ಬೆಳಗಾವಿಯನ್ನ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ, ಗಡಿ ಕ್ಯಾತೆ ತೆಗೆದ ಶಿವಸೇನೆ ಶಾಸಕ
ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಈ ಹೊತ್ತಿನಲ್ಲೇ ಮಹಾರಾಷ್ಟ್ರ ಎಂದಿನಂತೆ ತನ್ನ ಭಂಡತನ ಪ್ರದರ್ಶಿಸುತ್ತಿದೆ. ಬೆಳಗಾವಿ ಹಾಗೂ ಮಹಾರಾಷ್ಟ್ರ ಗಡಿ ವಿವಾದ ವಿಚಾರ ಮೊದಲಿನಿಂದಲೂ ಬೂದಿ ಮುಚ್ಚಿದ ಕೆಂಡದಂತೆ ಇದ್ದು, ಇದೀಗ ಮತ್ತೆ ಕಾವು ಪಡೆದುಕೊಂಡಿದೆ.
ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಪುತ್ರ ಹಾಗೂ ಶಿವಸೇನೆ ಶಾಸಕ ಆದಿತ್ಯ ಠಾಕ್ರೆ ಮತ್ತೆ ಬೆಳಗಾವಿ ವಿಚಾರದಲ್ಲಿ ಕಿರಿಕ್ ಶುರು ಮಾಡಿದ್ದಾರೆ. ಮಹಾರಾಷ್ಟ್ರ ಹಾಗೂ ಬೆಳಗಾವಿ ಗಡಿ ವಿವಾದ ಬಗೆಹರಿಯುವವರೆಗೆ ಬೆಳಗಾವಿಯನ್ನು ಕೇಂದ್ರಾಡಳಿತದ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಬೆಳಗಾವಿ ಗಡಿ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಹಾಗೂ ಅಲ್ಲಿತನಕ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಕಿರಿಕ್ ಶುರು ಮಾಡಿದ್ದಾರೆ. ಇನ್ನು ಉದ್ಧವ್ ಠಾಕ್ರೆ ಬಂದ ಶಿವಸೇನೆಯು ಮೊದಲಿನಿಂದಲೂ ಬೆಳಗಾವಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಲೇ ಇದೆ. ಆದರೆ, ಈಗ ಠಾಕ್ರೆ ಬಣದ ಶಿವಸೇನೆಯು ಕಾಂಗ್ರೆಸ್ ಜೊತೆಯಲ್ಲೇ ಮೈತ್ರಿ ಮಾಡಿಕೊಂಡು, ಮಹಾ ವಿಕಾಸ್ ಅಘಾಡಿಯಲ್ಲಿ (ಎಂವಿಎ) ಇದೆ.
ಇನ್ನು ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಮಹಾರಾಷ್ಟ್ರದಲ್ಲಿ ಮಿತ್ರಪಕ್ಷವಾಗಿರುವ ಶಿವಸೇನೆಯ ಈ ಕಿರಿಕ್‌ಗೆ ತಕ್ಕ ಉತ್ತರ ನೀಡುತ್ತಾ? ಎನ್ನುವುದೇ ಎಲ್ಲರಲ್ಲೂ ಮೂಡಿರುವ ಪ್ರಶ್ನೆಯಾಗಿದೆ. ಗಡಿ ಹಾಗೂ ಭಾಷಾ ವಿಚಾರವಾಗಿ ಮಹಾರಾಷ್ಟ್ರ ಮೊದಲಿನಿಂದಲೂ ಕಿರಿಕ್ ಮಾಡುತ್ತಲೇ ಇದ್ದು, ಇದೀಗ ಬೆಳಗಾವಿ ಅಧಿವೇಶನದಲ್ಲೇ ಈ ವಿವಾದದ ಕಿಡಿಗೆ ತುಪ್ಪ ಹಾಕಲು ಶುರು ಮಾಡಿದೆ.
ಈ ಹಿಂದೆಯು ಮಹಾರಾಷ್ಟ್ರ ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಪ್ರದೇಶಗಳ ಮೇಲೆ ಹಿಡಿತ ಸಾಧಿಸಲು ಮುಂದಾಗಿತ್ತು. ಮಹಾರಾಷ್ಟ್ರವು ಕರ್ನಾಟಕದ 865 ಹಳ್ಳಿಗಳನ್ನು ಭಾಷೆಯ ಆಧಾರದ ಮೇಲೆ ನಮ್ಮದು ಎಂದು ಹೇಳಿಕೊಂಡಿದೆ. ಇದಕ್ಕೆ ಕರ್ನಾಟಕವೂ ತಕ್ಕ ಉತ್ತರವನ್ನು ನೀಡುತ್ತಾ ಬಂದಿದೆ. ಕಳೆದ ವರ್ಷವೂ ಈ ಗಡಿ ವಿವಾದ ಉದ್ವಿಗ್ನಗೊಂಡಿತ್ತು. ಆಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡೂ ರಾಜ್ಯಗಳ ಸಿಎಂ ಜೊತೆ ಸಭೆ ನಡೆಸಿದ್ದರು. ಸುಪ್ರೀಂಕೋರ್ಟ್ ಈ ವಿವಾದವನ್ನು ಬಗೆಹರಿಸುವವರೆಗೆ ಶಾಂತಿಯಿಂದಿರಿ ಎಂದು ಅಮಿತ್ ಶಾ ಸಲಹೆ ನೀಡಿದ್ದರು.

ಎಂಇಎಸ್‌ನಿಂದಲೂ ಪುಂಡಾಟ!
ಪ್ರತಿ ವರ್ಷ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕ್ಯಾತೆ ತೆಗೆಯುವುದನ್ನೇ ರೂಢಿ ಮಾಡಿಕೊಂಡಿದೆ. ಅದರಂತೆ ಈ ಬಾರಿಯೂ ಬೆಳಗಾವಿಯಲ್ಲಿ ಮಹಾಮೇಳಾವ್ ನಡೆಸುತ್ತಿದ್ದ ಎಂಇಎಸ್ ಸಂಘಟನೆಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂಇಎಸ್‌ನವರು ಸಂಭಾಜಿ ವೃತ್ತದ ಬಳಿ ಮಹಾಮೇಳಾವ್ ನಡೆಸುತ್ತಿದ್ದರು. ಇನ್ನು ಅಧಿವೇಶನ ನಡೆಯುತ್ತಿರುವ ಕಾರಣ ಯಾವುದೇ ಪ್ರತಿಭಟನೆಗಳಿಗೆ ಅವಕಾಶ ಇಲ್ಲದಿರುವುದರಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಅವರು ಈಗಾಗಲೇ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಡಿಸೆಂಬರ್ 9ರಿಂದ 20 ರವರೆಗೆ ಇಲ್ಲಿ ನಾಲ್ಕು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಹಾಗಾಗಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸ ಬೆಳಗಾವಿಯಲ್ಲಿ ನಡೆಯುತ್ತಿದೆ.












Click it and Unblock the Notifications