ರಾಹುಲ್ ಗಾಂಧಿ ಅಂಗಳದಲ್ಲಿ ಆಮ್ ಆದ್ಮಿ ಕಸಪೊರಕೆ
ಅಮೇಠಿ, ಫೆ.19: ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕ್ಷೇತ್ರವಾದ ಅಮೇಠಿಯಲ್ಲಿ ನಿನ್ನೆ ಸಂಜೆ ಕಸಪೊರಕೆ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ನಗರದ ನಾನಾ ಭಾಗಗಳಲ್ಲಿ ಮಹಾತ್ಮ ಗಾಂಧಿ ಮತ್ತು ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ವಚ್ಛಗೊಳಿಸಿ, ಹೂಹಾರ ಹಾಕಿದರು.
ಅಂದಹಾಗೆ ಕುಮಾರ್ ವಿಶ್ವಾಸ್ ಅವರು ಆಮ್ ಆದ್ಮಿ ಪಕ್ಷದ ಪರವಾಗಿ ಅಮೇಠಿಯಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಲು ನಿರ್ಧರಿಸಿದ್ದಾರೆ.

ನಾನು ಈ ಕ್ಷೇತ್ರದವನಲ್ಲ. ಮಹಾತ್ಮ ಗಾಂಧಿ, ಬಿಆರ್ ಅಂಬೇಡ್ಕರ್ ಅವರಂತಹ ಧೀಮಂತ ನಾಯಕರ ಜೀವನ/ ಉಪದೇಶಗಳು ನನ್ನ ಮೇಲೆ ಪ್ರಭಾವ ಬೀರಲಿ. ನನ್ನನ್ನು ಸನ್ಮಾರ್ಗದಲ್ಲಿ ಮುನ್ನಡೆಸಲಿ ಎಂದು ಪ್ರಾರ್ಥಿಸುವೆ ಎಂದು ಆಮ್ ಆದ್ಮಿ ಪಕ್ಷದ ಲೋಕಸಭಾ ಅಭ್ಯರ್ಥಿ ಕುಮಾರ್ ವಿಶ್ವಾಸ್ ಹೇಳಿದರು.
ಇತ್ತೀಚೆಗೆ ಅರವಿಂದ್ ಕೇಜ್ರಿವಾಲಾ ನೇತೃತ್ವದ ಆಮ್ ಆದ್ಮಿ ಪಕ್ಷವು ದಿಲ್ಲಿಯಲ್ಲಿ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಮುಂಬರುವ ಲೋಕಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು. ಅದರಲ್ಲಿ ಕುಮಾರ್ ವಿಶ್ವಾಸ್ ಅವರನ್ನು ಅಮೇಠಿ ಕ್ಷೇತ್ರದ ಅಭ್ಯರ್ಥಿ ಎಂದು ಸೂಚಿಸಲಾಗಿತ್ತು.
ಅಂದಹಾಗೆ ರಾಹುಲ್ ಗಾಂಧಿ ಅವರು ಈ ಕ್ಷೇತ್ರದ ಹಾಲಿ ಸಂಸದರು. ಕಾಂಗ್ರೆಸ್ ಮೂಲಗಳ ಈ ಬಾರಿಯೂ ರಾಹುಲ್ ಗಾಂಧಿ ಇದೇ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಹಾಗಾಗಿ ಚುನಾವಣೆಯು ರಾಹುಲ್ ವರ್ಸಸ್ ಕುಮಾರ್ ವಿಶ್ವಾಸ್ ನಡುವೆ ನೇರ ಕಾಳಗ ಎಂದು ಬಿಂಬಿಸಲಾಗಿದೆ.












Click it and Unblock the Notifications