ಎದೆಹಾಲುಣಿಸುವ ಪೋಸ್ ಕೊಟ್ಟ ನಟಿ ವಿರುದ್ಧ ದೂರು
ತಿರುವನಂತಪುರಂ, ಮಾರ್ಚ್ 02: ಕೇರಳದ ಮಲಯಾಳಂ ನಿಯತಕಾಲಿಕೆ ಗೃಹಲಕ್ಷ್ಮಿಯ ಮುಖಪುಟದಲ್ಲಿ ಕಾಣಿಸಿಕೊಂಡಿದ್ದ ರೂಪದರ್ಶಿ ಹಾಗೂ ಪತ್ರಿಕೆ ವಿರುದ್ಧ ದೂರು ದಾಖಲಾಗಿದೆ.
ಎದೆಹಾಲು ಉಣಿಸುವ ಪೋಸ್ ನೀಡಿದ್ದ ಗಿಲು ಜೋಸೆಫ್ ಅವರ ನೋಟ, ಭಂಗಿ ಕಾಮೋತ್ತೇಜಕವಾಗಿದೆ ಎಂದು ನಿಯತಕಾಲಿಕೆಯ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಕಾಮ ಪ್ರಚೋದಿಸುವಂಥ ಚಿತ್ರ ಬಳಸುವ ಮೂಲಕ ಸ್ತ್ರೀತನದ ಗೌರವಕ್ಕೆ ಚ್ಯುತಿ ತರಲಾಗಿದೆ ಎಂದು ಆರೋಪಿಸಲಾಗಿದೆ. ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆ, 1986ರ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಕೇರಳದ ವಕೀಲ ವಿನೋದ್ ಮ್ಯಾಥ್ಯೂ ವಿಲ್ಸನ್ ಎಂಬುವರು ದೂರು ದಾಖಲಿಸಿದ್ದಾರೆ.

ನಟಿ, ಲೇಖಕಿ ಗಿಲು ಜೋಸೆಫ್ ಅವರು ಅವಿವಾಹಿತೆಯಾಗಿದ್ದು, ಮಗುವಿಗೆ ಹಾಲುಣಿಸುವಂತೆ ಪೋಸ್ ನೀಡಿರುವುದು ಸರಿಯಲ್ಲ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಸೀರೆ, ಸಿಂಧೂರ, ತಾಳಿ ಧರಿಸಿ ಮಗುವಿಗೆ ಎದೆ ಹಾಲು ಕುಡಿಸುತ್ತಿರುವ ಚಿತ್ರದಲ್ಲಿ ಯಾವುದೇ ತಪ್ಪಿಲ್ಲ, ಇದು ತಾಯಂದಿರಿಗೆ ನೈತಿಕ ಬೆಂಬಲ ನೀಡುತ್ತಿದೆ ಎಂದು ಹಲವಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗಿಲು ಜೋಸೆಫ್, ಈ ಮುಖಪುಟ ಚಿತ್ರವನ್ನು ಅನೇಕರು ಇಷ್ಟಪಡದೆ ಇರಬಹುದು. ಆದರೆ, ಈ ಚಿತ್ರ ದೇಶದ ಎಲ್ಲ ತಾಯಿಯರಿಗೆ ನೀಡುತ್ತಿರುವ ಸಂದೇಶ. ಯಾರು ಏನೆಂದುಕೊಳ್ಳುತ್ತಾರೆ ಎಂಬ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಗುವಿಗೆ ಎದೆಹಾಲು ಉಣಿಸಿ ಎಂದಿದ್ದಾರೆ.












Click it and Unblock the Notifications