ಒಂದೇ ಕುಟುಂಬದ 9 ಮಂದಿ ಸಾವು: ಆತ್ಮಹತ್ಯೆ ಶಂಕೆ
ಮುಂಬೈ, ಜೂನ್ 20: ಒಂದೇ ಕುಟುಂಬದ 9 ಮಂದಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಎರಡು ಮನೆಯಲ್ಲಿ ಅಣ್ಣ-ತಮ್ಮಂದಿರ ಕುಟುಂಬದ 9 ಮಂದಿ ಸಾವನ್ನಪ್ಪಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.
ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ 350 ಕಿಲೋ ಮೀಟರ್ ದೂರದಲ್ಲಿರುವ ಸಾಂಗ್ಲಿ ಜಿಲ್ಲೆಯ ಮಹೈಸಾಲ್‌ನಲ್ಲಿರುವ ಮನೆಯೊಂದರಲ್ಲಿ ಒಂದೇ ಕುಟುಂಬದ 9 ಮಂದಿಯ ಮೃತದೇಹ ಪತ್ತೆಯಾಗಿವೆ.
"ನಮಗೆ ಒಂದೇ ಮನೆಯಲ್ಲಿ ಒಂಬತ್ತು ಶವಗಳು ಪತ್ತೆಯಾಗಿದೆ. ಮೂರು ಶವಗಳು ಒಂದೇ ಸ್ಥಳದಲ್ಲಿ ಕಂಡುಬಂದರೆ, ಆರು ಶವಗಳು ಮನೆಯ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿದೆ" ಎಂದು ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಗೆಡಮ್ ಹೇಳಿದ್ದಾರೆ.

ಮೃತರನ್ನು ಪೋಪಟ್ ಯಲ್ಲಪ್ಪ ವಾನ್ಮೋರೆ (52), ಸಂಗೀತಾ ಪೋಪಟ್ ವಾನ್ಮೋರೆ (48), ಅರ್ಚನಾ ಪೋಪಟ್ ವಾನ್ಮೋರೆ (30), ಶುಭಂ ಪೋಪಟ್ ವಾನ್ಮೋರೆ (28), ಮಾಣಿಕ್ ಯಲ್ಲಪ್ಪ ವ್ಯಾನ್ಮೋರೆ (49), ರೇಖಾ ಮಾಣಿಕ್ ವ್ಯಾನ್ಮೋರೆ (45), ಆದಿತ್ಯ ಮಾಣಿಕ್ ವ್ಯಾನ್ (15), ಅನಿತಾ ಮಾಣಿಕ್ ವ್ಯಾನ್ಮೋರ್ (28) ಮತ್ತು ಅಕ್ಕತೈ ವ್ಯಾನ್ಮೋರ್ (72) ಎಂದು ಗುರುತಿಸಲಾಗಿದೆ.
ಮೃತ ಮಾಣಿಕ್ ಮತ್ತು ಪೋಪಟ್ ಯಲ್ಲಪಾ ವಾನ್ಮೋರ್ ಇಬ್ಬರು ಸಹೋದರರು ಎಂದು ತಿಳಿದು ಬಂದಿದೆ. ಮಾಣಿಕ್ ಮನೆಯಲ್ಲಿ ಆತನ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ.
ಮಾಣಿಕ್ ಅಣ್ಣ, ಪೋಪಟ್ ಯಲ್ಲಪಾ ಪಶುವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಪೋಪಟ್ ಮನೆಯಲ್ಲಿ ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ.
ಇದು ಸಾಮೂಹಿಕ ಆತ್ಮಹತ್ಯೆಯೇ ಎಂಬ ಪ್ರಶ್ನೆಗೆ, ಪೊಲೀಸರು ಸ್ಥಳದಲ್ಲಿದ್ದು ಸಾವಿನ ಕಾರಣವನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು. ಮೃತರು ಕ್ರಿಮಿನಾಶಕ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಇದು ಆತ್ಮಹತ್ಯೆಯ ಪ್ರಕರಣ ಎಂದು ಶಂಕಿಸಲಾಗಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ಸಾಂಗ್ಲಿ ಜಿಲ್ಲೆಯ ಮಿರಾಲ್ ತೆಹಸಿಲ್‌ನಲ್ಲಿರುವ ಮೇಹ್ಸಾಲ್ ಪಟ್ಟಣವು 2017 ರಲ್ಲಿ ಭಾರಿ ಸುದ್ದಿಯಾಗಿತ್ತು, ಗರ್ಭಿಣಿ ಮಹಿಳೆಯ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ತ್ಯಾಜ್ಯನೀರಿನ ಹೊಳೆ ಪಕ್ಕದಲ್ಲಿ ಎಸೆದ 19 ಹೆಣ್ಣು ಭ್ರೂಣಗಳು ಪತ್ತೆಯಾಗಿದ್ದವು. ಈಗ ಅದೇ ಜಿಲ್ಲೆಯಲ್ಲಿ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿರುವುದು ದೇಶಾದ್ಯಂತ ಸುದ್ದಿಯಾಗಿದೆ. ಸಾಮೂಹಿಕ ಸಾವಿನಿಂದ ಇಡೀ ಊರಿನ ಜನ ಆಘಾತಕ್ಕೊಳಗಾಗಿದ್ದಾರೆ.












Click it and Unblock the Notifications