Khushboo Sundar Arrested: ತಮಿಳುನಾಡಿನಲ್ಲಿ ನಟಿ ಖುಷ್ಬೂ ಸುಂದರ್ ಅರೆಸ್ಟ್, ಅಣ್ಣಾಮಲೈ ಕೆಂಡಾಮಂಡಲ!
ನಟಿ ಖುಷ್ಬೂ ಸುಂದರ್ ಅವರನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಮಿಂಚಿರುವ ಹಾಗೂ ಇದೀಗ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಖುಷ್ಬೂ ಸುಂದರ್ ಅವರ ಬಂಧನವಾಗಿದೆ. ಖುಷ್ಬೂ ಅವರ ಬಂಧನಕ್ಕೆ ಸಂಬಂಧಿಸಿದಂತೆ ಭಾರೀ ವಿರೋಧ ವ್ಯಕ್ತವಾಗಿದೆ. ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಆಡಳಿತ ರೂಢ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧಿಕಾರ ಅವಧಿಯಲ್ಲಿ ದಬ್ಬಾಳಿ ಹಾಗೂ ದೌರ್ಜನ್ಯ ಹೆಚ್ಚಾಗಿದೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ. ಹಾಗಾದರೆ ತಮಿಳುನಾಡಿನಲ್ಲಿ ಈ ರೀತಿ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಕಾರಣವೇನು, ಖುಷ್ಬೂ ಅವರ ಬಂಧನಕ್ಕೆ ಕಾರಣವೇನು ಎನ್ನುವುದನ್ನು ನೋಡೋಣ...
ನಟಿ ಖುಷ್ಬೂ ಅವರನ್ನು ಸೋಮವಾರ (ಡಿಸೆಂಬರ್ 3) ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಖುಷ್ಬೂ ಸುಂದರ್ ಅವರು ಬಿಜೆಪಿ ನಾಯಕಿಯೂ ಆಗಿದ್ದಾರೆ. ತಮಿಳುನಾಡಿನ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆದಿದೆ. ತಮಿಳುನಾಡಿನಲ್ಲಿ ಬಿಜೆಪಿಯಿಂದ ಜಸ್ಟಿಸ್ ರ್‍ಯಾಲಿ ಎಂದು ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಪ್ರತಿಭಟನೆಯ ವೇಳೆ ಖುಷ್ಬೂ ಸುಂದರ್ ಸೇರಿದಂತೆ ಹಲವು ಮಹಿಳಾ ನಾಯಕಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನುಮತಿ ಪಡೆದುಕೊಳ್ಳದೆ ಪ್ರತಿಭಟನೆ ನಡೆಸಿದ ಆರೋಪ ಇವರ ಮೇಲೆ ಇದೆ.

ಅಣ್ಣಾ ವಿಶ್ವವಿದ್ಯಾಲಯದಲ್ಲಿ ಈಚೆಗೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿ ಬಂದಿತ್ತು. ಅಲ್ಲದೆ ಆಕೆಯ ವಿಡಿಯೋಗಳನ್ನು ಮಾಡಿಕೊಂಡಿದ್ದ ಕಿಡಿಗೇಡಿಗಳು ವಿಕೃತವಾಗಿ ನಡೆಸಿಕೊಂಡಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಈ ಆರೋಪಿಗಳಿಗೂ ಆಡಳಿತ ನಡೆಸುತ್ತಿರುವ ತಮಿಳುನಾಡಿನ ಡಿಎಂಕೆ ಪಕ್ಷಕ್ಕೂ ಸಂಬಂಧವಿದೆ ಎನ್ನುವ ಫೋಟೋಗಳು ವೈರಲ್ ಆದ ಮೇಲೆ ಈ ವಿಚಾರ ತೀವ್ರ ಚರ್ಚೆ ಹಾಗೂ ವಿರೋಧಕ್ಕೆ ಕಾರಣವಾಯಿತು. ಇದರ ಬೆನ್ನಲ್ಲೇ ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ತಮಿಳುನಾಡಿನಲ್ಲಿ ಸರಣಿ ಪ್ರತಿಭಟನೆಗಳನ್ನು ನಡೆಸುತ್ತಿವೆ.
ಅಣ್ಣಾಮಲೈ ಆಕ್ರೋಶ: ತಮಿಳುನಾಡಿನ ಸರ್ಕಾರದ ವಿರುದ್ಧ ಕೆ. ಅಣ್ಣಾಮಲೈ ಅವರು ಮತ್ತೊಮ್ಮೆ ಗುಡುಗಿದ್ದಾರೆ. ರಾಜ್ಯದಲ್ಲಿ ಡಿಎಂಕೆ ಪಕ್ಷದ ಕಾರ್ಯಕರ್ತರ ಹೆಸರಿನಲ್ಲಿ ಕೆಲವು ಗುಂಡಾಗಳು, ಲೈಂಗಿಕ ದೌರ್ಜನ್ಯ ಎಸಗುವವರು ಹಾಗೂ ರೌಡಿ ಶೀಟರ್‌ಗಳು ಸುತ್ತುತ್ತಿದ್ದಾರೆ. ಆದರೆ ಬಿಜೆಪಿಯು ತಮಿಳುನಾಡಿನ ಜನರ ಪರವಾಗಿ ಪ್ರತಿಭಟನೆ ನಡೆಸುತ್ತಿದೆ. ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಆಡಳಿತ ಪಕ್ಷ ಮಾಡುತ್ತಿದೆ. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ಡಿಎಂಕೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮುಂದುವರಿದು ಡಿಎಂಕೆ ಪಕ್ಷವು ಅಪರಾಧಿಗಳಿಗೆ ರಕ್ಷಣೆ ಕೊಡುವ ಕೆಲಸವನ್ನು ಮಾಡುತ್ತಿದೆ. ಆದರೆ ಡಿಎಂಕೆ ಪಕ್ಷದ ಅಕ್ರಮಗಳು ಹಾಗೂ ತಪ್ಪುಗಳನ್ನು ಪ್ರಶ್ನೆ ಮಾಡುವವರ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುತ್ತಿದೆ ಎಂದು ಅವರು ದೂರಿದ್ದಾರೆ. ಇನ್ನು ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರ ಬಂಧನವು ತಮಿಳುನಾಡಿನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.












Click it and Unblock the Notifications