ಶಾಕಿಂಗ್ ಸುದ್ದಿ: 5 ದಿನದಲ್ಲೇ 1 ಲಕ್ಷ ಕೊರೊನಾ ಸಕ್ರಿಯ ಪ್ರಕರಣ
ನವದೆಹಲಿ, ಮಾರ್ಚ್ 26: ಕೊರೊನಾವೈರಸ್ 2ನೇ ಅಲೆಯ ಹರಡುವಿಕೆ ವೇಗಕ್ಕೆ ಭಾರತಕ್ಕೆ ಭಾರತವೇ ತತ್ತರಿಸಿ ಹೋಗಿದೆ. 159 ದಿನಗಳಲ್ಲೇ ಮೊದಲ ಬಾರಿಗೆ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ಕಳೆದ 24 ಗಂಟೆಗಳಲ್ಲೇ ವರದಿಯಾಗಿವೆ.
ದೇಶಾದ್ಯಂತ ಒಂದು ದಿನದಲ್ಲೇ 59118 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಐದು ದಿನಗಳಲ್ಲೇ ಕೊವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷದಿಂದ 4 ಲಕ್ಷದ ಗಡಿ ದಾಟಿದೆ.
ಏನಿದು ಕೊರೊನಾ ಕಾಟ ತಪ್ಪಿಸಲು ಭಾರತ ಕಂಡುಕೊಂಡ ಮಾರ್ಗ?
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಆರಂಭದಿಂದ ಈವರೆಗೆ 5 ದಿನಗಳಲ್ಲಿ 1 ಲಕ್ಷ ಸಕ್ರಿಯ ಪ್ರಕರಣಗಳು ಪತ್ತೆಯಾಗಿರುವುದು ಇತಿಹಾಸದಲ್ಲೇ ಇರಲಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ-ಅಂಶಗಳೇ ಸ್ಪಷ್ಟಪಡಿಸಿವೆ.

ಗುಣಮುಖರು ಇಳಿಮುಖ, ಸೋಂಕಿತರಲ್ಲಿ ಏರಿಕೆ
ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಪ್ರತಿನಿತ್ಯ ಸೋಂಕಿತ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿ ದಾಟುತ್ತಿದೆ. 24 ಗಂಟೆಗಳಲ್ಲಿ 59118 ಜನರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,18,46,652ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 32987 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖ ಪ್ರಕರಣಗಳ ಸಂಖ್ಯೆ 1,12,64,637 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಐದು ದಿನದಲ್ಲೇ 1 ಲಕ್ಷ ಸಕ್ರಿಯ ಕೇಸ್
ಕೊರೊನಾವೈರಸ್ ಎರಡನೇ ಅಲೆಗೆ ಇಡೀ ದೇಶವೇ ತತ್ತರಿಸಿದೆ. ಸೋಂಕಿನ ಹರಡುವಿಕೆ ಪ್ರಮಾಣ ಶರವೇಗದಲ್ಲಿ ಹೆಚ್ಚುತ್ತಿದೆ. ಕಳೆದ ಐದು ದಿನಗಳಲ್ಲಿ 1 ಲಕ್ಷ ಕೊವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಐದು ದಿನಗಳ ಹಿಂದೆ 3 ಲಕ್ಷವಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಶುಕ್ರವಾರದ ಅಂಕಿ-ಸಂಖ್ಯೆಗಳ ಪ್ರಕಾರ, 4,21,066ಕ್ಕೆ ಏರಿಕೆಯಾಗಿದೆ.

ಕೊರೊನಾದಿಂದ ಪ್ರಾಣ ಬಿಟ್ಟವರು ಎಷ್ಟು ಜನ?
ದೇಶದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 257 ಮಂದಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಈವರೆಗೂ ಮಹಾಮಾರಿಗೆ ಬಲಿಯಾದವರ ಸಂಖ್ಯೆ 1,60,949 ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

ಕೊರೊನಾವೈರಸ್ ಸೋಂಕಿಗೆ ಲಸಿಕೆ
ದೇಶದಲ್ಲಿ ಈವರೆಗೂ 5,55,04,440 ಮಂದಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ.