಗಾರ ಹರ್ಬೀರ್ ಸಿಂಗ್ ಅವರನ್ನು ಪ್ರಕರಣದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿದ್ದಾರೆ. ಆರೋಪಿಗೆ 5,000 ರೂಪಾಯಿ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಹಾಲು ಮಾರಾಟಗಾರ ಹರ್ಬೀರ್ ಸಿಂಗ್ ಕಲಬೆರಕೆ ಹಾಲು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ ಎಂದು ಪ್ರಾಸಿಕ್ಯೂಷನ್ ಅಧಿಕಾರಿ ರಾಮಾವತಾರ್ ಸಿಂಗ್ ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ.
ಆರೋಪಿ ಹರ್ಬೀರ್ ಸಿಂಗ್ ಮಾರಾಟ ಮಾಡಿದ ಹಾಲಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರಲ್ಲಿ ಕಲಬೆರಕೆ ಕಂಡುಬಂದಿದೆ ಎಂದು ಪ್ರಾಸಿಕ್ಯೂಷನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಇಲಾಖೆಯ ಆಹಾರ ಪರೀಕ್ಷೆ ನಡೆಸುವ ಅಧಿಕಾರಿ ಸುರೇಶ್ ಚಂದ್ ಅವರು ಹಾಲು ಮಾರಾಟಗಾರ ಹರ್ಬೀರ್ ಸಿಂಗ್ ವಿರುದ್ಧ ಏಪ್ರಿಲ್ 21, 1990 ರಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು ಎಂದು ವಕೀಲ ರಾಮಾವತಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
*9 ದಿನ ಕಳೆದರೂ ಕೆಡಲಿಲ್ಲ ಹಾಲು!*
ಮತ್ತೊಂದು ಪ್ರಕರಣದಲ್ಲಿ ಕೇರಳದ ಆರ್ಯಂಕಾವಿನಲ್ಲಿ ಹೈನುಗಾರಿಕೆ ಇಲಾಖೆ 9 ದಿನಗಳ ಹಿಂದೆ ವಶಪಡಿಸಿಕೊಂಡಿದ್ದ ಹಾಲು ಇನ್ನು ಹಾಲಾಗಿಲ್ಲ ಎಂಬ ವರದಿಗಳು ಬಹಿರಂಗವಾಗಿವೆ.
ಹಾಲಿನಲ್ಲಿ ಕಲಬೆರಕೆಯಾಗಿರುವ ಕಾರಣ ಈ ಹಾಲು 9 ದಿನಗಳಾದರೂ ಹಾಳಾಗಿಲ್ಲ ಎಂದು ಹೈನುಗಾರಿಕೆ ಇಲಾಖೆಯ ಉಪನಿರ್ದೇಶಕ ರಾಮಗೋಪಾಲ್ ತಿಳಿಸಿದ್ದಾರೆ.
ಹಾಲಿನಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಅಂಶವನ್ನು ಹೈನುಗಾರಿಕೆ ಇಲಾಖೆ ಪತ್ತೆ ಹಚ್ಚಿದೆ. ಆದರೆ, ಆಹಾರ ಸುರಕ್ಷತಾ ಇಲಾಖೆ ಕಲಬೆರಕೆ ಪತ್ತೆ ಮಾಡದಿರುವುದು ಎರಡು ಇಲಾಖೆಗಳ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ.
ಆದರೂ ಬರೋಬ್ಬರಿ ಒಂಬತ್ತು ದಿನಗಳಾದರೂ ಕೆಡದ ಹಾಲನ್ನು ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ತೆಗೆದುಕೊಂಡು ಹೋಗಿ ಅಧಿಕಾರಿಗಳು ಸುರಿದಿದ್ದಾರೆ.












Click it and Unblock the Notifications