Abhishek Bachchan: ಅಮಿತಾಭ್ ಬಚ್ಚನ್ ಪುತ್ರ ಚುನಾವಣೆ ಆಖಾಡಕ್ಕೆ?
ಅಲಹಾಬಾದ್: 2024ರ ಲೋಕಸಭೆ ಚುನಾವಣೆ ರಂಗು ಪಡೆದಿದೆ. ಯಾವ ಕ್ಷೇತ್ರದಿಂದ ಯಾರೆಲ್ಲಾ ಸ್ಪರ್ಧೆ ಮಾಡುತ್ತಾರೆ? ಪ್ರಧಾನಿ ಮೋದಿ ನೇತೃತ್ವದಲ್ಲಿ ಸತತ ಎರಡು ಬಾರಿ ಗೆದ್ದಿರುವ ಬಿಜೆಪಿ ಹ್ಯಾಟ್ರಿಕ್ ಗೆಲುವು ಕಾಣುತ್ತಾ? ಎಂಬ ಪ್ರಶ್ನೆಗಳ ನಡುವೆ ಈಗ ಸ್ಫೋಟಕ ಚರ್ಚೆ ಶುರುವಾಗಿದೆ. ಅದು ಏನೆಂದರೆ ಬಾಲಿವುಡ್ ಸ್ಟಾರ್, ಅಮಿತಾಭ್ ಬಚ್ಚನ್ ಪುತ್ರ ಅಭಿಷೇಕ್ ಕೂಡ ಲೋಕಸಭೆ ಚುನಾವಣೆಗೆ ಎಂಟ್ರಿ ಕೊಡ್ತಿದ್ದಾರಂತೆ!
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಲಹಾಬಾದ್ ಕ್ಷೇತ್ರದಿಂದ ಸ್ಟಾರ್ ಅಮಿತಾಭ್ ಬಚ್ಚನ್ ಪುತ್ರ ಅಭಿಷೇಕ್ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಅಲಹಾಬಾದ್ ಕ್ಷೇತ್ರದಿಂದ ಅಮಿತಾಭ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್‌ರನ್ನ ಕಣಕ್ಕಿಳಿಸಲು ಸಮಾಜವಾದಿ ಪಕ್ಷ ಸಿದ್ಧತೆ ನಡೆಸಿದೆಯಂತೆ. ಹೀಗಾಗಿಯೇ ಎಸ್‌ಪಿ ವರಿಷ್ಠರು ಅಭಿಪ್ರಾಯ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದೇ ಕೆಲಸದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಶೀಘ್ರದಲ್ಲೇ ಮುಂಬೈಗೆ ತೆರಳಿ ಅಮಿತಾಭ್ ಬಚ್ಚನ್ ಮತ್ತು ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಜೊತೆ ಚರ್ಚಿಸಬಹುದು ಎನ್ನಲಾಗಿದೆ.

ಅಪ್ಪ-ಮಗನಿಗೆ ಒಂದೇ ಕ್ಷೇತ್ರ?
ಹೌದು, ಅಕಸ್ಮಾತ್ ಎಲ್ಲಾ ಅಂದುಕೊಂಡಂತೆ ನಡೆದು ಅಭಿಷೇಕ್ ಬಚ್ಚನ್ ಅಲಹಾಬಾದ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಏಕೆಂದರೆ ಈ ಹಿಂದೆ ಅಂದ್ರೆ 1984ರಲ್ಲಿ ಇದೇ ಅಲಹಾಬಾದ್ ಕ್ಷೇತ್ರದಿಂದ ಅಮಿತಾಭ್ ಬಚ್ಚನ್ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ದರು. ಅಲ್ಲದೆ ತಮ್ಮ ಎದುರಾಳಿಯಾಗಿದ್ದ ಹೇಮಾವತಿ ನಂದನ್ ಬಹುಗುಣ ಅವರ ವಿರುದ್ಧ ಭರ್ಜರಿ ಗೆಲುವು ಕಂಡಿದ್ದರು. ಚುನಾವಣೆಯಲ್ಲಿ ಅಮಿತಾಭ್ ಶೇ.68ರಷ್ಟು ಮತಗಳನ್ನು ಪಡೆದರೆ, ಬಹುಗುಣ ಶೇ.25ರಷ್ಟು ಮತಗಳನ್ನು ಪಡೆದಿದ್ದರು. ಈ ಮೂಲಕ ಅಮಿತಾಭ್ ಬಚ್ಚನ್ ಭರ್ಜರಿ ಗೆಲುವಿನೊಂದಿಗೆ ಲೋಕಸಭೆಗೆ ಹೋಗಿದ್ದರು.
ಬಾಲಿವುಡ್ ಸ್ಟಾರ್ಸ್ ಪ್ರಚಾರ ಪಕ್ಕಾ!
ಅಷ್ಟಕ್ಕೂ ಈಗಿನ ಲೆಕ್ಕಾಚಾರದ ಪ್ರಕಾರ ಅಭಿಷೇಕ್ ಬಚ್ಚನ್ ಸ್ಪರ್ಧೆಗೆ ಎಲ್ಲಾ ಕಡೆಯಿಂದ ಬಹುತೇಕ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಾಗಿ ಅಭಿಷೇಕ್ ಬಚ್ಚನ್ ಲೋಕಸಭೆ ಅಖಾಡದಲ್ಲಿ ಅಬ್ಬರಿಸುವುದು ಗ್ಯಾರಂಟಿ ಎನ್ನಲಾಗಿದೆ. ಹಾಗೇ ಅಲಹಾಬಾದ್ ಕ್ಷೇತ್ರದಿಂದ ಈಗಾಗಲೇ ಅಭಿಷೇಕ್ ಬಚ್ಚನ್ ಅವರ ತಂದೆ ನಿಂತು ಗೆದ್ದಿದ್ದಾರೆ. ಇದೇ ಕಾರಣಕ್ಕೆ ಮಗ ಕೂಡ ಇದೇ ಜಾಗದಲ್ಲಿ ಗೆಲ್ಲುವುದು ಕಷ್ಟವಲ್ಲ ಎಂಬ ಲೆಕ್ಕಾಚಾರವಿದೆ. ಹಾಗೇ ಅಭಿಷೇಕ್ ಚುನಾವಣೆಗೆ ನಿಂತರೆ ಬಿಗ್ ಬಿ, ಜಯಾ ಬಚ್ಚನ್ ಜೊತೆಗೆ ಐಶ್ವರ್ಯ ರೈ ಬಚ್ಚನ್ ಸೇರಿದಂತೆ ಬಾಲಿವುಡ್‌ನ ತಾರೆಯರ ದಂಡೇ ಕ್ಷೇತ್ರಕ್ಕೆ ಎಂಟ್ರಿ ಕೊಡಲಿದೆ.
ಒಟ್ನಲ್ಲಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಹಾಲಿ ಸಂಸದರಾದ ಡಾ. ರೀಟಾ ಬಹುಗುಣ ಜೋಶಿಗೆ ಟಿಕೆಟ್ ಸಿಗುವುದು ಬಹುತೇಕ ಪಕ್ಕಾ. ಹೀಗೆ ಮತ್ತೊಮ್ಮೆ 1984ರ ದೃಶ್ಯ ಪ್ರಯಾಗ್‌ರಾಜ್‌ನಲ್ಲಿ ಎದುರಾಗಲಿದೆ. ಆಗ ಡಾ. ರೀಟಾ ಬಹುಗುಣ ಜೋಶಿ ಅವರ ತಂದೆ ಹೇಮಾವತಿ ನಂದನ್ ಬಹುಗುಣ ಲೋಕದಳದಿಂದ ಸ್ಪರ್ಧಿಸಿದ್ದರು. ಅಲ್ಲಿ ಅಮಿತಾಭ್ ಬಚ್ಚನ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಈ ಬಾರಿ ಡಾ.ರೀಟಾ ಬಹುಗುಣ ಜೋಶಿ ಬಿಜೆಪಿ ಅಭ್ಯರ್ಥಿಯಾದರೆ ಅಭಿಷೇಕ್ ಎಸ್‌ಪಿಯಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.












Click it and Unblock the Notifications