'ಇಂಡಿಯಾ' ಒಕ್ಕೂಟದಲ್ಲಿ ಕಾಂಗ್ರೆಸ್ ಇರಬಾರದು! ಆಮ್ ಆದ್ಮಿ ಪಕ್ಷದ ಬೇಡಿಕೆ ಏನು?
ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವನ್ನು ಸೋಲಿಸಲು ಇಂಡಿಯಾ ಒಕ್ಕೂಟದ ಹೆಸರಿನಲ್ಲಿ ಕಾಂಗ್ರೆಸ್, ಎಎಪಿ ಸೇರಿದಂತೆ ಹಲವು ಪಕ್ಷಗಳು ಒಗ್ಗಟ್ಟಾಗಿದ್ದವು. ಇದೀಗ ಇಂಡಿಯಾ ಒಕ್ಕೂಟದಲ್ಲಿ ಬಿರುಕು ಮೂಡಿದ್ದು ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ದೆಹಲಿ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಎಎಪಿ ವಿರುದ್ಧ ನೀಡಿರುವ ಹೇಳಿಕೆಗೆ ಕಿಡಿ ಕಾರಿರುವ ಆಮ್ ಆದ್ಮಿ ಪಾರ್ಟಿ ನಾಯಕರು, ಅಜಯ್ ಮಾಕನ್ ವಿರುದ್ದ ಕಾಂಗ್ರೆಸ್ ಕ್ರಮ ತೆಗೆದುಕೊಳ್ಳಲದೇ ಇದ್ದರೆ ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಪಕ್ಷವನ್ನು ಹೊರಗಿಡುವಂತೆ ಮೈತ್ರಿಕೂಟದ ಪಕ್ಷಗಳನ್ನು ಕೇಳುವುದಾಗಿ ತಿಳಿಸಿದೆ.
2025ರ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾಂಗ್ರೆಸ್ ಸಹಾಯ ಮಾಡುತ್ತಿದೆ ಎಂದು ದೆಹಲಿ ಸಿಎಂ ಅತಿಶಿ ಮತ್ತು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆರೋಪಿಸಿದ್ದಾರೆ. "ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗುವಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಬಿಜೆಪಿ ಬರೆದುಕೊಟ್ಟಿರುವುದನ್ನು ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಓದುತ್ತಿದ್ದಾರೆ. ಬಿಜೆಪಿ ಸೂಚನೆ ಮೇರೆಗೆ ಎಎಪಿ ನಾಯಕರನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ." ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ದೆಹಲಿ ಕಾಂಗ್ರೆಸ್ ಅಥವಾ ಅಜಯ್ ಮಾಕೆನ್ ದೆಹಲಿಯ ಯಾವುದೇ ಬಿಜೆಪಿ ನಾಯಕನ ವಿರುದ್ಧ ಮಾತನಾಡಲ್ಲ, ರಾಷ್ಟ್ರ ವಿರೋಧಿ ಎಂದು ಕರೆದಿಲ್ಲ ಎಂದು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಎರಡೂ ಪಕ್ಷಗಳ ಮುಖಂಡರು ಇಬ್ಬರು ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದು, ಆದರೆ ಎಲ್ಲಾ ಏಳು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಚಂಡೀಗಢದಲ್ಲೂ ಕಾಂಗ್ರೆಸ್ ಪರ ಎಎಪಿ ನಾಯಕರು ಪ್ರಚಾರ ಮಾಡಿದ್ದಾರೆ. ಸಂಸತ್ತಿನಲ್ಲಿ ಆಮ್ ಆದ್ಮಿ ಪಕ್ಷ ಯಾವಾಗಲೂ ಕಾಂಗ್ರೆಸ್ ಪರವಾಗಿ ನಿಲ್ಲುತ್ತದೆ. ಆದರೆ ಅದೇ ಕಾಂಗ್ರೆಸ್ ಪಕ್ಷದ ನಾಯಕ ಕೇಜ್ರಿವಾಲ್‌ರನ್ನು ದೇಶ ವಿರೋಧಿ ಎಂದು ಕರೆಯುತ್ತಾರೆ, ಕಾಂಗ್ರೆಸ್ ಪಕ್ಷ ಅವರ ವಿರುದ್ಧ ಯಾವ ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಎಎಪಿ ಪ್ರಯತ್ನಿಸಿದೆ. ಆದರೆ ಕಾಂಗ್ರೆಸ್ ಅದಕ್ಕೆ ಒಪ್ಪಲಿಲ್ಲ, ಅದಕ್ಕೆ ನಾವು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆವು, ಆದರೆ ನಾವ್ಯಾರು ಕಾಂಗ್ರೆಸ್ ನಾಯಕರ ಪರವಾಗಿ ಕೆಟ್ಟದಾಗಿ ಮಾತನಾಡಿಲ್ಲ ಎಂದು ಸಂಜಯ್ ಸಿಂಗ್ ಹೇಳಿದರು.
ಅಜಯ್ ಮಾಕನ್ ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಅವರ ಹೇಳಿಕೆಯನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ. 24 ಗಂಟೆಗಳ ಒಳಗಾಗಿ ಕಾಂಗ್ರೆಸ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಇಲ್ಲದೇ ಇದ್ದರೆ ನಾವು ಇಂಡಿಯಾ ಒಕ್ಕೂಟದ ಪಕ್ಷಗಳನ್ನು ಸಂಪರ್ಕಿಸಿ ಕಾಂಗ್ರೆಸ್ ಪಕ್ಷವನ್ನು ಬಣದಿಂದ ತೆಗೆದುಹಾಕಲು ಮನವಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಕಾಂಗ್ರೆಸ್ ಎಎಪಿ ಮತ್ತು ಬಿಜೆಪಿಯನ್ನು ಗುರಿಯಾಗಿಸಿಕೊಂಡು 12 ಅಂಶಗಳ ಶ್ವೇತಪತ್ರವನ್ನು ಬಿಡುಗಡೆ ಮಾಡಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ್ದ ಅಜಯ್ ಮಾಕನ್, ಇಡೀ ದೇಶದಲ್ಲಿ ವಂಚನೆ ವಿಚಾರದಲ್ಲಿ ಯಾರಾದರೂ ರಾಜನಾಗಿದ್ದರೆ ಅದು ಕೇಜ್ರಿವಾಲ್ ಎಂದು ಹೇಳಿದ್ದರು.












Click it and Unblock the Notifications