ಅತ್ಯಾಚಾರ ಆರೋಪಿ ನಾರಾಯಣ ಸಾಯಿ ಬಂಧನ
ನವದೆಹಲಿ, ಡಿ.3: ಅಪ್ರಾಪ್ತ ವಯಸ್ಸಿನ ಆಶ್ರಮವಾಸಿ ಬಾಲಕಿ ಹಾಗೂ ಈ ಮೊದಲು ಆಶ್ರಮದಲ್ಲಿದ್ದ ಸಹೋದರಿಯರಿಬ್ಬರಲ್ಲಿ ಒಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ನಾರಾಯಣ ಸಾಯಿ ಅವರನ್ನು ಪಂಜಾಬ್-ಹರ್ಯಾಣ ಗಡಿಭಾಗದಲ್ಲಿ ಬಂಧಿಸಲಾಗಿದೆ.
ಆತ್ಯಾಚರ ಆರೋಪದ ಮೇಲೆ ಜೈಲುವಾಸಿಯಾಗಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂಬಾಪು ಪುತ್ರ ಆರೋಪಿ ನಾರಾಯಣ್ ಸಾಯಿ ಸುಮಾರು 58 ದಿನಗಳಿಂದ ನಾಪತ್ತೆಯಾಗಿದ್ದರು.ಜೋಧಪುರದ ನ್ಯಾಯಾಲಯ ಇತ್ತೀಚೆಗೆ ಸಾಯಿ ಅವರನ್ನು ಘೋಷಿತ ಪಲಾಯನಗಾರ ಎಂದು ಘೋಷಿಸಿತ್ತು.
ಗುಜರಾತ್ ಹಾಗೂ ದೆಹಲಿ ಪೊಲೀಸರು ಮಂಗಳವಾರ ತಡರಾತ್ರಿ ಪಂಜಾಬ್-ಹರ್ಯಾಣ ಗಡಿಭಾಗದಲ್ಲಿ ನೆಲೆಸಿದ್ದ ನಾರಾಯಣ ಸಾಯಿ ಅವರನ್ನು ಸೆರೆ ಹಿಡಿದಿದ್ದಾರೆ. ನಾರಾಯಣ ಸಾಯಿ ಮೇಲೆ ಸಿಆರ್ ಪಿಸಿ ಸೆಕ್ಷನ್ 70 ರ ಅನ್ವಯ ಅಕ್ಟೋಬರ್ 28ರಂದು ಎಫ್ ಐಆರ್ ದಾಖಲಾಗಿದೆ.

ಘೋಷಿತ ಪಲಾಯನಗಾರ ಎಂದು ಪ್ರಕಟಿಸಿದ 30 ದಿನಗಳೊಳಗಾಗಿ ತನಿಖಾಧಿಕಾರಿಗಳು ಅಥವಾ ನ್ಯಾಯಾಲಯದ ಎದುರು ಹಾಜರಾಗಬೇಕು ಎಂದು ನ್ಯಾಯಾಧೀಶರು ಸಾಯಿಗೆ ನಿರ್ದೇಶನ ನೀಡಿದ್ದಾರೆ.
ಒಂದು ವೇಳೆ ನಾರಾಯಣ್ ಸಾಯಿ ಅಥವಾ ಯಾವುದೇ ಘೋಷಿತ ಪಲಾಯನಗಾರರು 30 ದಿನಗಳೊಳಗೆ ನ್ಯಾಯಾಲಯಕ್ಕೆ ಶರಣಾಗತರಾಗದಿದ್ದರೆ ಸಿಆರ್ ಪಿಎಫ್ 83ರ ಅಡಿ ನ್ಯಾಯಾಲಯ ಅಂಥ ಆರೋಪಿಯ ವೈಯಕ್ತಿಕ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವಿರುತ್ತದೆ.
ಅಕ್ಟೋಬರ್ 6ರಂದು ಸಾಯಿ ವಿರುದ್ಧ ಪ್ರಕರಣ ದಾಖಲಾದ ಬಳಿಕ ಮರುದಿನವೇ ಪೊಲೀಸರು ಆರೋಪಿಗೆ ಲುಕ್‌ಔಟ್ ನೋಟಿಸ್ ನೀಡಿದ್ದು, ಅವನು ದೇಶ ಬಿಟ್ಟು ಹೋಗುವಂತಿಲ್ಲ. ಅಪ್ಪ ಅಸಾರಾಂ ಹಾಗೂ ಮಗ ಸಾಯಿ ವಿರುದ್ಧ ಪೊಲೀಸರು ಅತ್ಯಾಚಾರ ಆರೋಪದ ಕೇಸು ದಾಖಲಿಸಿದ್ದರು
ಆಶ್ರಮದಲ್ಲಿದ್ದ 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ದೇವಮಾನನನ್ನು ಕಳೆದ ಆಗಸ್ಟ್ ನಲ್ಲೇ ಜೈಲಿಗೆ ಹಾಕಲಾಗಿದೆ. ನಂತರ ಈ ಹಿಂದೆ 2002-05ರಲ್ಲಿ ಆಶ್ರಮದಲ್ಲಿದ್ದ ತಮ್ಮ ಮೇಲೆ ಅಸಾರಾಂ ಹಾಗೂ ಮಗ ನಾರಾಯಣ್ ಸಾಯಿ ಅತ್ಯಾಚಾರ ಎಸಗಿದ್ದರು ಎಂದು ಅಹ್ಮದಾಬಾದ್ ನಿವಾಸಿಗಳಾಗಿರುವ ಸಹೋದರಿಯರಿಬ್ಬರು ಅ.6ರಂದು ಕೇಸು ದಾಖಲಿಸಿದ್ದರು. ನಾರಾಯಣ್ ಸಾಯಿ ವಿರುದ್ಧ ಸೂರತ್ ನ ಜೆಹಾಂಗೀರ್ ಪುರ್ ನಲ್ಲಿ ಕೇಸು ದಾಖಲಿಸಲಾಗಿತ್ತು.
ಕಳೆದ ವಾರ ಅಸಾರಾಂ ಹಾಗೂ ನಾರಾಯಣ ಸಾಯಿ ವಿರುದ್ಧ ಸುಮಾರು 1,011 ಪುಟಗಳಷ್ಟು ಆರೋಪಪಟ್ಟಿ[ಇದರ ವಿವರ ಇಲ್ಲಿ ಓದಿ]ಯನ್ನು ಜೋಧಪುರದ ಕೋರ್ಟಿಗೆ ಸಲ್ಲಿಸಲಾಗಿತ್ತು. 121 ದಾಖಲೆ ಪತ್ರ, ಹೇಳಿಕೆಗಳು ಹಾಗೂ 58 ಸಾಕ್ಷಿಗಳ ಹೆಸರನ್ನು ಇದರಲ್ಲಿ ನಮೂದಿಸಲಾಗಿದೆ. ಅಸಾರಾಂ ಹಾಗೂ ಇತರೆ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 342,376(ಎಫ್), 376 (ಡಿ), 354(ಎ), 506 ಹಾಗೂ 109 ಅನ್ವಯ ಪ್ರಕರಣ ದಾಖಲಿಸಲಾಗಿತ್ತು.












Click it and Unblock the Notifications