80th Independence Day: ಕೆಂಪು ಕೋಟೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ: ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಗೈರು!
80th Independence Day: ದೇಶದ ಪ್ರಮುಖ ವಿರೋಧ ಪಕ್ಷದ ನಡೆಯು 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಸತತ ಎರಡನೇ ವರ್ಷವೂ ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಗಸ್ಟ್ 15ರ ಶನಿವಾರ ಕೆಂಪು ಕೋಟೆಯಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥರ ಗೈರು ಹಾಜರಾತಿ ಭಾರೀ ಚರ್ಚೆಗೆ ಕಾರಣವಾಗಿದೆ. 2024ರಲ್ಲಿ, ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಕ್ಯಾಬಿನೆಟ್ ಸಚಿವ ಸ್ಥಾನಮಾನ ಹೊಂದಿರುವ ರಾಹುಲ್ ಗಾಂಧಿ, ಸಂಪ್ರದಾಯ ಮತ್ತು ಶಿಷ್ಟಾಚಾರಕ್ಕೆ ವಿರುದ್ಧವಾಗಿ ಕೆಂಪು ಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊನೆಯಿಂದ ಎರಡನೇ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು ಎನ್ನುವ ವಿಚಾರವು ಚರ್ಚೆಗೆ ಕಾರಣವಾಗಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, ಸಂಸದರಿಗೆ ಆಸನ ಹಂಚಿಕೆ ವ್ಯವಸ್ಥೆಯು ಜನರಿಗೆ ಮಾಡಿದ ಅವಮಾನ ಎಂದು ವಿರೋಧ ಪಕ್ಷ ಕರೆದಿತ್ತು ಆದರೆ ಕಾರ್ಯಕ್ರಮವನ್ನು ಆಯೋಜಿಸಿದ ರಕ್ಷಣಾ ಸಚಿವಾಲಯವು ಒಲಿಂಪಿಯನ್‌ಗಳಿಗೆ ಆವರಣದಲ್ಲಿ ಸ್ಥಳಾವಕಾಶ ಕಲ್ಪಿಸಲು ವ್ಯವಸ್ಥೆಯನ್ನು ಬದಲಾಯಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಶಿಷ್ಟಾಚಾರದ ಪ್ರಕಾರ, ವಿಧ್ಯುಕ್ತ ಕಾರ್ಯಕ್ರಮಗಳ ಸಮಯದಲ್ಲಿ ವಿರೋಧ ಪಕ್ಷದ ನಾಯಕ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ.

ಗುರುವಾರ ಕೊನೆಗೊಂಡ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವಿನ ವಾಕ್ಸಮರ ಮತ್ತಷ್ಟು ತೀವ್ರವಾಗಿತ್ತು. ಜುಲೈ 20 ರಂದು ವಿದ್ಯಾರ್ಥಿಗಳು ಸಂಸತ್ತಿನ ಚಲೋ ಮೆರವಣಿಗೆ ನಡೆಸಿದ್ದರು. ಅಂದು ಸಂಸತ್ತಿನ ಅಧಿವೇಶನ ಪ್ರಾರಂಭವಾಗಿತ್ತು. ವಿರೋಧ ಪಕ್ಷ ಮತ್ತು ಆಡಳಿತ ಪಕ್ಷ ಎರಡೂ ಅಧಿವೇಶನದ ಮೊದಲ ದಿನವಾದ ಜುಲೈ 20 ರಂದು ಸಂಸತ್ ಚಲೋ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪರಸ್ಪರ ದೋಷಿಸಿದ್ದವು.
ಪ್ರಧಾನಿ ಮೋದಿಯವರ ಸ್ವಾತಂತ್ರ್ಯ ದಿನಾಚರಣೆಯ ಉಡುಪಿನ ಬಗ್ಗೆ ಕಾಂಗ್ರೆಸ್ ಟೀಕೆ
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಧರಿಸಿದ್ದ ಉಡುಪಿನ ಬಗ್ಗೆ ಟೀಕೆ ವ್ಯಕ್ತವಾಗಿದೆ. ವಿಶೇಷವಾಗಿ ಅವರು ಧರಿಸಿದ್ದ ತ್ರಿವರ್ಣದ ಪಾಕೆಟ್ ಸ್ಕ್ವೇರ್ ಬಗ್ಗೆ ಕಾಂಗ್ರೆಸ್ ತೀವ್ರ ಟೀಕೆ ಮಾಡಿದೆ. ಅವರ ಜೇಬಿನಲ್ಲಿ ಇರಿಸಲಾಗಿದ್ದ ಉಡುಪು ಭಾರತದ ಧ್ವಜದ ಬಣ್ಣ ತಲೆಕೆಳಗಾದ ರೂಪದಲ್ಲಿತ್ತು. ಪಾಕೆಟ್ ಸ್ಕ್ವೇರ್‌ನ ಬಣ್ಣಗಳ ಕ್ರಮವು ಐರ್ಲೆಂಡ್ ಧ್ವಜವನ್ನು ಹೋಲುತ್ತದೆ ಕಾಂಗ್ರೆಸ್‌ನ ಹಲವು ನಾಯಕರು ಆರೋಪಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಈ ಬಗ್ಗೆ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಭಾರತದ ತ್ರಿವರ್ಣ ಧ್ವಜದ ಬದಲು ಐರ್ಲೆಂಡ್ ಧ್ವಜದ ಬಣ್ಣಗಳನ್ನು ಧರಿಸಿರುವಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
72,000 ಸರ್ಕಾರಿ ಹುದ್ದೆಗಳ ಭರ್ತಿ: ಸಿಎಂ ಡಿ.ಕೆ ಶಿವಕುಮಾರ್
ಕರ್ನಾಟಕದಲ್ಲಿ 72,000 ಸರ್ಕಾರಿ ಹುದ್ದೆಗಳ ಭರ್ತಿ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ. ಕರ್ನಾಟಕದ 80ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದ್ದಾರೆ. ಯುವಕರು ಉದ್ಯೋಗಿಗಳಾಗಬೇಕು, ರೈತರು ಸಮೃದ್ಧರಾಗಬೇಕು, ಮಹಿಳೆಯರು ಸ್ವಾವಲಂಬಿ ಆಗಬೇಕು, ನಮ್ಮ ಮಕ್ಕಳು ವಿದ್ಯಾವಂತರಾಗಬೇಕು, ಕಾರ್ಮಿಕರು ಗೌರವದಿಂದ ಬಾಳಬೇಕು, ಹಿರಿಯ ನಾಗರಿಕರ ಬದುಕು ಸುರಕ್ಷಿತವಾಗಿರಬೇಕು ಮತ್ತು ಪ್ರತಿಯೊಂದು ಕುಟುಂಬವೂ ಅಭಿವೃದ್ಧಿಯ ಫಲವನ್ನು ಅನುಭವಿಸಬೇಕು ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಮಧ್ಯವಯಸ್ಕ ಪೀಳಿಗೆಗೆ ಕುಟುಂಬದ ಹೊಣೆಗಾರಿಕೆ, ಮಕ್ಕಳ ಶಿಕ್ಷಣ, ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಕುಟುಂಬದ ಖರ್ಚಿನ ಒತ್ತಡ ಪ್ರಮುಖ ಪ್ರಶ್ನೆಗಳು. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು "ಉಚಿತ ಯೋಜನೆಗಳು" ಎಂದು ನೋಡದೆ, ಜನರ ಮೇಲಿನ ಹೂಡಿಕೆ ಎಂದು ಮುಖ್ಯಮಂತ್ರಿ ವ್ಯಾಖ್ಯಾನಿಸಿರುವುದು ಗಮನಾರ್ಹ. ಗೃಹಲಕ್ಷ್ಮಿ ಯೋಜನೆಯಡಿ 1.28 ಕೋಟಿ ಮಹಿಳೆಯರಿಗೆ ತಿಂಗಳಿಗೆ ರೂ. 2,000, ಗೃಹಜ್ಯೋತಿಯಡಿ 1.65 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಹಾಗೂ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದಂತಹ ಕ್ರಮಗಳನ್ನು ಕುಟುಂಬದ ಆರ್ಥಿಕ ಭದ್ರತೆಯ ಸಾಧನಗಳಾಗಿ ಎಂದಿದ್ದಾರೆ.
ಇದರ ಜೊತೆಗೆ ಆರೋಗ್ಯ, ಕುಡಿಯುವ ನೀರು, ರಸ್ತೆ, ನಗರ ಮೂಲಸೌಕರ್ಯ ಮತ್ತು ಸಾಮಾಜಿಕ ನ್ಯಾಯದ ಮೇಲಿನ ಹೂಡಿಕೆ, ಕುಟುಂಬದ ಬದುಕಿನ ಗುಣಮಟ್ಟವನ್ನು ಸುಧಾರಿಸುವ ವಿಶಾಲ ದೃಷ್ಟಿಕೋನವನ್ನು ತೋರಿಸುತ್ತದೆ. ಇಂದಿನ ಯುವ ಪೀಳಿಗೆಯ ಪ್ರಮುಖ ಪ್ರಶ್ನೆ "ನನ್ನ ಭವಿಷ್ಯ ಏನು?" ಎಂಬುದು. ಇದಕ್ಕೆ ಉತ್ತರ ನೀಡುವ ಪ್ರಯತ್ನವೇ ಭಾಷಣದ ಅತ್ಯಂತ ಮಹತ್ವದ ಭಾಗ.
"ಯುವ ಕರ್ನಾಟಕ-ನವ ಭಾರತ" ಎಂಬ ಧ್ಯೇಯವಾಕ್ಯದಿಂದ ಹಿಡಿದು "ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ", "ಯುವ ಉದ್ಯೋಗ ಸೇತು" ಮತ್ತು "ಉದ್ಯೋಗ ನಿಧಿ"ವರೆಗೆ ಉದ್ಯೋಗವನ್ನು ಸರ್ಕಾರದ ಪ್ರಮುಖ ಆದ್ಯತೆಯಾಗಿ ರೂಪಿಸಲಾಗಿದೆ. 72,000 ಸರ್ಕಾರಿ ಹುದ್ದೆಗಳ ಭರ್ತಿ, 100 ITIಗಳನ್ನು ಉದ್ಯೋಗ ಆಧಾರಿತ ಕ್ಯಾಂಪಸ್‌ಗಳಾಗಿ ಪರಿವರ್ತಿಸುವುದು, 10,000 ಯುವಕರಿಗೆ ಕೈಗಾರಿಕೆಗಳ ಸಹಯೋಗದಲ್ಲಿ ಉದ್ಯೋಗ ಕಲ್ಪಿಸುವುದು ಮತ್ತು ಹಿಂದುಳಿದ 10 ಜಿಲ್ಲೆಗಳಲ್ಲಿ ಒಂದು ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಇವೆಲ್ಲವೂ ಯುವಕರ ಆತಂಕಕ್ಕೆ ನೇರ ಉತ್ತರ ನೀಡುವ ಪ್ರಯತ್ನಗಳಾಗಿವೆ ಎಂದರು.
ನಾಲ್ಕನೇ ಪೀಳಿಗೆಗೆ AI, ಗುಣಮಟ್ಟದ ಶಿಕ್ಷಣ ಮತ್ತು ಜಾಗತಿಕ ಅವಕಾಶಗಳು
ಮಕ್ಕಳು ಮತ್ತು ಮುಂದಿನ ಪೀಳಿಗೆಗೆ ಮುಖ್ಯಮಂತ್ರಿಗಳ ಭಾಷಣ ಇನ್ನೂ ದೊಡ್ಡ ಕನಸನ್ನು ಮುಂದಿಡುತ್ತದೆ. ಆರನೇ ತರಗತಿಯಿಂದಲೇ AI ಶಿಕ್ಷಣ, "AI ಅಕ್ಷರ ಅಭಿಯಾನ", "ಕೋಡಿಂಗ್ ಗುರುಕುಲ", ಸುಮಾರು 50 ಲಕ್ಷ ವಿದ್ಯಾರ್ಥಿಗಳಿಗೆ AI ಆಧಾರಿತ ಕಲಿಕೆಯ ಅವಕಾಶ ಮತ್ತು ಜನವರಿ 2027ರ ವೇಳೆಗೆ ದೇಶದ ಪ್ರಪ್ರಥಮ ಸರ್ಕಾರಿ ಸ್ವಾಮ್ಯದ AI ವಿಶ್ವವಿದ್ಯಾಲಯ ಆರಂಭಿಸುತ್ತಿರುವುದು ಕರ್ನಾಟಕದ ಮಕ್ಕಳನ್ನು ಕೇವಲ ಇಂದಿನ ಉದ್ಯೋಗಗಳಿಗೆ ಸಿದ್ಧಪಡಿಸುವುದಲ್ಲ, ನಾಳೆಯ ಜಾಗತಿಕ ಆರ್ಥಿಕತೆಗೆ ಸಿದ್ಧಪಡಿಸುವ ಪ್ರಯತ್ನವಾಗಿದೆ ಎಂದಿದ್ದಾರೆ.


Click it and Unblock the Notifications
