ರೀಲ್‌ನಲ್ಲಿ ಕೇಸರಿ ಧ್ವಜಕ್ಕೆ ಅವಮಾನ ಆರೋಪ: ತೆಲಂಗಾಣ ಮುಸ್ಲಿಂ ವ್ಯಕ್ತಿಗೆ ಬೆತ್ತಲೆಗೊಳಿಸಿ ಮೆರವಣಿಗೆ
ತೆಲಂಗಾಣ ಜನವರಿ 25: ಮುಸ್ಲಿಂ ವ್ಯಕ್ತಿಯೊಬ್ಬ ರೀಲ್‌ನಲ್ಲಿ ಕೇಸರಿ ಧ್ವಜವನ್ನು ಅವಮಾನಿಸಿದ್ದಾನೆಂದು ಆರೋಪಿಸಿ ಆತನಿಗೆ ಥಳಿಸಿ, ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಸಂಗಾರೆಡ್ಡಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಕೇಸರಿ ಧ್ವಜವನ್ನು ಅವಮಾನಿಸುವ ರೀಲ್ ಅನ್ನು ಅಪ್‌ಲೋಡ್ ಮಾಡಿದ ನಂತರ ಗುಂಪೊಂದು ಆತನನ್ನು ಥಳಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದೆ. ರೀಲ್‌ನಲ್ಲಿ ಮುಸ್ಲಿಂ ಯುವಕ ಕೇಸರಿ ಧ್ವಜವನ್ನು ಹಿಡಿದಿದ್ದು ಅದರ ಮೇಲೆ ಹಿಂದೂ ಧಾರ್ಮಿಕ ಚಿಹ್ನೆ 'ಓಂ' ಎಂದು ಬರೆಯಲಾಗಿದೆ. ಅವನ ಪ್ಯಾಂಟ್‌ನೊಳಗೆ ಅವಮಾನಕರ ರೀತಿಯಲ್ಲಿ ಅದನ್ನು ಇಟ್ಟುಕೊಳ್ಳುತ್ತಾನೆ.

ರೀಲ್‌ನಿಂದ ಕೋಪಗೊಂಡ ಜನರು ಮೇದಕ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಅವರನ್ನು ಕಂಡು ಥಳಿಸಿದ್ದಾರೆ. ಇದನ್ನು ವಿಡಿಯೋ ಕೂಡ ಮಾಡಲಾಗಿದೆ. ವೀಡಿಯೋದಲ್ಲಿ ಗುಂಪು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಾ ಮುಸ್ಲಿಂ ಯುವಕನನ್ನು ಥಳಿಸಿ, ಆತನನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಮತ್ತು ಅವನ ಖಾಸಗಿ ಅಂಗಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಯ ವಿರುದ್ಧ ಗ್ರಾಮಸ್ಥರು ದೂರು ದಾಖಲಿಸಿದ್ದರು. ಆತನ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 153(ಎ), 295-ಎ, 505(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನ್ನ ಮೇಲೆ ಹಲ್ಲೆ ನಡೆಸಿದ ಗ್ರಾಮಸ್ಥರ ವಿರುದ್ಧ ಮುಸ್ಲಿಂ ಯುವಕ ದೂರು ದಾಖಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳೀಯರ ವಿರುದ್ಧ ಐಪಿಸಿ ಸೆಕ್ಷನ್ 341, 323, 505(2), ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಕರ್ನಾಟದ ರಾಯಚೂರಿನಲ್ಲಿ ಇಂಥಹದ್ದೇ ಘಟನೆ
ರಾಮ ಮಂದಿರ ಬಗ್ಗೆ ಅವಹೇಳನ ಸ್ಟೇಟಸ್ ಹಾಕಿಕೊಂಡ ಯುವಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರಿಂದ ಪೊಲೀಸ್ ಠಾಣೆ ಮುಂದೆ ಭಜನೆ ಮಾಡಿದ ಘಟನೆ ಬುಧವಾರ ಕರ್ನಾಟಕದ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಗಬ್ಬೂರಿನಲ್ಲಿ ನಡೆದಿದೆ.

ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಯುವಕ ಸೈಯದ್ ಇಸಾರ್ ನಿಂದ ಈ ಕೃತ್ಯ ನಡೆದಿದೆ. ಈತ ರಾಮ ಮಂದಿರ ಮೇಲೆ ಪವರ್ ಆಫ್ ಇಸ್ಲಾಂ ಎಂದು ಬರಹವನ್ನು ಎಡಿಟ್ ಮಾಡಿದ್ದಾನೆ. ಬಳಿಕ ವಾಟ್ಸಾಪ್, ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ವೀಡಿಯೋ ಹರಿಬಿಟ್ಟಿದ್ದಾನೆ. ವಿಡಿಯೋ ವೈರಲ್ ಆದ ನಂತರ ಸ್ಟೇಟಸ್ ಡಿಲೀಟ್ ಮಾಡಿದ್ದಾನೆ. ಕೆರಳಿದ ಹಿಂದೂ ಕಾರ್ಯಕರ್ತರು ಗಬ್ಬೂರು ಠಾಣೆ ಮುಂದೆ ಭಜನೆ ಮಾಡಿ ಆಕ್ರೋಶಗೊಂಡರು.
ಅಯೋಧ್ಯದಲ್ಲಿ ರಾಮಮಂದಿರ ಉದ್ಘಾಟನೆಯೊಂದಿದೆ. ಸೈಯದ್ ಇಸಾರ್ ಎಂಬ ಮುಸ್ಲಿಂ ಯುವಕ ಲೋಕಾರ್ಪಣೆಯಾದ ರಾಮಮಂದಿರ ಮೇಲೆ ಪಾಕಿಸ್ತಾನ ಧ್ವಜ ಹಾರಾಡುವ ಸ್ಟೇಟಸ್ ಹಾಕಿಕೊಂಡಿದ್ದಾನೆ. ಪಾಕಿಸ್ತಾನ ಧ್ವಜ ಎಡಿಟ್ ಮಾಡಿ ಸ್ಟೇಟಸ್ ಹಾಕಿ ಕೋಮುಸೌಹಾರ್ದತೆ ಕದಡುವ ಯತ್ನ ಮಾಡಿದ್ದಾನೆ. ಈತನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆಯ ಮುಂದೆ ಹಿಂದೂ ಕಾರ್ಯಕರ್ತರು ಭಜನೆ ಮಾಡಿದರು.
ಪರಸ್ಥಿತಿ ಗಂಭೀರತೆ ಪಡೆಯುತ್ತಿದ್ದಂತೆ ಯುವಕ ಸೈಯದ್ ಇಸಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications