ಎಬಿಪಿ ಸಮೀಕ್ಷೆ: ಉ.ಪ್ರ.ದಲ್ಲಿ ಎನ್ ಡಿಎ ತಡೆಯಲು ಮಹಾಘಟಬಂಧನ್ ಆಗಬೇಕು
ನವದೆಹಲಿ, ನವೆಂಬರ್ 1: ಒಂದು ವೇಳೆ ಮಹಾಘಟ್ ಬಂಧನ್ ಆದರೆ ಉತ್ತರಪ್ರದೇಶ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿ ಕೂಟಕ್ಕೆ 31 ಸ್ಥಾನ, ಮಹಾ ಮೈತ್ರಿಕೂಟಕ್ಕೆ 44 ಸ್ಥಾನಗಳು ದೊರೆಯಬಹುದು ಎಂದು ಎಬಿಪಿ ನ್ಯೂಸ್ ನಡೆಸಿದ 'ದೇಶ್ ಕಾ ಮೂಡ್' ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಒಂದು ವೇಳೆ 2019ರ ಲೋಕಸಭೆ ಚುನಾವಣೆ ಎಲ್ಲ ರಾಜಕೀಯ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಉತ್ತರಪ್ರದೇಶದಲ್ಲಿ ಎನ್ ಡಿಎಗೆ 70 ಸ್ಥಾನ, ಯುಪಿಎಗೆ 2, ಸಮಾಜವಾದಿ ಪಕ್ಷಕ್ಕೆ 4 ಹಾಗೂ ಮಾಯಾವತಿ ಅವರ ಬಿಎಸ್ ಪಿ 4 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
ಇನ್ನು ಮಹಾರಾಷ್ಟ್ರದಲ್ಲಿ ಇರುವ 48 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 23, ಕಾಂಗ್ರೆಸ್ 14, ಶಿವಸೇನೆ 5 ಹಾಗೂ ಶರದ್ ಪವಾರ್ ರ ಎನ್ ಸಿಪಿ 6 ಸ್ಥಾನಗಳಲ್ಲಿ ಜಯ ಗಳಿಸಬಹುದು ಎಂದಿದ್ದು, ಇದು ಎಲ್ಲ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದರೆ ಬರಬಹುದಾದ ಫಲಿತಾಂಶ ಎನ್ನಲಾಗಿದೆ.

ಒಂದು ವೇಳೆ ಶಿವಸೇನೆಯು ಎನ್ ಡಿಎ ಮಿತ್ರಪಕ್ಷವಾಗಿ ಹಾಗೂ ಎನ್ ಸಿಪಿಯು ಯುಪಿಎ ಮಿತ್ರ ಪಕ್ಷವಾಗಿ ಕಣಕ್ಕೆ ಇಳಿದರೆ ಕ್ರಮವಾಗಿ 28 ಹಾಗೂ 20 ಸ್ಥಾನಗಳಲ್ಲಿ ಜಯ ಸಾಧಿಸಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಬಿಹಾರದಲ್ಲಿ 40 ಲೋಕಸಭಾ ಸ್ಥಾನಗಳಿವೆ. ಇವತ್ತಿಗೆ ಸಂಸತ್ ಚುನಾವಣೆ ನಡೆದರೆ ಎನ್ ಡಿಎ ಮೈತ್ರಿಕೂಟ 34 ಹಾಗೂ ಯುಪಿಎ ಮಿತ್ರ ಪಕ್ಷಗಳು 6 ಸ್ಥಾನಗಳಲ್ಲಿ ಜಯಗಳಿಸಬಹುದಾಗಿದೆ.
ಎಬಿಪಿ ನ್ಯೂಸ್ ನಿಂದ ದೇಶ್ ಕಾ ಮೂಡ್ ಸಮೀಕ್ಷೆ ನಡೆಸಲಾಗುತ್ತಿದ್ದು, ನಿರಂತರವಾಗಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಈ ಸಲ 2019ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಜನರ ಮನಸ್ಥಿತಿ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.
ಮುಂದಿನ ಲೋಕಸಭೆ ಚುನಾವಣೆಗೆ ಇನ್ನು ಆರು ತಿಂಗಳ ಸಮಯವಿದ್ದು, ರಾಜಕೀಯ ಪಕ್ಷಗಳು ಒಂದರ ಮೇಲೊಂದು ಕೆಸರೆರಚಾಟ ನಡೆಸಿವೆ.












Click it and Unblock the Notifications